


ಮಂಗಳೂರು: ದಕ್ಷಿಣ ಕನ್ನಡ ತಾಲೂಕಿನ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಅಡೆಂಜದಲ್ಲಿ ಖೋಟಾ ನೋಟು ಮುದ್ರಿಸುತ್ತಿದ್ದ ಅಡ್ಡೆಗೆ ಉಪ್ಪಿನಂಗಡಿ ಪೊಲೀಸರು ದಾಳಿ ನಡೆಸಿ 7 ಮಂದಿಯನ್ನು ಬಂಧಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕುಮಾರ್ ಅವರ ಮಾಹಿತಿ ಪ್ರಕಾರ, ಆರೋಪಿಗಳು ಕಾಗದದ ಮೇಲೆ 500 ರೂಪಾಯಿ ಮುಖಬೆಲೆಯ ಖೋಟಾನೋಟುಗಳನ್ನು ಮುದ್ರಿಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ವೇಳೆ ಖೋಟಾನೋಟು ಮುದ್ರಣಕ್ಕೆ ಬಳಸಲಾಗುತ್ತಿದ್ದ ವಿವಿಧ ಉಪಕರಣಗಳು ಹಾಗೂ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ 500 ರೂಪಾಯಿ ನೋಟುಗಳ ಮುದ್ರಿತ ಶೀಟ್ಗಳು, 500 ರೂಪಾಯಿ ನೋಟುಗಳ ಬಂಡಲ್, ಎ4 ಶೀಟ್ಗಳು, ಸಿಪಿಯು, ಪ್ರಿಂಟರ್, ಪೇಪರ್ ಕಟಿಂಗ್ ಉಪಕರಣ, ಸ್ಕೇಲ್, ಲ್ಯಾಂಪ್, ಮಹಾತ್ಮ ಗಾಂಧೀಜಿ ಚಿತ್ರದ ಸೀಲ್, ಆರ್ಬಿಐ ಸೆಕ್ಯುರಿಟಿ ಥ್ರೆಡ್ಗೆ ಬಳಸಲಾಗುತ್ತಿದ್ದ ಪಿವಿಸಿ ಗ್ಲಾಸ್ ಸೇರಿದಂತೆ ಖೋಟಾನೋಟು ಮುದ್ರಣಕ್ಕೆ ಸಂಬಂಧಿಸಿದ ವಿವಿಧ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಆರೋಪಿಗಳು ಕೆಲವು ಖೋಟಾನೋಟುಗಳನ್ನು ಮುದ್ರಿಸಿ ಇಟ್ಟಿದ್ದು, ಇನ್ನೂ ಕೆಲವು ಕತ್ತರಿಸಿ ಬಂಡಲ್ ಮಾಡುವ ಹಂತದಲ್ಲಿದ್ದವು ಎಂದು ಎಸ್ಪಿ ತಿಳಿಸಿದ್ದಾರೆ. ಬಂಧಿತರು ಎಷ್ಟು ದಿನಗಳಿಂದ ಈ ಕೃತ್ಯದಲ್ಲಿ ತೊಡಗಿಕೊಂಡಿದ್ದರು ಎಂಬುದು ಸೇರಿದಂತೆ ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.
ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 178(1) ಹಾಗೂ 181 ಸೇರಿದಂತೆ ಸಂಬಂಧಿತ ಕಲಂಗಳಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಎಸ್ಪಿ ಡಾ. ಅರುಣ್ ಕುಮಾರ್ ತಿಳಿಸಿದ್ದಾರೆ.







1) ಇಬ್ರಾಹಿಂ (60) ಪುತ್ತೂರು ಕಸಬ ಗ್ರಾಮ, ದ ಕ ಜಿಲ್ಲೆ.
2) ಶರೀಪ (51) ಚಂಗುಲ ಗ್ರಾಮ, ಕಾಸರಗೋಡುಜಿಲ್ಲೆ.
3) ಸಂದೀಪ ಪುಂಡಲಿಕ ಶೋಳಂಬಿ (30), ಹಳಿಯಾಳ ತಾಲೂಕು ಉತ್ತರ ಕನ್ನನಡ ಜಿಲ್ಲೆ.
4) ಮಹಮ್ಮದ್ ನಬಾಸ್ (37), ಆಮೂರು ಗ್ರಾಮ, ಕಾಸರಗೊಡು ಜಿಲ್ಲೆ.
5) ಸಲ್ಮಾನ್ ಫಾರೀಸ್ (25) ಒಳಮೊಗ್ರು ಗ್ರಾಮ, ಪುತ್ತೂರು
6) ಸಿರಾಜುದ್ದೀನ್ (34), ಉರುವಾಲು ಗ್ರಾಮ, ಬೆಳ್ತಂಗಡಿ
7) ಇರ್ಷಾದ್ (31) ಪುತ್ತಿಲ ಗ್ರಾಮ, ಬೆಳ್ತಂಗಡಿ


