ಆನ್‌ಲೈನ್ ತರಕಾರಿಗಳು ತಾಜಾವಾಗಿ ಕಾಣಲು ಅಪಾಯಕಾರಿ ಕೆಮಿಕಲ್ ಸ್ಪ್ರೇ..!! ಕಟ್ಟುನಿಟ್ಟಿನ ಕ್ರಮಕ್ಕೆ ಸಚಿವ ಖಾದರ್ ಸೂಚನೆ

ಬೆಂಗಳೂರು: ಆನ್‌ಲೈನ್ ವೇದಿಕೆಗಳಲ್ಲಿ ಮಾರಾಟವಾಗುವ ತರಕಾರಿಗಳು ತಾಜಾವಾಗಿ ಕಾಣಲು ಅಪಾಯಕಾರಿ ರಾಸಾಯನಿಕ (ಕೆಮಿಕಲ್) ಸ್ಪ್ರೇ ಮಾಡುತ್ತಿರುವ ಕುರಿತು ದೂರುಗಳು ಕೇಳಿಬಂದಿದ್ದು, ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಯು.ಟಿ. ಖಾದರ್ ಅವರು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಹಕರ ಆರೋಗ್ಯದ ಹಿತದೃಷ್ಟಿಯಿಂದ ಆಹಾರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಶೀಘ್ರದಲ್ಲೇ ಈ ಜಾಲದ ವಿರುದ್ಧ ಕಟ್ಟುನಿಟ್ಟಿನ ಚಟುವಟಿಕೆ ಆರಂಭಿಸಲಾಗುವುದು ಎಂದರು.

ಇತ್ತೀಚೆಗೆ ರಾಜ್ಯದ ವಿವಿಧ ಹೋಟೆಲ್‌ಗಳು ಹಾಗೂ ಕ್ಲಬ್‌ಗಳ ಮೇಲೆ ಅಧಿಕಾರಿಗಳು ನಡೆಸಿದ ದಾಳಿಯ ವೇಳೆ ಹಲವಾರು ಲೋಪದೋಷಗಳು ಬೆಳಕಿಗೆ ಬಂದಿವೆ. ಈ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಹಾಗೂ ನೈರ್ಮಲ್ಯ ಕಾಪಾಡುವ ಕುರಿತು ಮಹತ್ವದ ಯೋಜನೆ ರೂಪಿಸಲಾಗಿದೆ. ಮುಂದಿನ ಒಂದು ವಾರ ಅಥವಾ 15 ದಿನಗಳಲ್ಲಿ ಹೋಟೆಲ್ ಹಾಗೂ ರೆಸ್ಟೋರೆಂಟ್ ಅಸೋಸಿಯೇಷನ್ ಮುಖಂಡರು ಮತ್ತು ಇಂದಿರಾ ಕ್ಯಾಂಟಿನ್ ಗುತ್ತಿಗೆದಾರರೊಂದಿಗೆ ವಿಶೇಷ ಸಭೆ ನಡೆಸಲಾಗುವುದು. ಆಹಾರ ತಯಾರಿಕೆ, ಸುರಕ್ಷತೆ ಮತ್ತು ನೌಕರರಿಗೆ ನೀಡಬೇಕಾದ ಸೂಕ್ತ ತರಬೇತಿ ಕುರಿತು ಈ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಇದೇ ವೇಳೆ ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗಿರುವ ಔಷಧ ಮಾಫಿಯಾ ಪ್ರಕರಣದ ಸಿಐಡಿ ತನಿಖೆಯ ಪ್ರಗತಿಯ ಬಗ್ಗೆಯೂ ಸಚಿವರು ಮಾಹಿತಿ ನೀಡಿದರು. ಪ್ರಕರಣದ ಮುಖ್ಯ ರೂವಾರಿ (ಕಿಂಗ್‌ಪಿನ್) ಈಗಾಗಲೇ ಸಿಕ್ಕಿಬಿದ್ದಿದ್ದು, ನಕಲಿ ಅಥವಾ ಕಳಪೆ ಔಷಧಗಳು ಪ್ರಮುಖ ಖಾಸಗಿ ಆಸ್ಪತ್ರೆಗಳಿಗೆ ಪೂರೈಕೆಯಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಸರ್ಕಾರಿ ಆಸ್ಪತ್ರೆಗಳಿಗೆ ಈ ರೀತಿಯ ಯಾವುದೇ ಔಷಧ ಪೂರೈಕೆಯಾಗಿಲ್ಲ. ತನಿಖಾ ತಂಡವು ಶೀಘ್ರದಲ್ಲೇ ಸಂಪೂರ್ಣ ಸತ್ಯಾಸತ್ಯತೆಯನ್ನು ಹೊರತರಲಿದೆ ಎಂದು ಅವರು ಸ್ಪಷ್ಟಪಡಿಸಿದರು.

ಅಲ್ಲದೆ, ಅಪಾಯಕಾರಿ ‘ದತ್ತೂರ’ ಬೀಜಗಳನ್ನು ಮಾರಾಟ ಮಾಡುತ್ತಿದ್ದ ಮೂರು ಇ-ಕಾಮರ್ಸ್ ಜಾಲತಾಣಗಳ ಆಹಾರ ಪರವಾನಗಿಯನ್ನು ಅಮಾನತುಗೊಳಿಸಿರುವುದಾಗಿ ಸಚಿವರು ತಿಳಿಸಿದರು. ವಿಷಕಾರಿ ವಸ್ತುವಾದ ದತ್ತೂರ ಬೀಜಗಳನ್ನು ನಿಯಮಬಾಹಿರವಾಗಿ ಮಾರಾಟ ಮಾಡಲಾಗುತ್ತಿತ್ತು. ಪರಿಶೀಲನೆ ವೇಳೆ 2,100 ದತ್ತೂರ ಬೀಜಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಸಂಬಂಧ ಸ್ಥಳೀಯ ಕೇಂದ್ರ ಅಧಿಕಾರಿಗಳು ಸರಿಯಾಗಿ ಸ್ಪಂದಿಸದ ಕಾರಣ ಕೇಂದ್ರ ಆಹಾರ ಸುರಕ್ಷತೆ ಮತ್ತು ಕಾಯ್ದೆ (FSSAI) ಸಿಇಒಗೆ ಪತ್ರ ಬರೆಯಲಾಗಿದೆ ಎಂದು ಹೇಳಿದರು.

Star Of Kudla

Learn More →

Leave a Reply

Your email address will not be published. Required fields are marked *