ಹಾಲಿ ಸ್ಪೀಕರ್ ಯು.ಟಿ.ಖಾದರ್ ಹಾಗೂ ಮಾಜಿ ಸ್ಪೀಕರ್ ನಡುವಿನ ಸಮರ ಜೋರು..!?

ಬೆಂಗಳೂರು: ರಾಜ್ಯ ವಿಧಾನಸಭೆಯ ಹಾಲಿ ಸ್ಪೀಕರ್ ಯು.ಟಿ. ಖಾದರ್ ಮತ್ತು ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನಡುವಿನ ರಾಜಕೀಯ ಸಮರ ಇದೀಗ ಭ್ರಷ್ಟಾಚಾರ ಆರೋಪಗಳ ಹಿನ್ನಲೆಯಲ್ಲಿ ತೀವ್ರಗೊಂಡಿದೆ.

ಮಾಜಿ ಸ್ಪೀಕರ್ ಕಾಗೇರಿ ಅವರು ಖಾದರ್ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಹೊರಿಸಿದ್ದಾರೆ. ಅವರು “ವಿಧಾನಸೌಧದ ಪುಸ್ತಕ ಮೇಳದಲ್ಲಿ ಭ್ರಷ್ಟಾಚಾರ ಎಸಗಲಾಗಿದೆ, ಶಾಸಕರ ಭವನದ ಸ್ಮಾರ್ಟ್ ಲಾಕ್ ಹಾಗೂ ಆಹಾರ ವ್ಯವಸ್ಥೆಯಲ್ಲಿ ಅಕ್ರಮ ನಡೆದಿದೆ, ಹಾಗೂ ಮಂಗಳೂರು ಮೂಲದವರಿಗೂ ಆಪ್ತರಿಗೂ ಗುತ್ತಿಗೆ ನೀಡಲಾಗಿದೆ” ಎಂದು ಆರೋಪಿಸಿದ್ದಾರೆ.

ಈ ಆರೋಪಗಳಿಗೆ ಸ್ಪೀಕರ್ ಯು.ಟಿ. ಖಾದರ್ ತಿರುಗೇಟು ನೀಡುತ್ತಾ, ಆರೋಪಗಳನ್ನು ಸಂಪೂರ್ಣ ನಿರಾಕರಿಸಿದ್ದಾರೆ. “ಮಾಜಿ ಸ್ಪೀಕರ್ ಪತ್ರ ಬರೆದರೆ ಉತ್ತರ ನೀಡುತ್ತೇನೆ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಆದರೆ, ಇದೇ ವೇಳೆ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ವಿರುದ್ಧವೂ ಸರ್ಕಾರದ ಮಟ್ಟದಲ್ಲಿ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿವೆ. ಸಿಎಂ ಕಚೇರಿಗೆ ಕಾಗೇರಿ ಸ್ಪೀಕರ್ ಆಗಿದ್ದ ಸಮಯದ ಕೆಲವು ಅಕ್ರಮಗಳ ಫೈಲುಗಳು ಈಗಾಗಲೇ ರವಾನೆಯಾಗಿದ್ದು, ತನಿಖೆ ನಡೆಸಲು ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿದೆ.

ಆರೋಪಗಳು:
ವೈಫೈ ಟೆಂಡರ್ ಹಗರಣ: ವಿಧಾನಸೌಧದಲ್ಲಿ ವೈಫೈ ಅಳವಡಿಕೆಗಾಗಿ ಖಾಸಗಿ ಕಂಪನಿಗೆ 5 ಕೋಟಿ ರೂ. ಟೆಂಡರ್ ನೀಡಲಾಗಿದೆ ಎಂಬ ಆರೋಪ. ವೈಫೈ ಸೇವೆ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ ಎಂಬ ಕುರಿತು ಶಾಸಕರು ಸಿಎಂಗೆ ದೂರು ನೀಡಿದ್ದಾರೆ.

ಕಾರ್ ಖರೀದಿ ಅಕ್ರಮ: ಶಾಸಕರ ಭವನದ ಪ್ರಯೋಜನಕ್ಕಾಗಿ ಇನೋವಾ ಕ್ರಿಸ್ಟಾ ಕಾರುಗಳ ಬದಲು ಧಾರವಾಡದ ಬಿಜೆಪಿ ಶಾಸಕರ ಒಡೆತನದ ಟಾಟಾ ಶೋರೂಮ್‌ನಿಂದ ನೆಕ್ಸಾನ್ ಕಾರುಗಳ ಖರೀದಿಗೆ ಕೋಟ್ಯಂತರ ರೂ. ಟೆಂಡರ್ ನೀಡಲಾಗಿದೆ. ಈ ಕಾರುಗಳು ಬಳಕೆಯಾಗದೇ ನಿಲ್ಲುತ್ತಿವೆ ಎಂಬ ಆರೋಪ.

ಟೆಲಿಕಾಸ್ಟ್ ಟೆಂಡರ್: ವಾರ್ತಾ ಇಲಾಖೆಯಿಂದ ಉಚಿತ ಪ್ರಸಾರದ ಅವಕಾಶವಿದ್ದರೂ, ಖಾಸಗಿ ಚಾನೆಲ್‌ಗೆ ವರ್ಷಕ್ಕೆ 3 ಕೋಟಿ ರೂ. ಟೆಂಡರ್ ನೀಡಲಾಗಿದೆ ಎಂಬ ದೂರು.

ಈ ಆರೋಪಗಳ ಹಿನ್ನಲೆಯಲ್ಲಿ ಹಾಲಿ ಮತ್ತು ಮಾಜಿ ಸ್ಪೀಕರ್‌ಗಳಿಬ್ಬರ ಮಧ್ಯೆ ಭ್ರಷ್ಟಾಚಾರ ಆರೋಪ–ಪ್ರತ್ಯಾರೋಪಗಳ ಕದನ ತೀವ್ರಗೊಂಡಿದೆ. ಕಾಂಗ್ರೆಸ್ ಸರ್ಕಾರವು ಮಾಜಿ ಸ್ಪೀಕರ್‌ಗಳ ವಿರುದ್ಧ ತನಿಖೆ ಆರಂಭಿಸುವ ಸಾಧ್ಯತೆ ಇದೆ.

Star Of Kudla

Learn More →

Leave a Reply

Your email address will not be published. Required fields are marked *