ಬೆಂಗಳೂರು ಹೊರವಲಯದಲ್ಲಿ ಕೆರೆಯಲ್ಲಿ ಆಟವಾಡುತ್ತಿದ್ದ ಇಬ್ಬರು ಬಾಲಕರು ಮುಳುಗಿ ಸಾವು

ಬೆಂಗಳೂರು: ಆಟವಾಡುತ್ತಾ ಕೆರೆಯ ಬಳಿ ಹೋಗಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯದಲ್ಲಿ ನಡೆದಿದೆ.

ಬೆಂಗಳೂರು ಹೊರವಲಯದ ಅತ್ತಿಬೆಲೆ ಸಮೀಪದ ಬಳ್ಳೂರು ಗ್ರಾಮದ ಕೆರೆಯಲ್ಲಿಈ ದುರಂತ ನಡೆದಿದ್ದು, ಮೃತ ಬಾಲಕರನ್ನು 12 ವರ್ಷದ ಅನಿಕೇತ್ ಕುಮಾರ್ ಹಾಗೂ 11 ವರ್ಷದ ರೆಹಮಾತ್ ಬಾಬಾ ಎಂದು ಗುರುತಿಸಲಾಗಿದೆ. ಮಾಹಿತಿಗಳ ಪ್ರಕಾರ, ಬಾಲಕ ಅನಿಕೇತ್ ಕುಮಾರ್ ಪೋಷಕರು ಬಿಹಾರ ಮೂಲದವರಾಗಿದ್ದು, ರೆಹಮಾತ್ ಬಾಬಾ ಪೋಷಕರು ಆಂಧ್ರ ಮೂಲದ ಕದಿರಿ ಮೂಲದವರು ಎಂದು ಹೇಳಲಾಗುತ್ತಿದೆ.

ಈ ಇಬ್ಬರು ಬಾಲಕರು ಪೋಷಕರು ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ನಿನ್ನೆ ಸಂಜೆ ಇಬ್ಬರೂ ಕೂಡ ಮನೆಯ ಹತ್ತಿರವೇ ಆಟ ಆಡಿಕೊಂಡಿದ್ದರು. ಆದರೆ ಆಟ ಆಡುತ್ತಾ ಅವರು ಕೆರೆಯ ಬಳಿ ಹೋಗಿದ್ದು, ಈ ಸಮಯದಲ್ಲಿ ನೀರನ್ನು ನೋಡಿ ಕೆರೆಗೆ ಇಳಿದಿದ್ದಾರೆ. ಆದರೆ ಈಜು ಬರದ ಕಾರಣ, ಇಬ್ಬರೂ ಮುಳುಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ನಿನ್ನೆ ಪೂರ್ತಿ ಹುಡುಕಾಡಿದ್ದ ಪೋಷಕರು: ಪೋಷಕರು ಮಕ್ಕಳು ಆಟ ಆಡಿಕೊಂಡು ಸುತ್ತ-ಮುತ್ತಲೇ ಇದ್ದಾರೆ ಎಂದು ಭಾವಿಸಿದ್ದರು. ಆದರೆ ಸಂಜೆ ಆದರೂ ಮಕ್ಕಳು ಮನೆಗೆ ಹಿಂತಿರುಗಿ ಬರದೇ ಹಿನ್ನೆಲೆಯಲ್ಲಿ ಪೋಷಕರಿಗೆ ಆತಂಕ ಆಗಿದೆ. ತಕ್ಷಣವೇ ಮನೆಯ ಸುತ್ತಮುತ್ತ ಹಾಗೂ ಊರಿನಲ್ಲಿ ಸಹ ಹುಡುಕಾಡಿದ್ದಾರೆ. ಆದರೆ ಎಷ್ಟೇ ಹೊತ್ತಾದರೂ ಸಹ ಮಕ್ಕಳ ಸುಳಿವು ಸಿಕ್ಕಿರಿಲಿಲ್ಲ. ಆದರೆ ಇಂದು ಬೆಳಗ್ಗೆ ಕೆರೆಯಲ್ಲಿ ಮಕ್ಕಳ ದೇಹ ತೆಲುತ್ತಿರುವುದು ಪತ್ತೆ ಆಗಿದ್ದು, ತಕ್ಷಣವೇ ಗ್ರಾಮಸ್ಥರು ಅತ್ತಿಬೆಲೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ಬಂದ ತಕ್ಷಣ ಪೊಲೀಸ್​ ತಂಡ ಸ್ಥಳಕ್ಕೆ ಬಂದು ಮೃತದೇಹಗಳನ್ನು ಕೆರೆಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆ ಮಾಡಿಸಲು ಕಳುಹಿಸಲಾಗಿದೆ.

ಬೈಕಿಗೆ ಕ್ಯಾಂಟರ್ ಲಾರಿ ಡಿಕ್ಕಿ: ಸ್ಥಳದಲ್ಲಿ ಬೈಕ್ ಸವಾರ ಸಾವು: ಬೈಕಿಗೆ ಕ್ಯಾಂಟರ್​​ ಲಾರಿ ಡಿಕ್ಕಿ ಹೊಡೆದು ಸ್ಥಳದಲ್ಲೇ ಬೈಕ್​ ಸವಾರ ಮೃತ ಪಟ್ಟಿರುವ ಘಟನೆ ಮೈಸೂರಿನ ನಂಜನಗೂಡು ನಗರದಲ್ಲಿ ಸಂಭವಿಸಿದೆ. ಮೈಸೂರು ಸಮೀಪದ ಮಾರ್ಬಳ್ಳಿ ಗ್ರಾಮದ ನಿವಾಸಿ ವಸಂತ್​​(30) ಮೃತಪಟ್ಟಿರುವ ದುರ್ದೈವಿ. ನಂಜನಗೂಡಿನಲ್ಲಿ ಕೆಲಸದ ನಿಮಿತ್ತ ವಸಂತ್​ ಆಗಮಿಸಿದ್ದ. ನೂತನವಾಗಿ ನಿರ್ಮಿಸಿರುವ ರೈಲ್ವೆ ಮೇಲ್ಸೇತುವೆ ಮೇಲಕ್ಕೆ ತೆರಳುತ್ತಿದ್ದಾಗ ಹಿಂಬದಿಯಿಂದ ಬರುತ್ತಿದ್ದ ಕ್ಯಾಂಟರ್​​ ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಕೆಳಗಡೆ ಬಿದ್ದ ವೇಳೆ ಆತನ ಮೇಲೆ ಲಾರಿ ಹರಿದಿದೆ. ಬೈಕ್ ಸವಾರ ಸ್ಥಳದಲ್ಲಿ ಸಾವಿಗಿಡಾಗಿದ್ದು, ಬಳಿಕ ಮರಣೋತ್ತರ ಪರೀಕ್ಷೆಗಾಗಿ ನಗರದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದ್ದು, ಈ ಸಂಬಂಧ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Star Of Kudla

Learn More →

Leave a Reply

Your email address will not be published. Required fields are marked *