ಸಿಎಂ ಸ್ಥಾನದಿಂದ ನಿರ್ಗಮಿಸುವ ಮುನ್ನ 5,000 ಕೋಟಿ ರೂ ಎಲ್ಲಿದೆ ಹೇಳಿ’: ಸಿದ್ದರಾಮಯ್ಯಗೆ ಬಹಿರಂಗ ಪತ್ರ ಮೂಲಕ ಸುರೇಶ್ ಕುಮಾರ್ ಪ್ರಶ್ನೆ

ಗೃಹಲಕ್ಷ್ಮಿ ಯೋಜನೆಗೆ ಮೀಸಲಿರಿಸಿದ್ದ 5,000 ಕೋಟಿ ರೂ. ಎಲ್ಲಿದೆ ಮಾನ್ಯ ಸಿದ್ದರಾಮಯ್ಯನವರೇ? ಎಂದು ಬಿಜೆಪಿ ನಾಯಕ ಸುರೇಶ ಕುಮಾರ್ ಪ್ರಶ್ನಿಸಿದ್ದಾರೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಮೇಲೆ ಸುರೇಶ್ ಕುಮಾರ್ ಅವರು ಬರೆದಿರುವ ಈ ಪತ್ರ ಸಾಮಾಜಿಕ ವೈರಲ್ ಆಗಿದೆ.

ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮಾಜಿ ಸಚಿವ ಬಿಜೆಪಿ ನಾಯಕ ಸುರೇಶ್ ಕುಮಾರ್ ಪ್ರಶ್ನೆಯೊಂದನ್ನು ಮುಂದಿಟ್ಟಿದ್ದಾರೆ.

ರಾಜ್ಯದಲ್ಲಿ ಕೆಲವೇ ದಿನಗಳಲ್ಲಿ ರಾಜಕೀಯ ಚಿತ್ರಣ ಬದಲಾಗಿದೆ. ಕಾಂಗ್ರೆಸ್ ಹೈಕಮಾಂಡ್ ಆದೇಶದಂತೆ ಸಿದ್ದರಾಮಯ್ಯ ರಾಜೀನಾಮೆ ನೀಡಿ ಡಿ ಕೆ ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಿದ್ದಾರೆ.

ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮಾಜಿ ಸಚಿವ ಬಿಜೆಪಿ ನಾಯಕ ಸುರೇಶ್ ಕುಮಾರ್ ಪ್ರಶ್ನೆಯೊಂದನ್ನು ಮುಂದಿಟ್ಟಿದ್ದಾರೆ. ತಾವು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಡುವ ಮುನ್ನ, ರಾಜ್ಯದ 1.14 ಕೋಟಿ ಮಹಿಳೆಯರಿಗೆ ತಲುಪಬೇಕಾಗಿದ್ದ 5,000 ಕೋಟಿ ರೂ. ಹಣದ ಹಣೆಬರಹದ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿ ಸೋಷಿಯಲ್ ಮೀಡಿಯಾದಲ್ಲಿ ಬರೆದು ಬಹಿರಂಗ ಪ್ರಶ್ನೆ ಮಾಡಿ ಪತ್ರ ಬರೆದಿದ್ದಾರೆ.

ಚುನಾವಣೆಯಲ್ಲಿ ಮತ ಗಳಿಸಲು ಸಾಧನವಾಗಿದ್ದ ಗೃಹಲಕ್ಷ್ಮಿ ಯೋಜನೆಯ ಹಣ 1.14 ಕೋಟಿ ಮಹಿಳೆಯರ ಕೈ ಸೇರದಿರುವುದು ಸಣ್ಣ ಪ್ರಮಾದವಲ್ಲ, ಇದು ರಾಜ್ಯದ ತಿಜೋರಿಯನ್ನೇ ಲೂಟಿ ಹೊಡೆದಿರುವ ಸ್ಪಷ್ಟ ಉದಾಹರಣೆ. ಈ ಪ್ರಸ್ತಾವನೆ ನಡೆದು 5 ತಿಂಗಳು ಕಳೆದರೂ ಇಂದಿಗೂ ರಾಜ್ಯದ ಗೃಹಲಕ್ಷ್ಮಿಯರಿಗೆ ಆ ಹಣ ತಲುಪಿಲ್ಲ. ಸಚಿವರು ಹಣ ಪಾವತಿಯಾಗಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಹಾಗಾದರೆ ಈ ಭಾರಿ ಮೊತ್ತದ ಹಣ ಎಲ್ಲಿ ಹೋಯಿತು? ಯಾರ ಜೇಬು ಸೇರಿತು?” ಎಂದು ಪತ್ರದಲ್ಲಿ ಪ್ರಶ್ನಿಸಿದ್ದಾರೆ.

ಇಡೀ ದೇಶದಲ್ಲೇ ದಾಖಲೆ ಸಂಖ್ಯೆಯ ಬಜೆಟ್ ಮಂಡಿಸಿರುವ ನೀವು ರಾಜ್ಯದ ಆರ್ಥಿಕ ತಜ್ಞರು ಹಾಗೂ ತಿಜೋರಿಯ ಸಂಪೂರ್ಣ ನಿಯಂತ್ರಣ ಹೊಂದಿದ್ದವರು. ಸಾರ್ವಜನಿಕರ ತೆರಿಗೆ ಹಣದ ಪಾವಿತ್ರ್ಯತೆಯನ್ನು ಕಾಯುವುದು ಹಾಗೂ ಪ್ರತಿಯೊಂದು ಪೈಸೆಗೂ ಉತ್ತರದಾಯಿತ್ವ ವಹಿಸುವುದು ನಿಮ್ಮ ನೈತಿಕ ಜವಾಬ್ದಾರಿಯಾಗಿದೆ. ಆದ್ದರಿಂದ ಸಿಎಂ ಸ್ಥಾನದಿಂದ ನಿರ್ಗಮಿಸುವ ಮುನ್ನ ಈ 5,000 ಕೋಟಿ ರೂ ಹಣದ ಅಸಲಿ ಸತ್ಯ ಮತ್ತು ಸ್ಥಿತಿಗತಿಯನ್ನು ರಾಜ್ಯದ ನಾಗರಿಕರಿಗೆ ಸ್ಪಷ್ಟಪಡಿಸಬೇಕು ಎಂದು ಬಹಿರಂಗ ಪತ್ರದ ಮೂಲಕ ಸುರೇಶ್ ಕುಮಾರ್ ಸಿದ್ದರಾಮಯ್ಯನವರಿಗೆ ಆಗ್ರಹಿಸಿದರು.

News Editor

Learn More →

Leave a Reply

Your email address will not be published. Required fields are marked *