
ಶಬರಿಮಲೆ (ಕೇರಳ): ಶಬರಿಮಲೆಯ ಯಾತ್ರೆ ಇಂದಿನಿಂದ ಆರಂಭವಾಗಿದ್ದು, ಮಲಯಾಳಂ ತಿಂಗಳ ವೃಚಿಕಂನ ಶುಭ ದಿನವಾದ ವಾರ್ಷಿಕ ಮಂಡಲ-ಮಕರವಿಳಕ್ಕು ತೀರ್ಥಯಾತ್ರೆ ಕೂಡ ಪ್ರಾರಂಭವಾಗಿದೆ. ಮೊದಲ ದಿನವೇ ಅಯ್ಯಪ್ಪನ ದರ್ಶನಕ್ಕೆ ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು, ಸನ್ನಿಧಾನದಲ್ಲಿ ಎಲ್ಲಿ ನೋಡಿದರೂ ಭಕ್ತಸಾಗರವೇ ಕಾಣಿಸುತ್ತಿದೆ.
ಸಾಂಪ್ರದಾಯಿಕ ಕಪ್ಪು ಉಡುಪು ಧರಿಸಿ, ‘ಇರುಮುಡಿಕ್ಕೆಟ್ಟು’ವನ್ನು ತಲೆಯ ಮೇಲೆ ಹೊತ್ತುಕೊಂಡ ರಾಜ್ಯ ಮತ್ತು ಹೊರ ರಾಜ್ಯದ ಭಕ್ತರು ದರ್ಶನಕ್ಕೆ ಆಗಮಿಸಿದ್ದು, ಅಯ್ಯಪ್ಪ ಸ್ವಾಮಿಗೆ ಪ್ರಾರ್ಥನೆ ಸಲ್ಲಿಸಲು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತರು. ನೂತನವಾಗಿ ನೇಮಕಗೊಂಡ ಮೇಲ್ಸಂತಿ (ಪ್ರಧಾನ ಅರ್ಚಕ) ಇ.ಡಿ ಪ್ರಸಾದ್ ನಂಬೂದಿರಿ ಅವರು ದೇಗುಲದ ದ್ವಾರಗಳನ್ನು ತೆರೆಯುತ್ತಿದ್ದಂತೆ ಭಕ್ತರು ಒಕ್ಕೋರಲಿನಿಂದ ಅಯ್ಯಪ್ಪ ಸ್ವಾಮಿಯ ಸ್ತೋತ್ರ ಪಠಿಸಿದರು.
ದೇವಾಲಯದ ಗರ್ಭಗುಡಿಯನ್ನು ತಂತ್ರಿ (ಪ್ರಧಾನ ಅರ್ಚಕ) ಕಾಂತರಾರು ಮಹೇಶ್ ಮೋಹನರಾರು ಅವರ ಸಮ್ಮುಖದಲ್ಲಿ ತೆರೆಯಲಾಯಿತು. ಈ ಸಂದರ್ಭದಲ್ಲಿ ದೇವಸ್ವಂ ಮಂಡಳಿಯ ಕಾರ್ಯದರ್ಶಿ ಪಿ ಎನ್ ಗಣೇಶರನ್ ಪೊಟ್ಟಿ, ಶಬರಿಮಲೆ ಕಾರ್ಯನಿರ್ವಾಹಕ ಅಧಿಕಾರಿ ಒ.ಜಿ. ಬಿಜು ಮತ್ತು ಇತರರು ಉಪಸ್ಥಿತರಿದ್ದರು ಎಂದು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಪ್ರಕಟಣೆಯಲ್ಲಿ ತಿಳಿಸಿದೆ.


