ಮಂಗಳೂರು: ಹೈಟೆನ್ಷನ್ ತಂತಿಗೆ ಕಬ್ಬಿಣದ ರಾಡ್ ತಾಗಿ ದುರಂತ- ಗುತ್ತಿಗೆದಾರ ಸ್ಥಳದಲ್ಲೇ ಸಾವು

ಮಂಗಳೂರು : ಶೀಟ್ ಮೇಲ್ಛಾವಣಿ ನಿರ್ಮಾಣ ಕಾಮಗಾರಿ ವೇಳೆ ಹೈಟೆನ್ಷನ್ ವಿದ್ಯುತ್ ತಂತಿ ತಾಗಿ ಗುತ್ತಿಗೆದಾರರೊಬ್ಬರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕೃಷ್ಣಾಪುರ 6ನೇ ಬ್ಲಾಕ್‌ನಲ್ಲಿ ಸೋಮವಾರ ಸಂಜೆ ಸಂಭವಿಸಿದೆ. ಕೃಷ್ಣಾಪುರ ಚಕ್ರವರ್ತಿ ಕ್ರೀಡಾಂಗಣ ಸಮೀಪದ ನಿವಾಸಿ ಭಾಸ್ಕರ (ಶೀಟ್ ಮೇಲ್ಛಾವಣಿ ನಿರ್ಮಾಣ ಗುತ್ತಿಗೆದಾರ) ಮೃತ ದುರ್ದೈವಿ.

ಕೃಷ್ಣಾಪುರ 6ನೇ ಬ್ಲಾಕ್‌ನಲ್ಲಿರುವ ವಸತಿ ಸಮುಚ್ಚಯವೊಂದರ ತಗುಡು ಶೀಟ್ ಮೇಲ್ಛಾವಣಿ ನಿರ್ಮಾಣ ಕಾರ್ಯಕ್ಕಾಗಿ ಭಾಸ್ಕರ ಅವರು ಕಬ್ಬಿಣದ ರಾಡ್ ಮೂಲಕ ಅಳತೆ ತೆಗದುಕೊಳ್ಳುತ್ತಿದ್ದರು. ಈ ವೇಳೆ ಕಬ್ಬಿಣದ ರಾಡ್ ಅನ್ನು ಕಂಕುಳಲ್ಲಿಟ್ಟುಕೊಂಡು ತಿರುಗುವ ಸಂದರ್ಭದಲ್ಲಿ, ಕಟ್ಟಡದ ಪಕ್ಕದಲ್ಲೇ ಹಾದುಹೋಗಿದ್ದ ಹೈಟೆನ್ಷನ್ ವಿದ್ಯುತ್ ತಂತಿಗೆ ರಾಡ್ ಸ್ಪರ್ಶಿಸಿದೆ. ಪರಿಣಾಮ ತೀವ್ರ ಪ್ರಮಾಣದ ವಿದ್ಯುತ್ ಪ್ರವಾಹ ಹರಿದು ಭಾಸ್ಕರ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಸುರತ್ಕಲ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಭಾಸ್ಕರ ಅವರ ಪುತ್ರ ನೀಡಿದ ದೂರಿನನ್ವಯ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.

Star Of Kudla

Learn More →

Leave a Reply

Your email address will not be published. Required fields are marked *