ಬಾಂಗ್ಲಾ ವಲಸಿಗರ ಜಾಲ ಭೇದಿಸಿದ ಮಂಗಳೂರು ಪೊಲೀಸರು; ಇಬ್ಬರು ಮಧ್ಯವರ್ತಿಗಳ ಬಂಧನ.

Mangalore-ಬಾಂಗ್ಲಾ ವಲಸಿಗರ ಜಾಲ ಭೇದಿಸಿದ ಮಂಗಳೂರು ಪೊಲೀಸರು; ಇಬ್ಬರು ಮಧ್ಯವರ್ತಿಗಳ ಬಂಧನ; ಕೋಲ್ಕತ್ತಾದಲ್ಲಿ ಮತ್ತೋರ್ವ ಸೆರೆ – ತನಿಖೆ ಮತ್ತಷ್ಟು ತೀವ್ರ

ಮಂಗಳೂರು ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶದ ಪ್ರಜೆಗಳ ವಿರುದ್ಧ ಪೊಲೀಸರು ನಡೆಸುತ್ತಿರುವ ಶೋಧ ಕಾರ್ಯಾಚರಣೆ ಮುಂದುವರಿದಿದ್ದು, ಉರ್ವ ಪೊಲೀಸ್ ಠಾಣೆ ವ್ಯಾಪ್ತಿಯ ಎರಡು ನಿರ್ಮಾಣ ಹಂತದ ಕಟ್ಟಡಗಳಿಂದ ಮತ್ತೆ 11 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಇದರೊಂದಿಗೆ ನಗರದಲ್ಲಿ ಇದುವರೆಗೆ ಪತ್ತೆಯಾದ ಬಾಂಗ್ಲಾದೇಶದ ಅಕ್ರಮ ವಲಸಿಗರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ.

ಮಂಗಳೂರು, ಜು. 14: ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶದ ಪ್ರಜೆಗಳ ವಿರುದ್ಧ ಪೊಲೀಸರು ನಡೆಸುತ್ತಿರುವ ಶೋಧ ಕಾರ್ಯಾಚರಣೆ ಮುಂದುವರಿದಿದ್ದು, ಉರ್ವ ಪೊಲೀಸ್ ಠಾಣೆ ವ್ಯಾಪ್ತಿಯ ಎರಡು ನಿರ್ಮಾಣ ಹಂತದ ಕಟ್ಟಡಗಳಿಂದ ಮತ್ತೆ 11 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಇದರೊಂದಿಗೆ ನಗರದಲ್ಲಿ ಇದುವರೆಗೆ ಪತ್ತೆಯಾದ ಬಾಂಗ್ಲಾದೇಶದ ಅಕ್ರಮ ವಲಸಿಗರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ.

ಕಾರ್ಮಿಕರನ್ನು ಕರೆತರುತ್ತಿದ್ದ ಮಧ್ಯವರ್ತಿಗಳ ವಿರುದ್ಧವು ಪೊಲೀಸರು ಮಹತ್ವದ ಕ್ರಮ ಕೈಗೊಂಡಿದ್ದಾರೆ. ಪ್ರಕರಣದಲ್ಲಿ ಪಶ್ಚಿಮ ಬಂಗಾಳ ಮೂಲದ ಮೊಯ್ದೀನ್ ಇಸ್ಲಾಂ, ರಸೂಲ್ ಇಸ್ಲಾಂ ಹಾಗೂ ದಿಲ್ವಾರ್ ಹುಸೇನ್ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಮೊಯ್ದೀನ್ ಇಸ್ಲಾಂ ಮತ್ತು ದಿಲ್ವಾರ್ ಹುಸೇನ್ ಅವರನ್ನು ಮಂಗಳೂರಿನಲ್ಲಿ ಬಂಧಿಸಲಾಗಿದೆ.

ಪ್ರಕರಣದ ಪ್ರಮುಖ ಆರೋಪಿ ರಸೂಲ್ ಇಸ್ಲಾಂನನ್ನು ಮಂಗಳೂರು ನಗರ ಪೊಲೀಸರ ಮಾಹಿತಿ ಆಧರಿಸಿ ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಅವರ ಸಮನ್ವಯದಲ್ಲಿ ಕೋಲ್ಕತ್ತಾ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆಯಲು ಮಂಗಳೂರು ಪೊಲೀಸರ ವಿಶೇಷ ತಂಡ ಈಗಾಗಲೇ ಕೋಲ್ಕತ್ತಾಕ್ಕೆ ತೆರಳಿದೆ.

ತನಿಖೆ ವೇಳೆ, ಉತ್ತರ ಭಾರತದ ವಿವಿಧ ರಾಜ್ಯಗಳಿಂದ ಕಾರ್ಮಿಕರನ್ನು ಮಂಗಳೂರಿಗೆ ಕರೆತರುವ ನೆಪದಲ್ಲಿ ಈ ಮಧ್ಯವರ್ತಿಗಳು ಬಾಂಗ್ಲಾದೇಶದ ಅಕ್ರಮ ವಲಸಿಗರನ್ನೂ ನಗರಕ್ಕೆ ಕರೆತಂದು ನಿರ್ಮಾಣ ಕಾಮಗಾರಿಗಳಲ್ಲಿ ಕೆಲಸಕ್ಕೆ ನಿಯೋಜಿಸುತ್ತಿದ್ದರೆಂಬ ಮಾಹಿತಿ ಲಭ್ಯವಾಗಿದೆ. ಈ ಜಾಲದ ಮೂಲಕ ಇನ್ನಷ್ಟು ಮಂದಿ ರಾಜ್ಯದ ವಿವಿಧ ಭಾಗಗಳಿಗೆ ಬಂದಿರುವ ಸಾಧ್ಯತೆಯಿದ್ದು, ತನಿಖೆಯನ್ನು ಪೊಲೀಸರು ವಿಸ್ತರಿಸಿದ್ದಾರೆ.

ಉರ್ವ ಠಾಣೆ ವ್ಯಾಪ್ತಿಯ ಕುಂಟಿಕಾನ ಹಾಗೂ ಕೋಡಿಕಲ್‌ನಲ್ಲಿನ ನಿರ್ಮಾಣ ಕಾಮಗಾರಿಗಳಲ್ಲಿ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದವರ ದಾಖಲೆಗಳನ್ನು ಪರಿಶೀಲಿಸಿದ ವೇಳೆ, 11 ಮಂದಿ ಬಾಂಗ್ಲಾದೇಶದ ಪ್ರಜೆಗಳಾಗಿರುವುದು ದೃಢಪಟ್ಟಿದೆ. ವಿಚಾರಣೆ ವೇಳೆ ಅವರು ಕಳೆದ ಸುಮಾರು ಎರಡು ತಿಂಗಳಿಂದ ಮಂಗಳೂರಿನಲ್ಲಿ ವಿವಿಧ ನಿರ್ಮಾಣ ಕಾಮಗಾರಿಗಳಲ್ಲಿ ದುಡಿಯುತ್ತಿದ್ದರು ಎಂಬುದು ತಿಳಿದುಬಂದಿದೆ.ವಶಕ್ಕೆ ಪಡೆದವರಲ್ಲಿ ಬಾಂಗ್ಲಾದೇಶದ ರಾಜಶಾಹಿ ಜಿಲ್ಲೆಯ ನಿವಾಸಿಗಳಾದ ಮಹಮ್ಮದ್ ಕೌಸರ್ ಅಲಿ (21), ಮೊಹಮ್ಮದ್ ನೂರ್ ಅಮೀನ್ (34), ನಹಿದುಲ್ ಇಸ್ಲಾಂ (22), ಹುಮಾಯೂನ್ ಕೊಬೀರ್ (22), ರೋಮನ್ ಅಲಿ (23), ಅಬ್ದುಲ್ ರಹಮಾನ್ (19), ನೋಯನ್ (24) ಸೇರಿದಂತೆ ನಾಲ್ವರು ಅಪ್ರಾಪ್ತ ವಯಸ್ಕರು ಸೇರಿದ್ದಾರೆ.

ನಿರ್ಮಾಣ ಕಾಮಗಾರಿಗಳಲ್ಲಿ ಕಾರ್ಯಾಚರಣೆಪೊಲೀಸ್ ಆಯುಕ್ತರ ಸೂಚನೆಯಂತೆ ನಗರ ವ್ಯಾಪ್ತಿಯ ಎಲ್ಲ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಅಕ್ರಮ ವಲಸಿಗರ ಪತ್ತೆಗೆ ವಿಶೇಷ ಕಾರ್ಯಾಚರಣೆ ಆರಂಭಿಸಲಾಗಿದೆ. ಮಾಹಿತಿ ಆಧರಿಸಿ ಉರ್ವ ಪೊಲೀಸರು ಕೆಪಿಟಿ–ಕುಂಟಿಕಾನ ನಡುವಿನ ನಿರ್ಮಾಣ ಹಂತದ ಕಟ್ಟಡ ಹಾಗೂ ಕೋಡಿಕಲ್‌ನ ಮತ್ತೊಂದು ಕಟ್ಟಡದಲ್ಲಿ ಪರಿಶೀಲನೆ ನಡೆಸಿದರು. ಈ ವೇಳೆ ಮೊದಲ ಸ್ಥಳದಲ್ಲಿ ಮೂವರು ಹಾಗೂ ಎರಡನೇ ಸ್ಥಳದಲ್ಲಿ ಎಂಟು ಮಂದಿ ಬಾಂಗ್ಲಾದೇಶದ ಅಕ್ರಮ ವಲಸಿಗರು ಪತ್ತೆಯಾದರು.

ಬಂಧನ ಕೇಂದ್ರದಲ್ಲಿ ವಿಚಾರಣೆವಶಕ್ಕೆ ಪಡೆದ 11 ಮಂದಿಯನ್ನು ಮುಕ್ಕದ ಖಾಸಗಿ ಆಸ್ಪತ್ರೆ ಆವರಣದಲ್ಲಿರುವ ಬಂಧನ ಕೇಂದ್ರದಲ್ಲಿ ಇರಿಸಲಾಗಿದ್ದು, ಪೊಲೀಸ್ ಗುಪ್ತಚರ ವಿಭಾಗದ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಬಳಿಕ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ಪ್ರಾದೇಶಿಕ ವಿದೇಶಿಯರ ನೋಂದಣಿ ಕಚೇರಿ (FRRO)ಗೆ ಹಸ್ತಾಂತರಿಸುವ ಕ್ರಮ ಕೈಗೊಳ್ಳಲಾಗಿದೆ.

ಎಲ್ಲರೂ ರಾಜಶಾಹಿ ಜಿಲ್ಲೆಯವರೇಇದುವರೆಗೆ ಪತ್ತೆಯಾದ ಎಲ್ಲ ಅಕ್ರಮ ವಲಸಿಗರೂ ಬಾಂಗ್ಲಾದೇಶದ ರಾಜಶಾಹಿ ಜಿಲ್ಲೆಯವರಾಗಿದ್ದು, ಈ ಜಿಲ್ಲೆ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಗಡಿಗೆ ಹೊಂದಿಕೊಂಡಿದೆ. ಒಂದೇ ಜಾಲದ ಮೂಲಕ ಇವರನ್ನು ವಿವಿಧ ರಾಜ್ಯಗಳಿಗೆ ಕರೆತಂದು, ಅಲ್ಲಿಂದ ಮಂಗಳೂರಿನ ವಿವಿಧ ಕಾಮಗಾರಿಗಳಿಗೆ ನಿಯೋಜಿಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ. ಇದೇ ಮಧ್ಯವರ್ತಿ ಮೂಲಕ ಇನ್ನಷ್ಟು ಮಂದಿ ನಗರ ಹಾಗೂ ಜಿಲ್ಲೆಯ ಇತರ ಭಾಗಗಳಿಗೆ ಬಂದಿರುವ ಸಾಧ್ಯತೆಯಿದ್ದು, ತನಿಖೆ ಮುಂದುವರಿದಿದೆ.

ಇನ್ನಷ್ಟು ಮಂದಿಗಾಗಿ ಶೋಧನಗರದ ಮೀನುಗಾರಿಕೆ ದಕ್ಕೆಗಳು, ವಿವಿಧ ನಿರ್ಮಾಣ ಕಾಮಗಾರಿಗಳು, ಕಾರ್ಖಾನೆಗಳು ಹಾಗೂ ಹೊರವಲಯ ಮತ್ತು ಜಿಲ್ಲೆಯ ಇತರ ಭಾಗಗಳಲ್ಲಿ ಇನ್ನಷ್ಟು ಅಕ್ರಮ ಬಾಂಗ್ಲಾದೇಶದ ಕಾರ್ಮಿಕರು ಕೆಲಸ ಮಾಡುತ್ತಿರುವ ಸಾಧ್ಯತೆ ಇರುವುದರಿಂದ ಕಾರ್ಯಾಚರಣೆಯನ್ನು ಇನ್ನಷ್ಟು ತೀವ್ರಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

“11 ಮಂದಿ ಬಾಂಗ್ಲಾದೇಶದ ಪ್ರಜೆಗಳನ್ನು ಉರ್ವ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ಆರೋಪಿಗಳನ್ನು ಗಡಿಪಾರು ಮಾಡುವ ಉದ್ದೇಶದಿಂದ ಎಫ್‌ಆರ್‌ಆರ್‌ಒಗೆ ಕಳುಹಿಸಲಾಗುತ್ತಿದೆ. ಮಧ್ಯವರ್ತಿಗಳ ಜಾಲದ ಸಂಪೂರ್ಣ ಮಾಹಿತಿ ಪತ್ತೆಹಚ್ಚಲು ತನಿಖೆ ಮುಂದುವರಿದಿದೆ. ಕೋಲ್ಕತ್ತಾದಲ್ಲಿ ಬಂಧಿತನಾಗಿರುವ ಆರೋಪಿಯನ್ನು ಕರೆತಂದ ಬಳಿಕ ಇನ್ನಷ್ಟು ಮಾಹಿತಿ ದೊರೆಯುವ ನಿರೀಕ್ಷೆಯಿದೆ.” ಎಂದು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

News Editor

Learn More →

Leave a Reply

Your email address will not be published. Required fields are marked *