ವೇತನ ಏರಿಸಿ ಬದುಕು ರಕ್ಷಿಸಿ: ಪುತ್ತೂರಿನಲ್ಲಿ ಅಕ್ಷರದಾಸೋಹ ನೌಕರರ ಪ್ರತಿಭಟನೆ, ಕೇಂದ್ರ–ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ

ಅಕ್ಷರದಾಸೋಹ ಯೋಜನೆಯ ನೌಕರರ ವೇತನವನ್ನು ಹೆಚ್ಚಿಸಿ, ಜೀವನ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿ ಅಕ್ಷರದಾಸೋಹ ನೌಕರರ ಸಂಘದ ವತಿಯಿಂದ ಪುತ್ತೂರಿನಲ್ಲಿ ಪ್ರತಿಭಟನೆ ನಡೆಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಆಗ್ರಹ ಪತ್ರ ಸಲ್ಲಿಸಲಾಯಿತು.

ಅಖಿಲ ಭಾರತ ಅಕ್ಷರದಾಸೋಹ ಸಮಿತಿಯ ಕರೆಯಂತೆ ನಡೆದ ಈ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಐಟಿಯು ದಕ್ಷಿಣ ಕನ್ನಡ ಜಿಲ್ಲಾ ಸಹಕಾರ್ಯದರ್ಶಿ ಈಶ್ವರಿ ಶಂಕರ್ ಪದ್ಮುಂಜ, ಮಹಿಳಾ ಕಾರ್ಮಿಕರಿಗೆ ಬದುಕಲು ಸಾಕಾಗುವಷ್ಟು ವೇತನ ನೀಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿವೆ ಎಂದು ಆರೋಪಿಸಿದರು.

“2008ರಿಂದ ಕೇಂದ್ರ ಸರ್ಕಾರ ಅಕ್ಷರದಾಸೋಹ ನೌಕರರ ಸಂಬಳವನ್ನು ಸಮರ್ಪಕವಾಗಿ ಹೆಚ್ಚಿಸಿಲ್ಲ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಒಂದು ರೂಪಾಯಿಯನ್ನೂ ಹೆಚ್ಚಿಸಿಲ್ಲ. ‘ಬೇಟಿ ಬಚಾವೋ’ ಹಾಗೂ ಮಹಿಳಾ ಸಬಲೀಕರಣದ ಘೋಷಣೆ ಮಾಡುವ ಸರ್ಕಾರಗಳು ಮೊದಲು ಮಹಿಳಾ ಕಾರ್ಮಿಕರಿಗೆ ಬದುಕಲು ಯೋಗ್ಯವಾದ ವೇತನ ನೀಡಬೇಕು. ಅದೇ ನಿಜವಾದ ಮಹಿಳಾ ಸಬಲೀಕರಣ” ಎಂದು ಅವರು ಹೇಳಿದರು.

ವೇತನ ಹೆಚ್ಚಳ, ವರ್ಷಪೂರ್ತಿ 12 ತಿಂಗಳ ಸಂಬಳ, ಯಾವುದೇ ಕಾರಣವಿಲ್ಲದೆ ಕೆಲಸದಿಂದ ತೆಗೆದುಹಾಕುವುದನ್ನು ತಡೆಯುವುದು, ಪ್ರತಿ ಶಾಲೆಗೆ ಕನಿಷ್ಠ ಇಬ್ಬರು ಅಡುಗೆ ಸಿಬ್ಬಂದಿಯನ್ನು ನೇಮಿಸುವುದು ಸೇರಿದಂತೆ 20 ಪ್ರಮುಖ ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿ ಅವರಿಗೆ ಸಹಾಯಕ ಆಯುಕ್ತರ ಮೂಲಕ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಅಕ್ಷರದಾಸೋಹ ನೌಕರರ ಸಂಘದ ಪುತ್ತೂರು ತಾಲೂಕು ಸಮಿತಿ ಅಧ್ಯಕ್ಷೆ ರಂಜಿತ, ಕಾರ್ಯದರ್ಶಿ ಲತಾ ಕೊಂಬೆಟ್ಟು, ಖಜಾಂಚಿ ತೆರೆಸಾ, ಕಡಬ ತಾಲೂಕು ಸಮಿತಿ ಅಧ್ಯಕ್ಷೆ ರೇವತಿ, ಕಾರ್ಯದರ್ಶಿ ಸುಲೋಚನ, ಖಜಾಂಚಿ ಹೇಮಲತಾ ಮೂರಾಜೆ ಸೇರಿದಂತೆ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದ್ದರು.

News Editor

Learn More →

Leave a Reply

Your email address will not be published. Required fields are marked *