ಕಾಂಗ್ರೆಸ್ ಸರಕಾರದ ವಿರುದ್ಧ ಸೆ.16ರಂದು ಮಂಗಳೂರಿನಲ್ಲಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ

ಮಂಗಳೂರು: ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಭಾಗದಲ್ಲಿ ಕೆಂಪು ಕಲ್ಲು ಗಣಿಗಾರಿಕೆ ಸಂಬಂಧ ರಾಯಲ್ಟಿ ಹೆಚ್ಚಳ ಮಾಡಿ ಕಠಿಣ ನಿಯಮ ರೂಪಿಸಿರುವುದರಿಂದ ಎದುರಾಗಿರುವ ಗಂಭೀರ ಸಮಸ್ಯೆಗೆ ಇನ್ನು ಕೂಡ ರಾಜ್ಯ ಕಾಂಗ್ರೆಸ್‌ ಸರ್ಕಾರದಿಂದ ಸೂಕ್ತ ಪರಿಹಾರ ದೊರೆಯದಿರುವುದನ್ನು ಖಂಡಿಸಿ ಜಿಲ್ಲಾ ಬಿಜೆಪಿ ಘಟಕದಿಂದ ಸೆ.1‍6ರಂದು ಬೃಹತ್‌ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಹಾಗೂ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ.

ಮಂಗಳೂರು ಮಿನಿ ವಿಧಾನಸೌಧದ ಮುಂಭಾಗದಲ್ಲಿ ನಡೆಯುವ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ನಡೆಯಲಿರುವ ಧರಣಿಯಲ್ಲಿ ಬಿಜೆಪಿ ನಾಯಕರು, ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ. ಅಲ್ಲದೆ, ಕೆಂಪು ಕಲ್ಲು ಗಣಿಗಾರಿಕೆಗೆ ಇಲ್ಲ-ಸಲ್ಲದ ನಿರ್ಬಂಧ ಹೇರಿರುವ ಪರಿಣಾಮ ಅದನ್ನು ಅವಲಂಬಿಸಿಕೊಂಡಿರುವ ಕಾರ್ಮಿಕರು ಹಾಗೂ ಕಲ್ಲು ಸಾಗಾಟ ಮಾಡುವ ವಾಹನ ಮಾಲೀಕರು ಕೂಡ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಿರುವಾಗ, ಸರ್ಕಾರದ ಈ ರೀತಿಯ ಜನವಿರೋಧಿ ನಿರ್ಧಾರಗಳಿಂದ ಬಾಧಿತರಾಗಿರುವವರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಈ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಕ್ಯಾ. ಚೌಟ ಮನವಿ ಮಾಡಿದ್ದಾರೆ.

ಕಾಂಗ್ರೆಸ್‌ ಸರ್ಕಾರದ ದುರಾಡಳಿತದ ಪರಿಣಾಮ ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಭಾಗದಲ್ಲಿ ಕಳೆದ ಮೂರ್ನಾಲ್ಕು ತಿಂಗಳಿನಿಂದ ಕೆಂಪು ಕಲ್ಲು ಗಣಿಗಾರಿಕೆ ಸ್ಥಗಿತಗೊಂಡಿದ್ದು, ಈ ಉದ್ಯಮವನ್ನು ಅವಲಂಬಿಸಿರುವ ಕಾರ್ಮಿಕರು ಸೇರಿದಂತೆ ಸಾವಿರಾರು ಮಂದಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಜಿಲ್ಲಾಡಳಿತದಿಂದ ಹಿಡಿದು ಸಂಬಂಧಪಟ್ಟ ಇಲಾಖೆ ಸಚಿವರವರೆಗೆ ಹಲವು ಹಂತಗಳಲ್ಲಿ ಈ ಗಂಭೀರ ಸಮಸ್ಯೆ ಬಗೆಹರಿಸುವುದಕ್ಕೆ ಸಭೆಗಳನ್ನು ನಡೆಸಲಾಗಿದೆ. ಅಲ್ಲದೆ, ಕರಾವಳಿ ಭಾಗದ ಶಾಸಕರು ಕೂಡ ಈ ಕೆಂಪು ಕಲ್ಲು ಗಣಿಗಾರಿಕೆಗೆ ಎದುರಾಗಿರುವ ಅಡ್ಡಿ-ಆತಂಕಗಳಿಗೆ ತುರ್ತು ಸ್ಪಂದಿಸುವಂತೆ ಇತ್ತೀಚೆಗೆ ನಡೆದ ಅಧಿವೇಶನದಲ್ಲಿಯೂ ಒತ್ತಾಯಿಸಿ ಈ ಸಮಸ್ಯೆ ಗಂಭೀರತೆಯನ್ನು ಸರ್ಕಾರದ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದರು. ಕೆಂಪು ಕಲ್ಲು ಗಣಿಗಾರಿಕೆ ನಿಯಮ ಸರಳೀಕರಿಸುವುದಾಗಿ ಹೇಳಿ ಸಂಬಂಧಪಟ್ಟ ಸಚಿವರು ಬೆಂಗಳೂರು, ಮಂಗಳೂರಿನಲ್ಲಿ ಹಲವು ಬಾರಿ ಸಭೆ ನಡೆಸಿದರೂ ಇಲ್ಲಿವರೆಗೆ ಯಾವುದೇ ನಿರ್ಧಾರವಾಗಿಲ್ಲ. ಹೀಗಾಗಿ, ಸರ್ಕಾರದ ಈ ರೀತಿಯ ಪೊಳ್ಳು ಭರವಸೆಗಳನ್ನು ಖಂಡಿಸಿ, ಕೆಂಪುಕಲ್ಲು ಗಣಿಗಾರಿಕೆ ಸಮಸ್ಯೆಗೆ ಶಾಶ್ವತ ಪರಿಹಾರ ಕೋರಿ ಇದೀಗ ಬಿಜೆಪಿ ಪಕ್ಷವು ಅನಿವಾರ್ಯವಾಗಿ ಬೀದಿಗಿಳಿಯುವ ನಿರ್ಧಾರ ಮಾಡಿದೆ ಎಂದು ಸಂಸದರು ತಿಳಿಸಿದ್ದಾರೆ.

“ಕೆಂಪು ಕಲ್ಲು ಸಮಸ್ಯೆ ಬಗೆಹರಿಸುವುದಾಗಿ ಕಾಂಗ್ರೆಸ್‌ ಸರ್ಕಾರವು ಕಳೆದ ಮೂರು ತಿಂಗಳಿನಿಂದ ಬರೀ ಸುಳ್ಳು ಭರವಸೆಗಳನ್ನು ನೀಡಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ದಕ್ಷಿಣ ಕನ್ನಡದಲ್ಲಿ ಮರಳು ಹಾಗೂ ಕೆಂಪು ಕಲ್ಲು ಗಣಿಗಾರಿಕೆ ಸರಳೀಕರಿಸುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದ್ದು, ಶೀಘ್ರದಲ್ಲೇ ಪರಿಷ್ಕೃತ ನೀತಿ ಜಾರಿಗೆ ಬರಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಹೇಳಿದ್ದರು. ಆದರೆ, ಕೆಂಪು ಕಲ್ಲು ಸಮಸ್ಯೆ ಜಿಲ್ಲೆಯಲ್ಲಿ ಇಷ್ಟೊಂದು ಜ್ವಲಂತ ಸಮಸ್ಯೆಯಾಗಿ ಕಾಡುವ ಜತೆಗೆ ಇಲ್ಲಿನ ಆರ್ಥಿಕತೆಗೂ ದೊಡ್ಡ ಹೊಡೆತ ಬೀಳುತ್ತಿದ್ದರೂ ಸಿದ್ದರಾಮಯ್ಯ ಸರ್ಕಾರ ಸಮಸ್ಯೆ ಬಗೆಹರಿಸುವುದಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡದಿರುವುದು ಅತ್ಯಂತ ಖೇದಕರ ಹಾಗೂ ದುರ್ದೈವದ ವಿಚಾರ. ಹೀಗಾಗಿ, ಕಾಂಗ್ರೆಸ್‌ ಸರ್ಕಾರದ ಈ ಜನವಿರೋಧಿ ಹಾಗೂ ಕಾರ್ಮಿಕ ವಿರೋಧಿ ನಡೆಯನ್ನು ಖಂಡಿಸಿ ಬಿಜೆಪಿ ಬೀದಿಗಿಳಿದು ಹೋರಾಟ ಮಾಡುವುದಕ್ಕೆ ನಿರ್ಧರಿಸಿರುವುದಾಗಿ ಸಂಸದ ಕ್ಯಾ. ಬ್ರಿಜೇಶ್‌ ಚೌಟ ತಿಳಿಸಿದ್ದಾರೆ.

News Editor

Learn More →

Leave a Reply

Your email address will not be published. Required fields are marked *