ಮಂಗಳೂರು: ವೃದ್ಧೆಯೊಬ್ಬರ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ದೋಚಿದ ಪ್ರಕರಣ- ಇಬ್ಬರು ಆರೋಪಿಗಳ ಬಂಧನ

ಮಂಗಳೂರು: ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 76 ವರ್ಷದ ವೃದ್ಧೆಯೊಬ್ಬರ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ದೋಚಿದ ಪ್ರಕರಣವನ್ನು ಮಂಗಳೂರು ನಗರ ಪೊಲೀಸರು ಕೇವಲ ಮೂರು ದಿನಗಳಲ್ಲೇ ಭೇದಿಸಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ದೋಚಲಾಗಿದ್ದ ಸಂಪೂರ್ಣ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತ ಆರೋಪಿಗಳನ್ನು ಬಾಲ ಸುಬ್ರಮಣ್ಯ (49), ಉರ್ವ ಮಟದಕಣಿ ನಿವಾಸಿ ಹಾಗೂ ಶ್ಯಾಮ್ ಕುಮಾರ್ (33), ತೊಕ್ಕೊಟ್ಟು ಮೂಲದ, ಪ್ರಸ್ತುತ ಮಣ್ಣಗುಡ್ಡ ನಿವಾಸಿ ಹಾಗೂ ಆಟೋರಿಕ್ಷಾ ಮಾಲೀಕ ಎಂದು ಗುರುತಿಸಲಾಗಿದೆ.

ಆಗಸ್ಟ್ 3ರಂದು ಮಧ್ಯಾಹ್ನ ಸುಮಾರು 1.15ರ ವೇಳೆಗೆ ವೃದ್ಧ ಮಹಿಳೆ ತಮ್ಮ ಮನೆಯಲ್ಲಿದ್ದ ವೇಳೆ, ಮನೆ ಬಾಗಿಲು ತಟ್ಟಿದ ಶಬ್ದ ಕೇಳಿ ಬಾಗಿಲು ತೆರೆದಿದ್ದಾರೆ. ಈ ವೇಳೆ ಮನೆ ಬಾಡಿಗೆ ಕುರಿತು ವಿಚಾರಿಸುವ ನೆಪದಲ್ಲಿ ಬಂದಿದ್ದ ಇಬ್ಬರು ಆರೋಪಿಗಳು ಏಕಾಏಕಿ ಬಾಗಿಲನ್ನು ಬಲವಂತವಾಗಿ ತಳ್ಳಿ ಮನೆಯೊಳಗೆ ನುಗ್ಗಿ, ವೃದ್ಧೆಯನ್ನು ಕೆಳಕ್ಕೆ ತಳ್ಳಿ ಹಲ್ಲೆ ನಡೆಸಿದ್ದಾರೆ. ಬಳಿಕ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಹಾಗೂ ಕೈಯಲ್ಲಿದ್ದ ಬಳೆಯನ್ನು ಬಲವಂತವಾಗಿ ಕಸಿದುಕೊಂಡು ಪರಾರಿಯಾಗಿದ್ದಾರೆ.

ಸುಲಿಗೆ ಮಾಡಲಾದ ಚಿನ್ನಾಭರಣದ ಒಟ್ಟು ತೂಕ 24 ಗ್ರಾಂ ಆಗಿದ್ದು, ಅಂದಾಜು ಮೌಲ್ಯ ಸುಮಾರು ₹3 ಲಕ್ಷ ಎಂದು ತಿಳಿದುಬಂದಿದೆ. ಈ ಸಂಬಂಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ  ಕರಣ ದಾಖಲಾಗಿತ್ತು.

ಪ್ರಕರಣದ ತನಿಖೆಗಾಗಿ ವಿಶೇಷ ತಂಡವನ್ನು ರಚಿಸಿದ್ದ ಪೊಲೀಸರು, ಖಚಿತ ಮಾಹಿತಿಯ ಮೇರೆಗೆ ಆಗಸ್ಟ್ 7ರಂದು ಮರೋಳಿ ಪ್ರದೇಶದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರಿಂದ ಸುಲಿಗೆ ಮಾಡಲಾದ ಸಂಪೂರ್ಣ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದ್ದು, ಕೃತ್ಯಕ್ಕೆ ಬಳಸಿದ್ದ ಬೈಕ್‌ನನ್ನೂ ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ. ಪ್ರಕರಣ ದಾಖಲಾಗಿದ್ದ ಕೇವಲ ಮೂರು ದಿನಗಳಲ್ಲೇ ಆರೋಪಿಗಳನ್ನು ಬಂಧಿಸುವ ಮೂಲಕ ಮಂಗಳೂರು ನಗರ ಪೊಲೀಸರು ಶ್ಲಾಘನೀಯ ಕಾರ್ಯಾಚರಣೆ ನಡೆಸಿದ್ದಾರೆ.

Star Of Kudla

Learn More →

Leave a Reply

Your email address will not be published. Required fields are marked *