ಸಚಿವ ಸ್ಥಾನಕ್ಕೆ ರಾಮಲಿಂಗಾ ರೆಡ್ಡಿ ರಾಜೀನಾಮೆ,

ರಾಮಲಿಂಗಾ ರೆಡ್ಡಿ ರಾಜೀನಾಮೆ: ಡಿಕೆ ಶಿವಕುಮಾರ್ ಸಂಪುಟದ ಸಚಿವ ಸ್ಥಾನಕ್ಕೆ ರಾಮಲಿಂಗಾ ರೆಡ್ಡಿ ಶುಕ್ರವಾರ ಬೆಳಗ್ಗೆ ರಾಜೀನಾಮೆ ನೀಡಿದರು. ಬೆಂಗಳೂರು ಅಭಿವೃದ್ಧಿ ಖಾತೆಗೆ ಅವರು ಪಟ್ಟು ಹಿಡಿದಿದ್ದರೂ ಅದಕ್ಕೆ ಮನ್ನಣೆ ದೊರೆತಿರಲಿಲ್ಲ. ಇದರಿಂದ ತೀವ್ರ ಅಸಮಾಧಾನಗೊಂಡ ಅವರು ಸಂಪುಟದಿಂದ ಹೊರಬರುವ ನಿರ್ಧಾರ ಪ್ರಕಟಿಸಿದ್ದಾರೆ. ಅಲ್ಲದೆ, ರಾಜೀನಾಮೆಗೆ ಅಸಲಿ ಕಾರಣಗಳು ಬೇರೆ ಇವೆ ಎಂದಿದ್ದು, ಅದನ್ನು ಬಹಿರಂಗಪಡಿಸಿದ್ದಾರೆ.

ರಾಜ್ಯ ರಾಜಕಾರಣದ ಮಹತ್ವದ ಬೆಳವಣಿಗೆಯಲ್ಲಿ, ಡಿಕೆ ಶಿವಕುಮಾರ್  ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿ ಸಂಪುಟ ಸಚಿವರಿಗೆ ಖಾತೆ ಹಂಚಿಕೆ ಮಾಡಿದ ಬೆನ್ನಲ್ಲೇ ಮೊದಲ ವಿಕೆಟ್ ಪತನವಾಗಿದೆ. ಬೆಂಗಳೂರು ಅಭಿವೃದ್ಧಿ ಖಾತೆ ಸಿಗಲಿಲ್ಲ ಎಂಬ ಕಾರಣಕ್ಕೆ ತೀವ್ರ ಅಸಮಾಧಾನಗೊಂಡಿರುವ ರಾಮಲಿಂಗಾ ರೆಡ್ಡಿ ಶುಕ್ರವಾರ ಬೆಳಗ್ಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಣೆ ಮಾಡಿದರು.

ಬೆಂಗಳೂರಿನ ಕೋರಮಂಗಲದ ಕಚೇರಿಯಲ್ಲಿ ಮಹತ್ವದ ಪತ್ರಿಕಾಗೋಷ್ಠಿ ನಡೆಸಿದ ರಾಮಲಿಂಗಾ ರೆಡ್ಡಿ, ರಾಜೀನಾಮೆಯ ಹಿಂದಿನ ಅಸಲಿ ಕಾರಣಗಳನ್ನು ಮುಕ್ತವಾಗಿ ಬಿಚ್ಚಿಟ್ಟಿದ್ದಾರೆ. ಜಲಸಂಪನ್ಮೂಲ ಇಲಾಖೆ ನೀಡಿದ್ದಕ್ಕೆ ಬೇಸರ ಎಂಬ ಒಂದೇ ಕಾರಣಕ್ಕೆ ರಾಜೀನಾಮೆ ನೀಡುತ್ತಿಲ್ಲ. ಈಗಿನ ಮುಖ್ಯಮಂತ್ರಿಗಳು ಹಿಂದೆ ಅವರಾಗಿಯೇ ಬೆಂಗಳೂರು ನಗರಾಭಿವೃದ್ಧಿ ಖಾತೆ ಕೊಡುವ ಬಗ್ಗೆ ಭರವಸೆ ನೀಡಿದ್ದರು. ಆದರೆ, ಅದರಂತೆ ನಡೆದುಕೊಂಡಿಲ್ಲ. ಈ ವಿಚಾರ ಜನರಿಗೆ ತಿಳಿಯಬೇಕು ಎಂದು ಹೇಳಿದರು.

ನನಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮೇಲಾಗಲಿ ಅಥವಾ ಸಿದ್ದರಾಮಯ್ಯ ಅವರ ಮೇಲಾಗಲಿ ಯಾವುದೇ ವೈಯಕ್ತಿಕ ಕೋಪವಿಲ್ಲ. ನಾನು ಯಾವ ಕಾರಣಕ್ಕಾಗಿ ರಾಜೀನಾಮೆ ನೀಡಿದ್ದೇನೆ ಎಂಬ ಸತ್ಯ ಜನರಿಗೆ ಗೊತ್ತಾಗಬೇಕಷ್ಟೇ. ನಾನು ಕಳೆದ 53 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಒಬ್ಬ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಪಕ್ಷ ನನಗೆ ಸಾಕಷ್ಟು ಅವಕಾಶಗಳನ್ನು ಮಾಡಿಕೊಟ್ಟಿದೆ. ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆಯೇ ಹೊರತು, ಕಾಂಗ್ರೆಸ್ ಪಕ್ಷಕ್ಕಲ್ಲ. ನನ್ನ ಜೀವನದಲ್ಲಿ ಎಂದಿಗೂ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿಲ್ಲ, ಮುಂದೆಯೂ ನೀಡುವುದಿಲ್ಲ ಎಂದು ರಾಮಲಿಂಗಾ ರೆಡ್ಡಿ ನುಡಿದರು.

ತಮ್ಮ ರಾಜಕೀಯ ಇತಿಹಾಸವನ್ನು ನೆನೆದ ರೆಡ್ಡಿ, ನಾನು ಸತತ 8 ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ವೀರಪ್ಪ ಮೊಯ್ಲಿ ಅವರ ಸಂಪುಟದಲ್ಲಿ ಮೊದಲ ಬಾರಿಗೆ ಸಚಿವನಾಗಿದ್ದೆ. ಆ ಬಳಿಕ ಸಿದ್ದರಾಮಯ್ಯ ಅವರ ಸಂಪುಟದಲ್ಲಿ 2 ಬಾರಿ ಸಚಿವರಾಗಿ ಕೆಲಸ ಮಾಡಿದ್ದೇನೆ. ಈ ಹಿಂದೆ ನನಗೆ ನೀಡಲಾಗಿದ್ದ ಎಲ್ಲಾ ಇಲಾಖೆಗಳನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದ ಇತಿಹಾಸ ನನಗಿದೆ. ನಾನು ಯಾವತ್ತೂ ಯಾವುದೇ ಮುಖ್ಯಮಂತ್ರಿಗಳ ಬಳಿ ಹೋಗಿ ಮಂತ್ರಿ ಮಾಡಿ ಎಂದಾಗಲಿ ಅಥವಾ ಇಂತಹದ್ದೇ ಇಲಾಖೆ ಬೇಕು ಎಂದಾಗಲಿ ಕೇಳಿರಲಿಲ್ಲ. ಈ ಬಾರಿಯೂ ನಾನು ಶಿವಕುಮಾರ್ ಅವರ ಬಳಿಯಾಗಲಿ ಅಥವಾ ಹೈಕಮಾಂಡ್ ಬಳಿಯಾಗಲಿ ಮಂತ್ರಿ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿರಲಿಲ್ಲ. ಆದರೆ, ಹಿಂದೆ ಡಿಕೆ ಶಿವಕುಮಾರ್, ‘ನಾನು ಎರಡೂವರೆ ವರ್ಷಗಳ ಆದ ಮೇಲೆ ಮುಖ್ಯಮಂತ್ರಿಯಾಗುತ್ತೇನೆ, ಆ ಸಂದರ್ಭದಲ್ಲಿ ನನ್ನ ಬಳಿ ಇರುವ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ನಿಮಗೇ ಕೊಡುತ್ತೇನೆ’ ಎಂದು ಮಾತು ಕೊಟ್ಟಿದ್ದರು. ಆದರೆ ಈಗ ನನಗೆ ಜಲಸಂಪನ್ಮೂಲ ಖಾತೆ ನೀಡಲಾಗಿದೆ ಎಂದು ತಮ್ಮ ಬೇಸರವನ್ನು ಹೊರಹಾಕಿದರು.

News Editor

Learn More →

Leave a Reply

Your email address will not be published. Required fields are marked *