ನಿಯಮಗಳನ್ನು ಉಲ್ಲಂಘಿಸಿ ನಿರ್ಲಕ್ಷ್ಯ ವಹಿಸಿದ ಪರಿಣಾಮ 13 ಮಂದಿ ಆಸ್ಪತ್ರೆಗೆ ದಾಖಲು

ಪುತ್ತೂರು: ಮುಖ್ಯಮಂತ್ರಿಗಳೇ ಭಾಗವಹಿಸಿದ ಪುತ್ತೂರಿನ ಕಾರ್ಯಕ್ರಮವೊಂದರಲ್ಲಿ ನಿಯಮಗಳನ್ನು ಉಲ್ಲಂಘಿಸಿ ನಿರ್ಲಕ್ಷ್ಯ ವಹಿಸಿದ ಪರಿಣಾಮ 13 ಮಂದಿ ಆಸ್ಪತ್ರೆ ಸೇರಿದ ಘಟನೆ ನಡೆದಿದೆ. ಸರಕಾರ, ಗೃಹ ಇಲಾಖೆ, ಜಿಲ್ಲಾಡಳಿತ, ಕಾರ್ಯಕ್ರಮ ಸಂಯೋಜಿಸಿದ ಟ್ರಸ್ಟ್‍ನ ವೈಫಲ್ಯದಿಂದ ಈ ಘಟನೆ ನಡೆದಿದ್ದು, ಪೊಲೀಸ್ ಇಲಾಖೆಯನ್ನು ಅಪಬಳಕೆ ಮಾಡಲಾಗಿದೆ. ನಿಯಮ ಉಲ್ಲಂಘನೆಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ಆಗ್ರಹಿಸಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮ ಆಯೋಜನೆಗೊಂಡ ಕೊಂಬೆಟ್ಟು ಕ್ರೀಡಾಂಗಣವು ಯುವಜನ ಸೇವಾ ಕ್ರೀಡಾ ಇಲಾಖೆಗೆ ಸೇರಿದ್ದು, ನಾನು ಶಾಸಕನಾಗಿರುವಾಗ ಆ ಕ್ರೀಡಾಂಗಣ ಕ್ರೀಡೆಗೆ ಮಾತ್ರ ಬಳಕೆಯಾಗಬೇಕು ತೀರ್ಮಾನವಾಗಿ ಸರಕಾರದ ಉದ್ದೇಶವಾಗಿತ್ತು. ಅದನ್ನು ಟ್ರಸ್ಟ್‍ಗೆ, ವೈಯಕ್ತಿಕ ಕಾರ್ಯಕ್ರಮಕ್ಕೆ ಕೊಟ್ಟವರು ಯಾರು ?, ಯಾವ ಕಂಡೀಷನ್ ಹಾಕಲಾಗಿತ್ತು ಎಂದು ಪ್ರಶ್ನಿಸಿದರು.


ಕಾರ್ಯಕ್ರಮಕ್ಕೆ ಅನುಮತಿ ಕೊಟ್ಟವರು ನಿಯಮಬಾಹಿರವಾಗಿ ಕೊಟ್ಟಿದ್ದಾರೆ. ಪೊಲೀಸ್ ಇಲಾಖೆ ಏನು ಕ್ರಮ ಕೈಗೊಂಡಿದೆ ಎಂದು ಮಠಂದೂರು ಪ್ರಶ್ನಿಸಿದರು.

ಘಟನೆಯಲ್ಲಿ 13 ಮಂದಿ ಅಸ್ವಸ್ಥಗೊಂಡು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಲೀಲಾವತಿ ಹಾಗೂ ಬಿಪಾತಿಮಾ ಎಂಬವರು ಮಂಗಳವಾರವೂ ಆಸ್ಪತ್ರೆಯಲ್ಲೇ ಇದ್ದು, ನಾವು ಭೇಟಿ ಮಾಡಿದ್ದೇವೆ. ಆಸ್ಪತ್ರೆಯಿಂದ ಪೊಲೀಸ್ ಇಲಾಖೆಗೆ ಸರಿಯಾದ ಮಾಹಿತಿ ಹೋಗಿದೆಯೇ ? ಜಿಲ್ಲಾಡಳಿತಕ್ಕೆ ಮಾಹಿತಿ ಲಭಿಸಿದಾ ?, ಎಫ್‍ಐಆರ್ ಆಗಿದಾ ? ಮತ್ತು ಒಟ್ಟು ಘಟನೆಯ ಬಗ್ಗೆ ಸರಕಾರದ ನಿಲುವು ಏನು ಎಂದು ಮಠಂದೂರು ಪ್ರಶ್ನಸಿದರು.

ಟ್ರಸ್ಟ್ ಮಾಡಿದ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ದೆವಾಲಯದ ಜಾಗ ಬಳಕೆಗೆ ಅವಕಾಶವಿದೆಯೇ? ತಾಲೂಕಿನ ಎಲ್ಲಾ ದೆವಾಲಯಗಳ ಸಮಿತಿಯ ಮೂಲಕ ಈ ಕಾರ್ಯಕ್ರಮದ ಬ್ಯಾನರ್ ಹಾಕಿಸಲಾಗಿದೆ. ಆ ಮೂಲಕ ದೆವಾಲಯದ ಹಣವೂ ದುರುಪಯೋಗ ಆಗಿದೆ. ಇದರ ಬಗ್ಗೆಯೂ ತನಿಖೆಯಾಗಲಿ ಎಂದು ಆಗ್ರಹಿಸಿದರು.


ನಿಜಕ್ಕೂ ದಾನ ಮಾಡಿದರೆ ಇನ್ನೊಂದು ಕೈಗೆ ಗೊತ್ತಾಗಬಾರದು ಎಂಬ ಮಾತಿದೆ. ಆದರೆ ಇಲ್ಲಿ ಬಿಜೆಪಿ, ಪ್ರಧಾನಿಯವರನ್ನೂ ಉಲ್ಲೇಖಿಸುವ ಮೂಲಕ ರಾಜಕೀಯ ಲಾಭದ ಕಾರ್ಯಕ್ರಮವಾಗಿತ್ತು. ವೈಫಲ್ಯಗಳನ್ನು ಮರೆಮಾಚದೆ ತಪ್ಪಿತಸ್ಥರ ವಿರುದ್ಧ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಸಂಜೀವ ಮಠಂದೂರು ಆಗ್ರಹಿಸಿದರು.

ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಮಾತನಾಡಿ, ಪುತ್ತೂರು ಶಾಸಕರು ಹಲವು ದಿನಗಳಿಂದ 1 ಲಕ್ಷ ಜನರಿಗೆ ವಸ್ತ್ರ, ಅನ್ನದಾನ ಎಂದು ಮಾಧ್ಯಮ ಹೇಳಿಕೆಗಳ ಮೂಲಕ ಪ್ರಚಾರ ಮಾಡುತ್ತಲೇ ಬಂದಿದ್ದಾರೆ. ಆದರೆ ವ್ಯವಸ್ಥೆಗಳನ್ನು ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. 10 ಗಂಟೆಗೆ ಕಾರ್ಯಕ್ರಮಕ್ಕೆ ಬಂದವರನ್ನು ಯಾವುದೇ ವ್ಯವಸ್ಥೆಗಳಿಲ್ಲದೆ ಕಟ್ಟಿ ಹಾಕಿ ಕೂರಿಸಿದ್ದಾರೆ. ವಯಸ್ಕರು, ಮಕ್ಕಳ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ. ಪೊಲೀಸ್ ಇಲಾಖೆಯೂ ಇದನ್ನು ಕಂಡು ಯಾಕೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಪ್ರಶ್ನಿಸಿದರು.

10 ಸಾವಿರ ಮಂದಿ ಸೇರುವ ಸಾಮಥ್ರ್ಯದ ಸ್ಥಳದಲ್ಲಿ 1 ಲಕ್ಷ ಮಂದಿಯನ್ನು ಸೇರಿಸುವಾಗ ಜಿಲ್ಲಾಡಳಿತ ಗಮನಿಸಬೇಕಿತ್ತು. ಆದರೆ ಇಲ್ಲಿ ರಾಜಕೀಯ ಲಾಭಕ್ಕಾಗಿ, ಸಿಎಂ ಎದುರು ಶಕ್ತಿ ಪ್ರದರ್ಶನ ಮಾಡುತ್ತಾ ಪುತ್ತೂರು ಶಾಸಕರು, ಬಡವರನ್ನು ಅಪಮಾನಗೊಳಿಸಿ ಹಿಂಸೆ ನೀಡಿದ್ದಾರೆ.ಪೊಲೀಸ್ ಇಲಾಖೆ, ಜಿಲ್ಲಾಡಳಿತ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಿ ಎಂದು ದಯಾನಂದ್ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಪಿ.ಬಿ., ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು ಉಪಸ್ಥಿತರಿದ್ದರು.

News Editor

Learn More →

Leave a Reply

Your email address will not be published. Required fields are marked *