ಕೋಟೆಕಾರು: Bombay Saw Mill ಮಾಲಿನ್ಯ ಪ್ರಕರಣ – ಲೈಸೆನ್ಸ್ ಇಲ್ಲದೇ ಕಾರ್ಯಾಚರಣೆ ಬೆಳಕಿಗೆ; ತಕ್ಷಣ ಮುಚ್ಚಲು ಆದೇಶ

ಕೋಟೆಕಾರು, ಉಳ್ಳಾಲ: ಕೋಟೆಕಾರು ಪ್ರದೇಶದಲ್ಲಿರುವ Bombay Saw Mill ಕಾರ್ಖಾನೆಯ ಮಾಲಿನ್ಯ ಸಮಸ್ಯೆ ಗಂಭೀರ ಹಂತಕ್ಕೆ ತಲುಪಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡಿದ್ದಾರೆ. ಸ್ಥಳೀಯರ ನಿರಂತರ ದೂರಿನ ಮೇರೆಗೆ ಮಾಲಿನ್ಯ ನಿಯಂತ್ರಣ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ, ಕಾರ್ಖಾನೆ ಲೈಸೆನ್ಸ್ ಇಲ್ಲದೇ ಕಾರ್ಯನಿರ್ವಹಿಸುತ್ತಿರುವುದು ಬೆಳಕಿಗೆ ಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಪರಿಶೀಲನೆಯ ಬಳಿಕ ಘಟಕವನ್ನು ತಕ್ಷಣದಿಂದಲೇ ಮುಚ್ಚುವಂತೆ ಸೂಚನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ವಿಷಯವನ್ನು ಮೊದಲಿಗೆ ಕೋಟೆಕಾರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ (CO) ಹಾಗೂ ಆರೋಗ್ಯ ನಿರೀಕ್ಷಕರಿಗೆ ತಿಳಿಸಲಾಗಿದ್ದು, ನಂತರ DUDC ನಿರ್ದೇಶಕರ ಮಟ್ಟಕ್ಕೂ ದೂರವಾಣಿ ಮೂಲಕ ಮಾಹಿತಿ ತಲುಪಿಸಲಾಗಿದೆ. ಮೇಲ್ದರ್ಜೆ ಗಮನಕ್ಕೆ ಬಂದ ತಕ್ಷಣ CO ಹಾಗೂ Health Inspector ಸ್ಥಳಕ್ಕೆ ಭೇಟಿ ನೀಡಿ ಕಾರ್ಖಾನೆಯನ್ನು ಮುಚ್ಚುವಂತೆ ಸೂಚನೆ ನೀಡಿದರೆಂದು ತಿಳಿದುಬಂದಿದೆ.

ಇದೇ ವೇಳೆ, ಕಾರ್ಖಾನೆಯಿಂದ ಹೊರಬರುವ ದಟ್ಟ ಹೊಗೆ ಸುತ್ತಮುತ್ತಲಿನ ವಾಸಸ್ಥಳಗಳ ಮೇಲೆ ಗಂಭೀರ ಪರಿಣಾಮ ಬೀರುತ್ತಿರುವ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಸುತ್ತಮುತ್ತಲಿನ ಮನೆಗಳಲ್ಲಿ ವಾಸಿಸುವ ಜನರಿಗೆ ಉಸಿರಾಟದ ತೊಂದರೆ, ಎದೆ ಬಿಗಿತ, ಕಣ್ಣು ಕೆರಳಿಕೆ ಹಾಗೂ ಗಂಟಲು ಉರಿ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿರುವ ಆರೋಪ ಕೇಳಿಬಂದಿದೆ. ವಿಶೇಷವಾಗಿ, ಈ ಪ್ರದೇಶದ 8 ವರ್ಷದ ಮಗುವಿಗೆ ಹೃದಯ ಸಂಬಂಧಿತ ಸಮಸ್ಯೆ ಕಾಣಿಸಿಕೊಂಡಿದ್ದು, ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಪ್ರಕರಣಗಳೂ ಹೆಚ್ಚಾಗುತ್ತಿರುವ ಬಗ್ಗೆ ಸಾರ್ವಜನಿಕರು ಕಳವಳ ವ್ಯಕ್ತಪಡಿಸಿದ್ದಾರೆ.

ಇಷ್ಟು ದಿನಗಳಿಂದ ಲೈಸೆನ್ಸ್ ಇಲ್ಲದೇ ಕಾರ್ಖಾನೆ ಕಾರ್ಯನಿರ್ವಹಿಸಿದ್ದರೆ ಸಂಬಂಧಪಟ್ಟ ಅಧಿಕಾರಿಗಳು ಗಮನಿಸದೇ ಇದ್ದುದೇಕೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ. ಕಾರ್ಖಾನೆಗೆ Pollution NOC ನೀಡಲಾಗಿತ್ತೇ, emission report ಏನು ಹೇಳುತ್ತದೆ ಹಾಗೂ ಇದುವರೆಗೆ ಯಾವುದೇ ಪರಿಶೀಲನೆ ನಡೆದಿದೆಯೇ ಎಂಬುದರ ಬಗ್ಗೆ ಸ್ಪಷ್ಟತೆ ನೀಡಬೇಕೆಂದು ಜನರು ಆಗ್ರಹಿಸಿದ್ದಾರೆ.

ಸಾರ್ವಜನಿಕ ಆರೋಗ್ಯಕ್ಕೆ ಹಾನಿ ಉಂಟುಮಾಡುವ ಮಟ್ಟದ ವಾಯು ಮಾಲಿನ್ಯವನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಲು ಸಾಧ್ಯವಿಲ್ಲ. ಸಂಬಂಧಪಟ್ಟ ಇಲಾಖೆ ಸಂಪೂರ್ಣ ಪರಿಶೀಲನೆ ನಡೆಸಿ, ನಿಯಮ ಉಲ್ಲಂಘನೆ ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.

News Editor

Learn More →

Leave a Reply

Your email address will not be published. Required fields are marked *