ದರ್ಬೆ ಗಲಾಟೆಗೆ ಕೋಮು ಬಣ್ಣ ಹಚ್ಚಿದರೆ ಎಫ್‌ಐಆರ್: ಎಸ್‌ಪಿ ಅರುಣ್ ಕೆ ಎಚ್ಚರಿಕೆ

ಪುತ್ತೂರು: ಪುತ್ತೂರಿನ ದರ್ಬೆಯಲ್ಲಿ ಆ.21ರಂದು ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ಎರಡೂ ಕಡೆಯಿಂದ ಕೆಲವರನ್ನು ಬಂಧಿಸುವಂತೆ ಒತ್ತಾಯ ಕೇಳಿಬಂದಿದ್ದು, ಧರ್ಮದ ಆಧಾರದ ಮೇಲೆ ಅಥವಾ ಸಾರ್ವಜನಿಕ ಒತ್ತಡದ ಮೇಲೆ ಪ್ರಕರಣ ದಾಖಲಿಸುವುದಿಲ್ಲ, ಸಾಕ್ಷಾಧಾರದ ಆಧಾರದಲ್ಲಿ ಮಾತ್ರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ ತಿಳಿಸಿದ್ದಾರೆ.ಆ.23ರಂದು ಬೆಳಿಗ್ಗೆ ಪುತ್ತೂರು ನಗರ ಪೊಲೀಸ್‌ ಠಾಣೆಗೆ ಭೇಟಿ ನೀಡಿದ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ದರ್ಬೆ ಘಟನೆಗೆ ಸಂಬಂಧಿಸಿದ ಸಿಸಿ ಕ್ಯಾಮೆರಾ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ವಿಡಿಯೋಗಳನ್ನು ಪರಿಶೀಲಿಸಲಾಗಿದೆ. ಎರಡೂ ಕಡೆಯಿಂದ ಬಂದ ದೂರುಗಳ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಹೇಳಿದರು. ಅಂಗಡಿಯಲ್ಲಿದ್ದ ಲ್ಯಾಮಿನೇಷನ್ ಯಂತ್ರದ ತಾಂತ್ರಿಕ ಸಮಸ್ಯೆಯಿಂದ ದಾಖಲೆಯೊಂದು ಹಾನಿಗೊಳಗಾದಾಗ ವಿವಾದ ಆರಂಭವಾಗಿದೆ. ಆ ಹಂತದಲ್ಲೇ ವಿಷಯವನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಬಹುದಿತ್ತು ಅಥವಾ ಪೊಲೀಸ್ ಠಾಣೆ, ಗ್ರಾಹಕ ವೇದಿಕೆಯನ್ನು ಸಂಪರ್ಕಿಸಬಹುದಿತ್ತು. ಆದರೆ ಗ್ರಾಹಕರು ಅಂಗಡಿಯ ಕೆಲಸಗಾರನೊಂದಿಗೆ ಆಕ್ರೋಶದಿಂದ ವರ್ತಿಸಿದ್ದಾರೆ. ಅಂಗಡಿ ಮಾಲಕಿ ಅಂಜನಾ ಪೈ ಕೂಡ ಗಲಾಟೆಯಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ಸುದರ್ಶನ್ ಪೈ ಎಂಬಾತ ಮಧ್ಯಪ್ರವೇಶಿಸಿ ವಿಡಿಯೋ ಚಿತ್ರೀಕರಿಸಲು ಯತ್ನಿಸಿದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಲಭ್ಯವಿರುವ ವಿಡಿಯೋ ದೃಶ್ಯಾವಳಿಗಳು ಸ್ಪಷ್ಟ ಸಾಕ್ಷ್ಯ ಒದಗಿಸುತ್ತವೆ ಎಂದು ಅವರು ತಿಳಿಸಿದರು.ಸುದರ್ಶನ್ ಪೈ ಅವರನ್ನು ಪೊಲೀಸ್ ವಶಕ್ಕೆ ಪಡೆದ ನಂತರವೂ ಕೆಲವು ವ್ಯಕ್ತಿಗಳು ಅತಿರೇಕದಿಂದ ವರ್ತಿಸಿದ್ದಾರೆ. ಆ ಪೈಕಿ ನೌಶಾದ್ ಎಂಬಾತ ಪೊಲೀಸ್‌ ವಾಹನದೊಳಗೆ ಇಣುಕಿ ಕೃತ್ಯವೆಸಗಿರುವುದು ಕಂಡುಬಂದಿದೆ. ವಾಹನದಲ್ಲಿ ಕುಳಿತಿದ್ದ ಸುದರ್ಶನ್ ಪೈ ಅವರ ತಂದೆ ಸೇರಿದಂತೆ ಲಭ್ಯವಿರುವ ಸಾಕ್ಷ್ಯಾಧಾರಗಳಿಂದ ಸ್ಪಷ್ಟ ಚಿತ್ರಣ ಸಿಗಲಿದ್ದು, ಅದರ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಈ ಪ್ರಕರಣದಲ್ಲಿ ಭಾಗಿಯಾದ ವ್ಯಕ್ತಿಗಳ ಹಿನ್ನೆಲೆ ಬಗ್ಗೆ ಮಾತನಾಡಿದ ಅವರು, ಸುದರ್ಶನ್ ಪೈ ವಿರುದ್ಧ ಕೊಲೆ ಯತ್ನ ಮತ್ತು ಡ್ರಗ್ಸ್ ದಂಧೆಗೆ ಸಂಬಂಧಿಸಿದ ಹಳೆಯ ಪ್ರಕರಣಗಳಿವೆ. ನೌಶಾದ್‌ ಮತ್ತು ಸದಾಶಿವ ಪೈ ವಿರುದ್ಧ ರಸ್ತೆ ಜಗಳದಲ್ಲಿ ಹಲ್ಲೆ ನಡೆಸಿದ ಹಳೆಯ ಪ್ರಕರಣಗಳಿವೆ. ಗಲಾಟೆ ವೇಳೆ ಅಂಗಡಿ ಮುಂದೆ ನೆರೆದಿದ್ದ ಇತರ ಇಬ್ಬರು ವ್ಯಕ್ತಿಗಳ ಮೇಲೂ ತಲಾ ಒಂದು ಹಳೆಯ ಪ್ರಕರಣ ಇದೆ ಎಂದು ಮಾಹಿತಿ ನೀಡಿದರು. ನೌಶಾದ್‌, ನಿಯಾಜ್, ಅಂಜನಾ ಪೈ, ಸದಾಶಿವ ಪೈ ಮತ್ತಿತರರ ಬಂಧನಕ್ಕೆ ಒತ್ತಾಯಿಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಎಸ್‌ಪಿ, ಯಾವುದೇ ವ್ಯಕ್ತಿ ಅಪರಾಧ ಎಸಗಿರುವುದು ಕಂಡುಬಂದಾಗ ಧರ್ಮ, ಸಮುದಾಯವನ್ನು ಲೆಕ್ಕಿಸದೆ ಕಾನೂನು ಕ್ರಮ ಜರುಗಿಸಲಾಗುವುದು. ಬಂಧನವು ಘಟನೆಯ ಸತ್ಯಾಸತ್ಯತೆ, ಸಾಕ್ಷ್ಯಾಧಾರ ಮತ್ತು ಕಾನೂನಿನ ಅಗತ್ಯತೆಗಳನ್ನು ಆಧರಿಸಿರುತ್ತದೆ. ಸಾರ್ವಜನಿಕ ಅಥವಾ ಕೋಮು ಒತ್ತಡಕ್ಕೆ ಮಣಿದು ಯಾರನ್ನೂ ಬಂಧಿಸಲು ಸಾಧ್ಯವಿಲ್ಲ ಎಂದರು.ಘಟನೆಗೆ ಕೋಮು ಬಣ್ಣ ನೀಡಿ ಸಮುದಾಯಗಳ ನಡುವೆ ದ್ವೇಷ ಸೃಷ್ಟಿಸಲು ಯತ್ನಿಸಲಾಗುತ್ತಿದ್ದು, ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡದೆ ಶಾಂತಿ ಕಾಪಾಡಬೇಕು. ಬಂದ್‌ಗೆ ಕರೆ ನೀಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ತನಿಖೆಯ ಬಗ್ಗೆ ಸಂದೇಹವಿದ್ದವರು ಸತ್ಯಾಂಶಗಳೊಂದಿಗೆ ಬಂದು ಚರ್ಚಿಸಬಹುದು ಎಂದು ಅವರು ತಿಳಿಸಿದರು.

News Editor

Learn More →

Leave a Reply

Your email address will not be published. Required fields are marked *