
ಬೆಳಗಾವಿ: ಮುಂಬರುವ ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನವನ್ನು ಕಳೆದ ಬಾರಿಯಂತೆ ಅಚ್ಚುಕಟ್ಟಾಗಿ, ಶಿಸ್ತಿನಿಂದ ನಡೆಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದ್ದಾರೆ.
ಸುವರ್ಣ ವಿಧಾನಸೌಧದಲ್ಲಿ ಬುಧವಾರ ನಡೆದ ಚಳಿಗಾಲದ ಅಧಿವೇಶನ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಧಿವೇಶನದ ಯಶಸ್ವೀ ನಿರ್ವಹಣೆಗೆ ವಿವಿಧ ಉಪಸಮಿತಿಗಳನ್ನು ರಚಿಸಲಾಗಿದ್ದು, ಪ್ರತಿಯೊಂದು ಸಮಿತಿ ತನ್ನ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಬೇಕೆಂದು ಅವರು ಸೂಚಿಸಿದರು.
ಜಿಲ್ಲಾಧಿಕಾರಿ ಮುಂದುವರಿದು, ಅಧಿವೇಶನಕ್ಕೆ ಆಗಮಿಸುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಪಾಸ್‌ಗಳನ್ನು ಭದ್ರತಾ ದೃಷ್ಟಿಯಿಂದ ಪೊಲೀಸರಿಂದ ಸಮನ್ವಯದೊಂದಿಗೆ ವಿತರಿಸಬೇಕು ಎಂದರು. ಸುವರ್ಣ ವಿಧಾನಸೌಧದ ನೆಲಮಹಡಿಯಲ್ಲಿ ಅಧಿಕಾರಿಗಳು, ಸಿಬ್ಬಂದಿ ಹಾಗೂ ಮಾರ್ಷಲ್‌ಗಳಿಗೆ ಪ್ರತ್ಯೇಕ ಊಟದ ವ್ಯವಸ್ಥೆ ಮಾಡಬೇಕು ಮತ್ತು ಹೊರಗಡೆ ಪಾವತಿ ಆಧಾರಿತ ಕ್ಯಾಂಟೀನ್‌ಗಳನ್ನು ಸ್ಥಾಪಿಸಲು ಸೂಚಿಸಿದರು.
ಪ್ರತಿಭಟನೆಗಳಿಗೆ ಸೂಕ್ತ ಸ್ಥಳವನ್ನು ಗುರುತಿಸಿ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು. ಅಲ್ಲದೇ, ಪ್ರತಿಭಟನೆ ಸ್ಥಳಗಳಲ್ಲಿಯೂ ಹಾಗೂ ಸುವರ್ಣ ವಿಧಾನಸೌಧದಲ್ಲಿ ವೈದ್ಯಕೀಯ ಸಿಬ್ಬಂದಿ ಮತ್ತು ಅಂಬ್ಯುಲೆನ್ಸ್‌ಗಳನ್ನು ಸಜ್ಜಾಗಿಡಬೇಕೆಂದು ಅವರು ಹೇಳಿದರು. ಆಹಾರ ಸುರಕ್ಷಾ ಅಧಿಕಾರಿಗಳನ್ನು ಸಹ ನಿಯೋಜಿಸಲು ಸೂಚಿಸಿದರು.
ಅಧಿವೇಶನಕ್ಕೆ ಆಗಮಿಸುವ ಸಚಿವರು, ಶಾಸಕರು ಮತ್ತು ಅಧಿಕಾರಿಗಳಿಗೆ ಸಾರಿಗೆ ವ್ಯವಸ್ಥೆ ಸುಗಮವಾಗಿರಬೇಕು. ವಾಹನಗಳ ಸ್ಥಿತಿ ಮತ್ತು ಪಾಸ್‌ಗಳ ಪರಿಶೀಲನೆಗೂ ತಕ್ಕ ಕ್ರಮ ಕೈಗೊಳ್ಳಬೇಕು ಎಂದರು.
ಅಧಿವೇಶನದ ವೇಳೆ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಗೂ ತಯಾರಿ ಮಾಡಿಕೊಳ್ಳಬೇಕು. ದೂರವಾಣಿ ಮತ್ತು ಇಂಟರ್‌ನೆಟ್ ಸೇವೆಯಲ್ಲಿ ವ್ಯತ್ಯಯವಾಗದಂತೆ ಮುಂಜಾಗ್ರತೆ ವಹಿಸಲು ಜಿಲ್ಲಾ ಆಡಳಿತವನ್ನು ನಿರ್ದೇಶಿಸಿದರು.
ಪೋಲಿಸ್ ಆಯುಕ್ತ ಗುಲಾಬ್‌ರಾವ್ ಭೂಷಣ ಭೋರಸೆ ಮಾತನಾಡಿ, ಸಾರ್ವಜನಿಕರಿಗೆ ಪಾಸ್ ವಿತರಿಸುವಾಗ ಅಗತ್ಯ ದಾಖಲೆಗಳನ್ನು ಖಚಿತಪಡಿಸಿಕೊಳ್ಳಲಾಗುವುದು ಎಂದರು. ಸುವರ್ಣಸೌಧಕ್ಕೆ ಪ್ರವೇಶ ನೀಡುವ ಮೊದಲು ಪಾಸ್‌ಗಳನ್ನು ಪರಿಶೀಲಿಸಿ ಮಾತ್ರ ಅವಕಾಶ ನೀಡಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಪ್ರಶಿಕ್ಷಣಾರ್ಥಿ ಆಯ್ಎಎಸ್ ಅಧಿಕಾರಿ ಅಭಿನವ ಜೈನ್, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಉಪಸಮಿತಿಗಳ ಮುಖ್ಯಸ್ಥರು ಹಾಜರಿದ್ದರು.


