ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಅವರ 63ನೇ ಪುಣ್ಯಸ್ಮರಣೆ

1963 ಸೆಪ್ಟೆಂಬರ್ 6 ರಂದು ನಿಧನರಾದ ಕನ್ನಡದ ಪ್ರಥಮ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಅವರಿಗೆ ಇಂದಿಗೆ 63ನೇ ಪುಣ್ಯಸ್ಮರಣೆ. ಅದರೂ ಅವರ ನಿವಾಸದಲ್ಲಿ ಕನ್ನಡದ ಕಂಪು ಬೀರುತ್ತಿಲ್ಲ ಯಾಕೆ? ಮನೆ ಇರುವುದು ಕೇರಳದ ಮಂಜೇಶ್ವರ ಗಡಿಯಾಚೆಯ ಕನ್ನಡಿಗರ ಮನೆ. ಅವರು ಹೃದಯದ ಭಾಷೆ ಕನ್ನಡ. ಅದರೂ 23ಭಾಷೆಗಳನ್ನಾಡುವ ವಿಶ್ವ ಕೋಶ. ಕನ್ನಡ ಮಳೆಯಾಳಿಗಳ ಮದ್ಯ ಈ ಕಾಲಕಳೆದ ರಾಷ್ಟ್ರ ಕವಿಗಳ ಮನೆ ಬಡವಾಯಿತೇ.?

ಕಾಸರಗೋಡು ಜಿಲ್ಲೆಯ ಮಂಜೇಶ್ವರದಲ್ಲಿರುವ ಒಂದು ಹಳೆಯ ಮನೆ… ಹೊರನೋಟಕ್ಕೆ ಸಾಮಾನ್ಯ ಮನೆಯಂತೆ ಕಂಡರೂ, ಅದರ ಗೋಡೆಗಳ ನಡುವೆ ಕನ್ನಡ ಸಾಹಿತ್ಯದ ಅಪಾರ ಇತಿಹಾಸವೇ ಅಡಗಿದೆ. ವಿಶ್ವಕೋಶ ನಡೆದಾಡಿದ ಇದೇ ಕನ್ನಡದ ಪ್ರಥಮ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಅವರ ನಿವಾಸ — ‘ಗಿಳಿವಿಂಡು’.
1883ರ ಮಾರ್ಚ್ 23ರಂದು ಮಂಜೇಶ್ವರದಲ್ಲಿ ಜನಿಸಿದ ಗೋವಿಂದ ಪೈ ಅವರು ಕನ್ನಡ ಸಾಹಿತ್ಯದ ಅಪೂರ್ವ ಪ್ರತಿಭೆ. ಕಾವ್ಯ, ಇತಿಹಾಸ, ಸಂಶೋಧನೆ ಹಾಗೂ ಬಹುಭಾಷಾ ಅಧ್ಯಯನದಲ್ಲಿ ಅಪಾರ ಆಸಕ್ತಿ ಹೊಂದಿದ್ದ ಅವರು ಕನ್ನಡ ಸಾಹಿತ್ಯಕ್ಕೆ ವಿಶಿಷ್ಟ ಕೊಡುಗೆ ನೀಡಿದರು. 1949ರಲ್ಲಿ ಮದ್ರಾಸ್ ಸರ್ಕಾರ ಅವರಿಗೆ ‘ರಾಷ್ಟ್ರಕವಿ’ ಗೌರವ ನೀಡಿತು.
ಗೋವಿಂದ ಪೈ ಅವರು ಕನ್ನಡದ ಕಂಪನ್ನು ಗಡಿನಾಡಿನಲ್ಲಿ ಪಸರಿಸಿದ ಮಹಾನ್ ಸಾಹಿತಿ. ಕನ್ನಡದೊಂದಿಗೆ ಮಲಯಾಳಂ ಸೇರಿದಂತೆ ಹಲವು ಭಾಷೆಗಳ ಅಧ್ಯಯನ ನಡೆಸಿದ ಅವರು ಬಹುಭಾಷಾ ವಿದ್ವಾಂಸರಾಗಿದ್ದರು. ಎರಡು ಭಾಷೆ, ಎರಡು ಸಂಸ್ಕೃತಿ ಮತ್ತು ಎರಡು ರಾಜ್ಯಗಳ ನಡುವೆ ಸೇತುವೆಯಂತೆ ಬದುಕಿದ ಅವರ ಜೀವನವೇ ಗಡಿನಾಡಿನ ಸಾಂಸ್ಕೃತಿಕ ಸಾಮರಸ್ಯದ ಪ್ರತೀಕ.
‘ಗಿಳಿವಿಂಡು’ ಎಂಬ ಹೆಸರೇ ಒಂದು ಸಾಹಿತ್ಯದ ನೆನಪು. ಗೋವಿಂದ ಪೈ ಅವರ ಪ್ರಸಿದ್ಧ ಕವನ ಸಂಕಲನದ ಹೆಸರಿನಿಂದ ಅವರ ನಿವಾಸಕ್ಕೂ ‘ಗಿಳಿವಿಂಡು’ ಎಂಬ ಹೆಸರು ಬಂದಿದೆ. 1930ರಲ್ಲಿ ಪ್ರಕಟವಾದ ಈ ಕವನ ಸಂಕಲನದಲ್ಲಿ 46 ಕವನಗಳಿದ್ದು, ಪ್ರಕೃತಿ, ದೇಶಪ್ರೇಮ, ಕನ್ನಡಾಭಿಮಾನ ಹಾಗೂ ಮಾನವ ಬದುಕಿನ ವಿವಿಧ ಆಯಾಮಗಳು ಪ್ರತಿಬಿಂಬಿಸುತ್ತವೆ.


ಎರಡು ದಡಗಳ ನಡುವೆ ಕನ್ನಡದ ನೀರು ಹರಿಸಿದ ಕವಿ
ಗೋವಿಂದ ಪೈ ಅವರ ಬದುಕನ್ನು ಕೇವಲ ಒಬ್ಬ ಕನ್ನಡ ಕವಿಯ ಬದುಕು ಎಂದು ನೋಡಲು ಸಾಧ್ಯವಿಲ್ಲ. ಅವರ ಕರ್ಮಭೂಮಿ ಮಂಜೇಶ್ವರ; ಜನ್ಮಭೂಮಿಯೂ ಇದೇ ಗಡಿನಾಡು. ಒಂದು ಕಡೆ ಕರ್ನಾಟಕದ ಕನ್ನಡ ಸಂಸ್ಕೃತಿ, ಮತ್ತೊಂದು ಕಡೆ ಕೇರಳದ ಮಲಯಾಳಂ ಸಂಸ್ಕೃತಿ—ಇವೆರಡರ ನಡುವೆ ಅವರು ಕನ್ನಡದ ಕಂಪನ್ನು ಪಸರಿಸಿದರು.
ಆದರೆ ಇಂದು ಗಡಿನಾಡ ಕನ್ನಡಿಗರ ಸಾಂಸ್ಕೃತಿಕ ಹೆಮ್ಮೆಯ ಪ್ರತೀಕವಾಗಿರುವ ಈ ಸ್ಮಾರಕಕ್ಕೆ ಇನ್ನಷ್ಟು ಕಾಳಜಿ ಮತ್ತು ನಿರಂತರ ಚಟುವಟಿಕೆ ಅಗತ್ಯವಾಗಿದೆ.
ಗೋವಿಂದ ಪೈ ಅವರನ್ನು ಕೇವಲ ಒಂದು ದಿನ ಸ್ಮರಿಸುವುದಕ್ಕಿಂತ, ಅವರ ಹೆಸರಿನಲ್ಲಿ ಒಂದು ರಾಷ್ಟ್ರೀಯ ಮಟ್ಟದ ಸಾಹಿತ್ಯ–ಸಾಂಸ್ಕೃತಿಕ ಸ್ಮಾರಕ ರೂಪುಗೊಳ್ಳಬೇಕು ಎಂಬುದು ಕನ್ನಡಿಗರ ಆಶಯವಾಗಬೇಕು.
‘ಗಿಳಿವಿಂಡು’ ಕೇವಲ ಸ್ಮಾರಕವಾಗಬಾರದು
ಗಿಳಿವಿಂಡನ್ನು ಪ್ರವಾಸಿಗರು, ಸಾಹಿತ್ಯಾಸಕ್ತರು, ಸಂಶೋಧಕರು ಹಾಗೂ ವಿದ್ಯಾರ್ಥಿಗಳು ನಿರಂತರವಾಗಿ ಭೇಟಿ ನೀಡುವ ಜ್ಞಾನಕೇಂದ್ರವನ್ನಾಗಿ ರೂಪಿಸಬಹುದು.
ಗೋವಿಂದ ಪೈ ಅವರ ಕೃತಿಗಳ ಪುಸ್ತಕ ಲೋಕ ನಿರ್ಮಾಣವಾಗಬೇಕು.
ಅವರ ಬದುಕು ಮತ್ತು ಸಾಹಿತ್ಯವನ್ನು ಪರಿಚಯಿಸುವ ಶಾಶ್ವತ ಕಲಾಪ್ರದರ್ಶನ ಇರಬೇಕು
ಅವರು ಬಳಸಿದ ವಸ್ತುಗಳು, ಬರವಣಿಗೆ ಸಾಮಗ್ರಿಗಳು ಹಾಗೂ ಅಪರೂಪದ ದಾಖಲೆಗಳನ್ನು ಸಂರಕ್ಷಿಸಬೇಕು.
ಸಂಶೋಧಕರಿಗೆ ಅನುಕೂಲವಾಗುವ ಅಧ್ಯಯನ ಕೇಂದ್ರ ಮತ್ತು ಗ್ರಂಥಾಲಯ ಇರಬೇಕು.
ಗೋಡೆ ಗೋಡೆಗಳಲ್ಲೂ ಅವರ ಬದುಕು, ಸಾಹಿತ್ಯ ಮತ್ತು ಚಿಂತನೆಗಳ ಕುರಿತು ಮಾಹಿತಿ ದೊರೆಯುವಂತೆ ಮಾಡಬೇಕು.
ನಿರಂತರವಾಗಿ ಸಾಹಿತ್ಯ, ಕಲೆ, ರಂಗಭೂಮಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಬೇಕು.
ಕರ್ನಾಟಕ ಮತ್ತು ಕೇರಳದ ಗಡಿಭಾಗದ ಕನ್ನಡ ಶಾಲೆಗಳ ವಿದ್ಯಾರ್ಥಿಗಳನ್ನು ಕರೆತಂದು ಸಾಹಿತ್ಯಿಕ ಕಾರ್ಯಕ್ರಮಗಳನ್ನು ಆಯೋಜಿಸಬೇಕು.
ಹೀಗೆ ಮಾಡಿದಾಗ ‘ಗಿಳಿವಿಂಡು’ ಒಂದು ಕಟ್ಟಡವಾಗಿರದೆ, ಜೀವಂತ ಸಾಹಿತ್ಯ ವಿಶ್ವವಿದ್ಯಾಲಯದಂತೆ ರೂಪುಗೊಳ್ಳಬಹುದು.
ನಿರ್ಲಕ್ಷ್ಯಕ್ಕೊಳಗಾಗಿದ್ದ ಕವಿಮನೆ
ಗೋವಿಂದ ಪೈ ನಿಧನದ ನಂತರ ಅವರ ನಿವಾಸವನ್ನು ಸ್ಮಾರಕವನ್ನಾಗಿ ರೂಪಿಸುವ ಉದ್ದೇಶದಿಂದ ಸರ್ಕಾರಕ್ಕೆ ಒಪ್ಪಿಸಲಾಯಿತು. ಆದರೆ ಹಲವು ವರ್ಷಗಳ ಕಾಲ ಸೂಕ್ತ ನಿರ್ವಹಣೆ ಇಲ್ಲದೆ ಮನೆ ಜೀರ್ಣಾವಸ್ಥೆಗೆ ತಲುಪಿತ್ತು.
1976ರಲ್ಲಿ ಕೇರಳ ಮತ್ತು ಕರ್ನಾಟಕ ಸರ್ಕಾರಗಳ ಪ್ರತಿನಿಧಿಗಳನ್ನು ಒಳಗೊಂಡ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಮಿತಿ ರಚನೆಯಾಯಿತು. ಬಳಿಕ ಗೋವಿಂದ ಪೈ ಸ್ಮಾರಕ ಟ್ರಸ್ಟ್ ಕೂಡ ರಚನೆಯಾಗಿ ‘ಗಿಳಿವಿಂಡು’ ಯೋಜನೆಗೆ ವೇಗ ದೊರೆಯಿತು.
ಕೇರಳ ಮತ್ತು ಕರ್ನಾಟಕ ಸರ್ಕಾರಗಳ ಸಹಕಾರ ಹಾಗೂ ವಿವಿಧ ಸಂಸ್ಥೆಗಳ ನೆರವಿನಿಂದ ಹಳೆಯ ಮನೆಯನ್ನು ಪುನರುಜ್ಜೀವನಗೊಳಿಸಿ ವಿಶಾಲ ಸಾಂಸ್ಕೃತಿಕ ಸಂಕೀರ್ಣವಾಗಿ ರೂಪಿಸಲಾಯಿತು.
ಮನೆಗೆ ಹೊಂದಿಕೊಂಡಂತೆ ‘ಭವಾನಿಕಾ’ ಸಭಾಭವನ, ತೆರೆದ ರಂಗಮಂದಿರ, ಗ್ರಂಥಾಲಯ, ಸಂಶೋಧಕರ ಅಧ್ಯಯನ ಕೊಠಡಿ, ದಾಖಲೆ ಸಂಗ್ರಹಾಲಯ ಹಾಗೂ ಅತಿಥಿಗೃಹಗಳು ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸಲಾಯಿತು.
2017ರ ಜನವರಿ 19ರಂದು ‘ಗಿಳಿವಿಂಡು’ ಯೋಜನೆ ಉದ್ಘಾಟನೆಗೊಂಡಿತು. ಸಾಹಿತ್ಯ, ಸಂಸ್ಕೃತಿ ಮತ್ತು ಸಂಶೋಧನೆಯ ಕೇಂದ್ರವಾಗಿ ಈ ಸ್ಥಳ ಬೆಳೆಯಬೇಕೆಂಬ ಮಹತ್ವಾಕಾಂಕ್ಷೆಯ ಆಶಯ ಇದರ ಹಿಂದೆ ಇತ್ತು.
ಎರಡು ಸರ್ಕಾರಗಳು ಸೇರಿ ರೂಪಿಸಿದ ಈ ಸ್ಮಾರಕವು ಮುಂದಿನ ದಿನಗಳಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕಿದೆ. ಆಡಳಿತಾತ್ಮಕ ಅಥವಾ ತಾಂತ್ರಿಕ ಅಡಚಣೆಗಳಿದ್ದರೆ ಅವುಗಳನ್ನು ಬಗೆಹರಿಸಿ ಗಿಳಿವಿಂಡಿಗೆ ಮತ್ತೆ ಚೈತನ್ಯ ತುಂಬುವ ಹೊಣೆಗಾರಿಕೆ ಎರಡೂ ರಾಜ್ಯಗಳ ಆಡಳಿತದ ಮೇಲಿದೆ.
ಕವಿಯ ನೆನಪುಗಳನ್ನು ಹೊತ್ತ ಮನೆ
ಗೋವಿಂದ ಪೈ ಬಳಸುತ್ತಿದ್ದ ವಸ್ತುಗಳು, ಅವರ ಪುಸ್ತಕಗಳು, ಬರವಣಿಗೆಗೆ ಸಂಬಂಧಿಸಿದ ಸಾಮಗ್ರಿಗಳು ಹಾಗೂ ಅವರ ಸಾಹಿತ್ಯಿಕ ಬದುಕಿನ ನೆನಪುಗಳನ್ನು ಇಲ್ಲಿ ಸಂರಕ್ಷಿಸುವುದು ಅತ್ಯಂತ ಮಹತ್ವದ್ದು.
ಅವರ ಗ್ರಂಥಾಲಯ ಮತ್ತು ಸಾಹಿತ್ಯ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಪ್ರಮುಖ ತಾಣವಾಗಿಯೂ ಗಿಳಿವಿಂಡು ಬೆಳೆಯಬೇಕು.
ಏಕೆಂದರೆ ಗೋವಿಂದ ಪೈ ಅವರ ದೇಹ ಇಲ್ಲದಿದ್ದರೂ, ಅವರ ಅಕ್ಷರಗಳ ಉಸಿರು ಈ ಮನೆಯಲ್ಲಿ ಇನ್ನೂ ಉಳಿದಿದೆ.
ಈ ಬಾರಿ ಮತ್ತೆ ಮೊಳಗಿದ ಗಿಳಿವಿಂಡಿನ ಸ್ವರ
ಪ್ರತಿವರ್ಷ ಕೆಲವರು ಗಿಳಿವಿಂಡಿಗೆ ಆಗಮಿಸಿ ಗೋವಿಂದ ಪೈ ಅವರ ಜನ್ಮದಿನವನ್ನು ಆಚರಿಸುತ್ತಾರೆ. ಆದರೆ ಈ ಬಾರಿ ಸೆಪ್ಟೆಂಬರ್ 7ರಂದು ನಡೆದ ಜನ್ಮದಿನಾಚರಣೆ ವಿಶೇಷ ಅರ್ಥ ಪಡೆದುಕೊಂಡಿತು.
ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರ ನೇತೃತ್ವದಲ್ಲಿ, ಸಾಹಿತಿ ಉದಯಕುಮಾರ್ ಇರ್ವತ್ತೂರು ಅವರ ಮುತುವರ್ಜಿಯಲ್ಲಿ ಹಿರಿಯರು, ಸಾಹಿತಿಗಳು, ಲೇಖಕರು, ಕಲಾವಿದರು, ಪತ್ರಕರ್ತರು ಹಾಗೂ ವಿದ್ಯಾರ್ಥಿಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಿರುವುದು ಗಿಳಿವಿಂಡಿನ ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೊಸ ಉಸಿರು ತುಂಬಿದಂತಾಗಿದೆ. ಮುಂದಿನ ದಿನಗಳಲ್ಲಿ ಉಭಯ ಜಿಲ್ಲೆಗಳ ಕನ್ನಡಿಗರು ರಾಷ್ಟೀಯ ಕವಿಗಳಿಗೆ ಗೌರವ ನೀಡುವುದರ ಜತೆಯಲ್ಲಿ ಸಾಹಿತ್ಯ,ರಂಗ ಚಟುವಟಿಕೆಗಳನ್ನು ಅಳವಡಿಸಿ ಕಾರ್ಯಕ್ರಮ ಅಗಬೇಕು ಇದನ್ನ ಉಭಯ ಜಿಲ್ಲಾಡಳಿತ ವ್ಯವಸ್ಥೆಯನ್ನು ಮಾಡಿದಾಗ ಅವರಿಗೆ ಸಲ್ಲುವ ಪೂರ್ಣಗೌರವವಾಗಿರುತ್ತದೆ.
ಇಂತಹ ಕಾರ್ಯಕ್ರಮಗಳು ಕೇವಲ ಆಚರಣೆಗೆ ಸೀಮಿತವಾಗದೆ ನಿರಂತರವಾಗಿ ನಡೆಯಬೇಕು. ಆಗ ಮಾತ್ರ ಗೋವಿಂದ ಪೈ ಅವರ ನೆನಪು ಮುಂದಿನ ಪೀಳಿಗೆಯಲ್ಲೂ ಜೀವಂತವಾಗಿರುತ್ತದೆ.
ರಾಷ್ಟ್ರೀಯ ಸ್ಮಾರಕವಾಗಲಿ ಗಿಳಿವಿಂಡು
ಗಿಳಿವಿಂಡನ್ನು ಕರ್ನಾಟಕ ಮತ್ತು ಕೇರಳ ಸರ್ಕಾರಗಳು ಜಂಟಿಯಾಗಿ ಇನ್ನಷ್ಟು ಅಭಿವೃದ್ಧಿಪಡಿಸುವ ಅಗತ್ಯವಿದೆ. ಇದು ಕೇವಲ ಒಂದು ಕವಿಯ ಮನೆಯಲ್ಲ; ಎರಡು ರಾಜ್ಯಗಳ ಗಡಿಯಲ್ಲಿ ಕನ್ನಡ–ಮಲಯಾಳಂ ಸಾಂಸ್ಕೃತಿಕ ಸಾಮರಸ್ಯದ ಸಂಕೇತ.
ಇಲ್ಲಿ ಶಾಶ್ವತ ಸಾಹಿತ್ಯೋತ್ಸವ, ಸಂಶೋಧನಾ ಕೇಂದ್ರ, ಬಹುಭಾಷಾ ಗ್ರಂಥಾಲಯ, ಕಲಾ ಪ್ರದರ್ಶನ, ರಂಗಚಟುವಟಿಕೆಗಳು ಮತ್ತು ವಿದ್ಯಾರ್ಥಿಗಳಿಗಾಗಿ ಸಾಹಿತ್ಯ ಶಿಬಿರಗಳು ನಿರಂತರವಾಗಿ ನಡೆಯಬೇಕು.
ಗೋವಿಂದ ಪೈ ಅವರ ಸಾಹಿತ್ಯವನ್ನು ಅಧ್ಯಯನ ಮಾಡುವವರಿಗೆ ದೇಶದ ವಿವಿಧ ವಿಶ್ವವಿದ್ಯಾಲಯಗಳಿಂದ ಬರುವ ಸಂಶೋಧಕರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಗಿಳಿವಿಂಡನ್ನು ಒಂದು ರಾಷ್ಟ್ರೀಯ ಸಾಹಿತ್ಯ–ಸಾಂಸ್ಕೃತಿಕ ಸ್ಮಾರಕವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಎರಡೂ ರಾಜ್ಯ ಸರ್ಕಾರಗಳು ಕೈಜೋಡಿಸಬೇಕು.
ಗಡಿನಾಡ ಕನ್ನಡಿಗರ ಪಾಲಿಗೆ ಇದು ಕೇವಲ ಒಂದು ಸ್ಮಾರಕವಲ್ಲ. ಇದು ಅವರ ಅಸ್ಮಿತೆ, ಹೆಮ್ಮೆ ಮತ್ತು ಕನ್ನಡದ ಬಂಗಾರದ ಕಿರೀಟ.
ಗೋವಿಂದ ಪೈ ಅವರನ್ನು ವರ್ಷಕ್ಕೊಮ್ಮೆ ಸ್ಮರಿಸುವುದಷ್ಟೇ ಸಾಕಾಗದು. ಅವರ ಅಕ್ಷರಗಳನ್ನು ಉಳಿಸಬೇಕು, ಅವರ ವಿಚಾರಗಳನ್ನು ಬೆಳೆಸಬೇಕು, ಅವರ ಸಾಹಿತ್ಯವನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕು.
ಸಾಹಿತಿಗಳು, ಕಲಾವಿದರು, ಪತ್ರಕರ್ತರು, ಕನ್ನಡಪರ ಸಂಘಟನೆಗಳು, ವಿದ್ಯಾರ್ಥಿಗಳು ಹಾಗೂ ಗಡಿನಾಡ ಕನ್ನಡಿಗರು ಒಂದಾಗಿ ನಿಂತರೆ ಗಿಳಿವಿಂಡಿಗೆ ಮತ್ತೆ ವೈಭವದ ದಿನಗಳನ್ನು ತರಬಹುದು.
ಗೋವಿಂದ ಪೈ ಅವರು ಎರಡು ದಡಗಳ ನಡುವೆ ಕನ್ನಡದ ನೀರು ಹರಿಸಿದವರು. ಇಂದು ಆ ನೀರು ಬತ್ತದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ.
‘ಗಿಳಿವಿಂಡು’ ಒಂದು ಮನೆ ಮಾತ್ರವಲ್ಲ — ಅದು ಕನ್ನಡದ ನೆನಪಿನ ಮನೆ.
ಅದನ್ನು ಉಳಿಸೋಣ. ಬೆಳೆಸೋಣ. ಸದಾ ಜೀವಂತವಾಗಿರಿಸೋಣ.
ಗಡಿನಾಡಿನ ಈ ಬಂಗಾರದ ಕಿರೀಟವನ್ನು ಮುಂದಿನ ಪೀಳಿಗೆಗೆ ಹೆಮ್ಮೆಯಿಂದ ಹಸ್ತಾಂತರಿಸೋಣ.

(ಬರಹ: ರಾಜೇಶ್ ದಡ್ಡಂಗಡಿ)

Star Of Kudla

Learn More →

Leave a Reply

Your email address will not be published. Required fields are marked *