ಪತ್ನಿಯ ಕುತಂತ್ರ ಬಯಲು: ಹಲ್ಲೆಗೊಳಗಾದ ಪತಿ ಚಿಕಿತ್ಸೆ ಫಲಿಸದೆ ಸಾವು

ಮೈಸೂರು: ದರೋಡೆ ನೆಪದಲ್ಲಿ ಪತ್ನಿಯೇ ತನ್ನ ಪತಿಯ ಕೊಲೆಗೆ ಸ್ಕೆಚ್ ಹಾಕಿದ್ದರು ಎನ್ನಲಾದ ಪ್ರಕರಣದಲ್ಲಿ ತೀವ್ರವಾಗಿ ಹಲ್ಲೆಗೊಳಗಾಗಿದ್ದ ಪತಿ ಚಿಕಿತ್ಸೆ ಫಲಿಸದೆ ಭಾನುವಾರ ಸಾವನ್ನಪ್ಪಿದ್ದಾರೆ.

ಡ್ರ್ಯಾಗರ್ ಹಾಗೂ ಲಾಂಗ್​ನಿಂದ ಹಲ್ಲೆಗೊಳಗಾದ ರಾಜೇಂದ್ರ ಎಂಬವರು ಇಪ್ಪತ್ತು ದಿನಗಳಿಂದ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದರು. ಭಾನುವಾರ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

ಪತಿಯ ಕೊಲೆಗೆ ಪತ್ನಿಯೇ ದರೋಡೆ ತಂತ್ರ ರೂಪಿಸಿದ್ದಳು ಎಂದು ಮೃತ ವ್ಯಕ್ತಿಯ ಸಂಬಂಧಿಕರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು, ವಿಚಾರಣೆ ನಡೆಸಿದಾಗ ಪತ್ನಿ ಸಂಗೀತಾ ತಪ್ಪೊಪ್ಪಿಕೊಂಡಿದ್ದಾರೆ. ಸದ್ಯ ಮಹಿಳೆ ಸೇರಿ ಮೂವರನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅ.26ರಂದು ನಂಜನಗೂಡಿನ ಹುಂಡುವಿನಹಳ್ಳಿ ಬಡಾವಣೆಯಲ್ಲಿ ರಾಜೇಂದ್ರ ಅವರು ಪತ್ನಿ ಸಂಗೀತಾ ಜೊತೆ ಸ್ಕೂಟರ್​ನಲ್ಲಿ ತೆರಳುತ್ತಿದ್ದರು. ಈ ವೇಳೆ ಕಾರಿನಲ್ಲಿ ಬಂದ ಮೂವರು ದಾಳಿ ಮಾಡಿ ರಾಜೇಂದ್ರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು.

ದರೋಡೆ ಪ್ರಕರಣ ದಾಖಲಿಸಿಕೊಂಡ ನಂಜನಗೂಡು ಪಟ್ಟಣ ಪೊಲೀಸರು, ವಿಶೇಷ ತಂಡ ರಚಿಸಿ ದುಷ್ಕರ್ಮಿಗಳ ಸೆರೆಗೆ ಜಾಲ ಬೀಸಿದ್ದರು. ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ ಪೊಲೀಸರಿಗೆ ಪತ್ನಿಯ ತಂತ್ರ ಗೊತ್ತಾಗಿತ್ತು. ಪತಿಯ ಕೊಲೆಗೆ ದರೋಡೆ ಬಣ್ಣ ಕಟ್ಟಿ ಸ್ವಂತ ತಮ್ಮನಿಗೇ ಸುಪಾರಿ ನೀಡಿ ಹತ್ಯೆಗೆ ಯತ್ನಿಸಿದ್ದು ಬಯಲು ಮಾಡಿದ್ದರು. ತೀವ್ರ ಹಲ್ಲೆಗೊಳಗಾಗಿದ್ದ ರಾಜೇಂದ್ರ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Star Of Kudla

Learn More →

Leave a Reply

Your email address will not be published. Required fields are marked *