
ನೇಪಾಳವನ್ನು ಕೇಂದ್ರವಾಗಿಸಿಕೊಂಡು ಭಾರತೀಯರಿಗೆ ನೂರಾರು ಕೋಟಿ ರೂಪಾಯಿ ಹೂಡಿಕೆ ವಂಚನೆ (Investment Fraud) ಮಾಡುತ್ತಿದ್ದ ಅಂತರಾಷ್ಟ್ರೀಯ ಜಾಲವನ್ನು ಭೇದಿಸುವಲ್ಲಿ ಮಂಗಳೂರು ನಗರ ಸೆನ್ ಕ್ರೈಂ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದ ವಿವಿಧ ರಾಜ್ಯಗಳ ಒಟ್ಟು 11 ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ ನೂರಾರು ಕೋಟಿ ವಹಿವಾಟಿನ ಕರಾಳ ಮುಖ ಬಯಲಾಗಿದೆ.
ಬಂಧಿತರನ್ನು ಗುಜರಾತ್‌ನ ಮಕವನ್ ವಿಕ್ರಂ, ಪಶ್ಚಿಮ ಬಂಗಾಳದ ಸೌಮ್ಯಾಧಿತ್ಯ ಚಟ್ಟೋಪಾಧ್ಯಾಯ, ಜಾರ್ಖಂಡ್‌ನ ಪುಪ್ಲ ಶಿವ ಕುಮಾರ್ ರಾವ್, ರಾಜೇಶ್ ಮಂಡನ್ ಮತ್ತು ಮಿಥುನ್ ಕುಮಾರ್ ಮಂಗರಾಜ್, ಉತ್ತರ ಪ್ರದೇಶದ ಗೌರವ್ ಪಾಂಡೆ, ಹರ್ಷ್ ಮಿಸ್ರಾ, ಮೊಹಮ್ಮದ್ ಆಕೀಬ್ ಅಲಿ ಮತ್ತು ನೌಶಾದ್ ಅಲಿ, ಬಿಹಾರದ ರಾಜೀವ್ ರಂಜನ್ ಕುಮಾರ್ ಹಾಗೂ ರಾಜಸ್ಥಾನದ ಓಂ ಪ್ರಕಾಶ್ ಯಾಧವ್ ಎಂದು ಗುರುತಿಸಲಾಗಿದೆ. ಈ ತಂಡದಲ್ಲಿ ಚೀನಾ ಮೂಲದ ವಂಚಕರೂ ಸೇರಿದ್ದು, ಅವರನ್ನು ಈಗಾಗಲೇ ನೇಪಾಳ ಪೊಲೀಸರು ವಶಕ್ಕೆ ಪಡೆದಿದ್ದಾರೆ. ತಲೆಮರೆಸಿಕೊಂಡಿರುವ ಉಳಿದ ಐವರು ಭಾರತೀಯರಿಗಾಗಿ ಶೋಧ ಮುಂದುವರಿದಿದೆ.
ಮಂಗಳೂರಿನ ವ್ಯಕ್ತಿಯೊಬ್ಬರಿಗೆ 1.38 ಕೋಟಿ ರೂ. ವಂಚಿಸಿದ ದೂರಿನ ಬೆನ್ನತ್ತಿದ ಪೊಲೀಸರಿಗೆ ದಿಗ್ರಮೆಗೊಳಿಸುವ ಮಾಹಿತಿ ಲಭ್ಯವಾಗಿದೆ. ಆರೋಪಿಗಳ ಬಳಿ ಇದ್ದ ಒಟ್ಟು 624 ಬ್ಯಾಂಕ್ ಖಾತೆಗಳ ವಿವರ ಲಭ್ಯವಾಗಿದ್ದು, ಇವುಗಳಲ್ಲಿ ಈಗಾಗಲೇ 4,580ಕ್ಕೂ ಹೆಚ್ಚು ಸೈಬರ್ ಕ್ರೈಂ ಪ್ರಕರಣಗಳು ದಾಖಲಾಗಿವೆ. ಒಂದು ಖಾತೆಯಲ್ಲೇ ಬರೋಬ್ಬರಿ 167 ಕೋಟಿ ರೂ. ವರ್ಗಾವಣೆಯಾಗಿರುವುದು ಪತ್ತೆಯಾಗಿದೆ. ಮಂಗಳೂರಿನ ಪ್ರಕರಣದಲ್ಲಿ ಬಳಸಲಾದ 10 ಖಾತೆಗಳಲ್ಲೇ 30.70 ಕೋಟಿ ರೂ. ಹಣ ಓಡಾಟ ನಡೆಸಿರುವುದು ಪತ್ತೆಯಾಗಿದೆ.
ವಂಚಕರು ಕಾಂಬೋಡಿಯಾ ಮತ್ತು ದುಬೈನಲ್ಲಿ ಕುಳಿತು ಸಾಮಾಜಿಕ ಜಾಲತಾಣಗಳ ಮೂಲಕ ಹೂಡಿಕೆದಾರರನ್ನು ಸಂಪರ್ಕಿಸುತ್ತಿದ್ದರು. ವಿದೇಶಕ್ಕೆ ಕೆಲಸಕ್ಕೆ ಹೋದ ಭಾರತೀಯರನ್ನು ‘ಡಿಜಿಟಲ್ ಗುಲಾಮರನ್ನಾಗಿ’ ಮಾಡಿಕೊಂಡು, ಅವರಿಂದಲೇ ಸ್ಥಳೀಯ ಭಾಷೆಯಲ್ಲಿ ಜನರಿಗೆ ಆಮಿಷ ಒಡ್ಡುತ್ತಿದ್ದರು. ಹೂಡಿಕೆ ಮಾಡಿದ ಹಣಕ್ಕೆ ಹೆಚ್ಚಿನ ಲಾಭ ಬಂದಿರುವುದಾಗಿ ನಕಲಿ ಆಪ್‌ಗಳ ಮೂಲಕ ತೋರಿಸಿ ನಂಬಿಸಿ, ದೊಡ್ಡ ಮೊತ್ತದ ಹಣ ಹೂಡಿಕೆ ಮಾಡಿದ ನಂತರ ಅದನ್ನು ಡ್ರಾ ಮಾಡಲಾಗದಂತೆ ವಂಚಿಸುತ್ತಿದ್ದರು. ಲೂಟಿ ಮಾಡಿದ ಹಣವನ್ನು ತಕ್ಷಣವೇ USDT (ಡಿಜಿಟಲ್ ಕರೆನ್ಸಿ) ಆಗಿ ಬದಲಾಯಿಸಿ ವಿದೇಶಕ್ಕೆ ವರ್ಗಾಯಿಸುತ್ತಿದ್ದರು. ಆರೋಪಿಗಳಿಂದ ಒಂದು ಲ್ಯಾಪ್‌ಟಾಪ್, 21 ಮೊಬೈಲ್ ಫೋನ್‌ಗಳು, 20 ಸಿಮ್ ಕಾರ್ಡ್‌ಗಳು ಹಾಗೂ ವಿವಿಧ ಬ್ಯಾಂಕ್‌ಗಳ 20 ಡೆಬಿಟ್/ಕ್ರೆಡಿಟ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.


