ಬೆಂಗಳೂರು ಚೀಟಿ ವ್ಯವಹಾರ ಇತ್ಯರ್ಥಕ್ಕೆ ₹4 ಲಕ್ಷ ಲಂಚ ಬೇಡಿಕೆ; ಹಣ ಸಮೇತ ಲೋಕಾಯುಕ್ತ ಬಲೆಗೆ ಬಿದ್ದ ಇನ್ಸ್‌ಪೆಕ್ಟರ್

ರಾಜಧಾನಿಯಲ್ಲಿ ಭ್ರಷ್ಟ ಅಧಿಕಾರಿಗಳ ಭೇಟೆ ಮುಂದುವರಿಸಿರುವ ಕರ್ನಾಟಕ ಲೋಕಾಯುಕ್ತ ಪೊಲೀಸರು, ಇಂದು ಮತ್ತೊಬ್ಬ ಪೊಲೀಸ್ ಅಧಿಕಾರಿಗೆ ಬಿಸಿ ಮುಟ್ಟಿಸಿದ್ದಾರೆ. ಠಾಣೆಗೆ ಬಂದ ದೂರುದಾರರಿಂದ ಲಕ್ಷಾಂತರ ರೂಪಾಯಿ ಲಂಚ ಪಡೆಯುತ್ತಿದ್ದ ಕೆಪಿ ಅಗ್ರಹಾರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಗೋವಿಂದರಾಜು ಅವರು ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ರಕ್ಷಣೆ ನೀಡಬೇಕಾದ ಪೊಲೀಸರೇ ಹಣದ ಆಸೆಗೆ ಬಿದ್ದು ಕಂಬಿ ಎಣಿಸುವಂತಾಗಿರುವುದು ಇಲಾಖೆಗೆ ಮುಜುಗರ ತಂದೊಡ್ಡಿದೆ.

ಕೆಪಿ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಚೀಟಿ ವ್ಯವಹಾರಕ್ಕೆ (Chit Fund Business) ಸಂಬಂಧಿಸಿದ ಪ್ರಕರಣವೊಂದು ಠಾಣೆಯ ಮೆಟ್ಟಿಲೇರಿತ್ತು. ಈ ಪ್ರಕರಣವನ್ನು ಇತ್ಯರ್ಥಪಡಿಸಲು ಅಥವಾ ದೂರುದಾರರಿಗೆ ಅನುಕೂಲ ಮಾಡಿಕೊಡುವ ನೆಪದಲ್ಲಿ ಇನ್ಸ್‌ಪೆಕ್ಟರ್ ಗೋವಿಂದರಾಜು ಅವರು ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಮೂಲಗಳ ಪ್ರಕಾರ, ಚೀಟಿ ವ್ಯವಹಾರದ ದೂರಿನಲ್ಲಿ ವ್ಯಕ್ತಿಯೊಬ್ಬರ ಹೆಸರನ್ನು ಆರೋಪಿ ಪಟ್ಟಿಗೆ ಸೇರಿಸುವುದಾಗಿ ಅಥವಾ ಸೇರಿಸದೇ ಇರಲು ಬೆದರಿಕೆ ಹಾಕಿ ಹಣಕ್ಕೆ ಪೀಡಿಸುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.

ಪ್ರಕರಣವನ್ನು ಇತ್ಯರ್ಥಪಡಿಸಲು ಇನ್ಸ್‌ಪೆಕ್ಟರ್ ಗೋವಿಂದರಾಜು ಬರೋಬ್ಬರಿ 4 ಲಕ್ಷ ರೂಪಾಯಿಗಳಿಗೆ ಬೇಡಿಕೆ ಇಟ್ಟಿದ್ದರು. ಲಂಚ ನೀಡಲು ಇಚ್ಛಿಸದ ದೂರುದಾರರು ನೇರವಾಗಿ ಲೋಕಾಯುಕ್ತ ಕಚೇರಿಯನ್ನು ಸಂಪರ್ಕಿಸಿ ದೂರು ನೀಡಿದ್ದರು. ದೂರಿನ ಅನ್ವಯ ಕಾರ್ಯಾಚರಣೆಗೆ ಇಳಿದ ಲೋಕಾಯುಕ್ತ ಅಧಿಕಾರಿಗಳು ಪಕ್ಕಾ ಪ್ಲಾನ್ ರೂಪಿಸಿದ್ದರು. ಅದರಂತೆ, ಇಂದು (ಗುರುವಾರ) ಮೈಸೂರು ರಸ್ತೆಯ ಸಿರಸಿ ಸರ್ಕಲ್ (Sirsi Circle) ಬಳಿಯ ಸಿಎಆರ್ (CAR) ಮೈದಾನದ ಹತ್ತಿರ ಹಣ ಹಸ್ತಾಂತರಕ್ಕೆ ಜಾಗ ನಿಗದಿಪಡಿಸಲಾಗಿತ್ತು. ಇನ್ಸ್‌ಪೆಕ್ಟರ್ ಗೋವಿಂದರಾಜು ಅವರು ದೂರುದಾರರಿಂದ 4 ಲಕ್ಷ ರೂಪಾಯಿ ನಗದು ಹಣವನ್ನು ಸ್ವೀಕರಿಸುತ್ತಿದ್ದಂತೆಯೇ, ಹೊಂಚು ಹಾಕಿ ಕುಳಿತಿದ್ದ ಲೋಕಾಯುಕ್ತ ಎಸ್ಪಿ ಶಿವಪ್ರಕಾಶ್ ನೇತೃತ್ವದ ತಂಡ ದಾಳಿ ನಡೆಸಿದೆ. ಹಣದ ಸಮೇತ ಇನ್ಸ್‌ಪೆಕ್ಟರ್ ಅವರನ್ನು ಸಾಕ್ಷ್ಯಾಧಾರಗಳ ಸಹಿತ ‘ರೆಡ್ ಹ್ಯಾಂಡ್’ ಆಗಿ ಸೆರೆಹಿಡಿಯಲಾಗಿದೆ.

ಬಂಧಿತ ಇನ್ಸ್‌ಪೆಕ್ಟರ್ ಗೋವಿಂದರಾಜು ಅವರನ್ನು ವಶಕ್ಕೆ ಪಡೆದಿರುವ ಲೋಕಾಯುಕ್ತ ಅಧಿಕಾರಿಗಳು, ಹಣದ ಮೂಲ ಮತ್ತು ಈ ಹಿಂದೆ ಇದೇ ಪ್ರಕರಣದಲ್ಲಿ ಬೇರೆ ಯಾರಿಂದಲಾದರೂ ಹಣ ಪಡೆದಿದ್ದಾರೆಯೇ ಎಂಬ ಬಗ್ಗೆ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಪ್ರಕ್ರಿಯೆ ನಡೆಯುತ್ತಿದೆ.

News Editor

Learn More →

Leave a Reply

Your email address will not be published. Required fields are marked *