ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಮಹಾಸಭೆ, ಧರ್ಮಾರ್ಥ ಮತ್ತು ವಿದ್ಯಾಸಂಸ್ಥೆ ನಿಧಿಯಿಂದ ಸಹಾಯ ಧನ ವಿತರಣೆ

ಪುತ್ತೂರು: ದರ್ಬೆಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಮಹಾಸಭೆ ಹಾಗೂ ಸಂಘದ ಧರ್ಮಾರ್ಥ ಮತ್ತು ವಿದ್ಯಾಸಂಸ್ಥೆ ನಿಧಿಯಿಂದ ಸಹಾಯಧನ ವಿತರಣೆ ಕಾರ್ಯಕ್ರಮವು ಸೆ.೧೩ ರಂದು ನಡೆಯಲಿದೆ ಎಂದು ಸಂಘದ ನಿರ್ದೇಶಕ ಆಶ್ವಿನ್ ಎಲ್. ಶೆಟ್ಟಿಮತ್ತು ನಿರ್ದೇಶಕರಾದ ಜೈರಾಜ್ ಭಂಡಾರಿ ನೋಣಾಲು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘವು ತನ್ನ ಸಾಮಾಜಿಕ ಕಾರ್ಯದ ಮೂಲಕ ಶಾಖೆಗಳ ವ್ಯಾಪ್ತಿಯಲ್ಲಿ ಬರುವ ಸರಕಾರಿ ಶಾಲೆಗಳಲ್ಲಿ ೫ ರಿಂದ ೧೦ ನೇ ತರಗತಿಯಲ್ಲಿ ಕಲಿಯುತ್ತಿರುವ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಸಹಾಯಧನವನ್ನು ಮಹಾಸಭೆಯ ದಿನದಂದು ನೀಡಿಕೊಂಡು ಬರುತ್ತಿದ್ದು, ಈ ವರೆಗೆ ಒಟ್ಟು ರೂ.೨೬,೨೯,೦೦೦ ಮೊತ್ತವನ್ನು ಒಟ್ಟು ೧,೨೯೫ ವಿದ್ಯಾರ್ಥಿಗಳಿಗೆ ವಿತರಿಸಿದೆ. ಜತೆಗೆ ಹಲವಾರು ಸಂಘ ಸಂಸ್ಥೆಗಳಿಗೆ ಆರ್ಥಿಕ ನೆರವನ್ನು ಕೂಡ ನೀಡಿದ್ದೇವೆ ಎಂದರು.
ಈ ಬಾರಿ ೨೫೦ ಮಂದಿ ಮಕ್ಕಳಿಗೆ
ಸೆ.೧೩ ರಂದು ಸಂಘದ ೨೦೨೪-೨೫ ನೇ ಸಾಲಿನ ಮಹಾಸಭೆಯ ಅನಂತರ ನಡೆಯುವ ಸಮಾರಂಭದಲ್ಲಿ ಈ ವರ್ಷ ೭ ಮತ್ತು ೮ನೇ ತರಗತಿಯಲ್ಲಿ ಕಲಿಯುತ್ತಿರುವ ಸರಕಾರಿ ಶಾಲೆಗಳ ೨೫೦ ಮಕ್ಕಳಿಗೆ ತಲಾ ೨,೦೦೦ ರಂತೆ ವಿದ್ಯಾರ್ಥಿ ವೇತನವನ್ನು ಗಣ್ಯರ ಉಪಸ್ಥಿತಿಯಲ್ಲಿ ವಿತರಿಸಲಾಗುವುದು. ಈ ಸಮಾರಂಭದ ಉದ್ಘಾಟಣೆಯನ್ನು ಮಂಗಳೂರು ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್‌ನ ಅಧ್ಯಕ್ಷ ಕೆ. ಜೈರಾಜ್ ಬಿ. ರೈ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ದ.ಕ. ಜಿಲ್ಲಾ ಉಪನಿರ್ದೇಶಕ ಶಶಿಧರ್ ಜಿ.ಎಸ್., ಕೆಯ್ಯೂರು ಶ್ರೀ ಮಹಿಷಮರ್ಧಿನಿ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜಯರಾಮ ಕೈ ಎ.ಕೆ. ಭಾಗವಹಿಸಲಿದ್ದಾರೆ ಎಂದರು.

೮೨೯.೮೮ ಕೋಟಿ ವ್ಯವಹಾರ
ಪುತ್ತೂರಿನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಆದರ್ಶ ವಿವಿಧೋದ್ದೇಶ ಸಹಕಾರ ಸಂಘವು ೨೩ ವರ್ಷಗಳಿಂದ ಸಹಕಾರಿ ಕ್ಷೇತ್ರದಲ್ಲಿ ತನ್ನ ಸೇವೆಯನ್ನು ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಂಟ್ವಾಳ ಮತ್ತು ಕಡಬ ತಾಲೂಕಿನಲ್ಲಿರುವ ೧೫ ಶಾಖೆಗಳ ಮೂಲಕ ನೀಡಿಕೊಂಡು ಬರುತ್ತಿದ್ದು, ೨೦೨೪-೨೫ ನೇ ಸಾಲಿನ ಆರ್ಥಿಕ ವರ್ಷದಲ್ಲಿ ರೂ. ೮೨೯.೮೮ ಕೋಟಿಗಳ ದಾಖಲೆಯ ವ್ಯವಹಾರವನ್ನು ನಡೆಸಿ ೨.೦೧ ಕೋಟಿ ಲಾಭವನ್ನು ಗಳಿಸಿದೆ.

ಸಂಘದ ೨೦೨೪-೨೫ ನೇ ಆರ್ಥಿಕ ಸಾಲಿನ ಅಂತ್ಯಕ್ಕೆ ಸಂಘದಲ್ಲಿ ೮,೯೧೯ ಸದಸ್ಯರಿದ್ದು, ಒಟ್ಟು ೩.೩೯ ಕೋಟಿಗಳಷ್ಟು ಪಾಲು ಬಂಡವಾಳವನ್ನು ಹೊಂದಿರುತ್ತದೆ. ಸಂಘವು ರೂ. ೧೫೦.೯೫ ಕೋಟಿ ಠೇವಣಿಯನ್ನು ಹೊಂದಿಕೊAಡು ೧೩೩.೬೪ ಕೋಟಿ ಸಾಲವನ್ನು ವಿತರಿಸಿದೆ. ೨.೮೪ ಕೋಟಿಗಳಷ್ಟು ಕ್ಷೇಮ ನಿಧಿ, ೩.೭೯ ಕೋಟಿ ಇತರ ನಿಧಿ ಮತ್ತು ೧೬೧.೦೪ ಕೋಟಿ ದುಡಿಯುವ ಬಂಡವಾಳವನ್ನು ಹೊಂದಿದೆ. ಸಂಘವು ಸ್ಥಾಪನೆಗೊಂಡ ವರ್ಷದಿಂದ ತನ್ನ ಸದಸ್ಯರಿಗೆ ಡಿವಿಡೆಂಡ್ ನೀಡಿಕೊಂಡು ಬರುತ್ತಿರುವ ಮತ್ತು ಆಡಿಟ್ ವರ್ಗದಲ್ಲಿ ಸತತವಾಗಿ “ಎ” ತರಗತಿಯನ್ನು ಕಾಯ್ದುಕೊಂಡು ಬಂದಿರುವ ಏಕೈಕ ಸಂಘವಾಗಿರುತ್ತದೆ. ೨೦೨೪-೨೫ ನೇ ಸಾಲಿನ ಡಿವಿಡೆಂಟನ್ನು ಶೇ.೧೭ ರಂತೆ ನೀಡುವ ಬಗ್ಗೆ ಆಡಳಿತ ಮಂಡಳಿ ಸಭೆಯಲ್ಲಿ ಮಂಜೂರಾಗಿ ಮಹಾಸಭೆಗೆ ಶಿಫಾರಸ್ಸು ಮಾಡಲಾಗಿದೆ ಎಂದರು.

ಶೀಘ್ರ ಕೇಂದ್ರ ಕಚೇರಿಗೆ ಸ್ವಂತ ಕಟ್ಟಡ ಸಂಘದ ಕೇಂದ್ರ ಕಚೇರಿಗೆ ಸ್ವಂತ ಕಟ್ಟಡದ ನಿರ್ಮಾಣವು ಪ್ರಗತಿ ಹಂತದಲ್ಲಿದ್ದು, ಸಂಘಕ್ಕೆ ೨೫ ವರ್ಷ ಪೂರೈಸುವುದರೊಳಗೆ ಕಟ್ಟಡ ನಿರ್ಮಾಣದ ಕೆಲಸವನ್ನು ಪೂರ್ತಿಗೊಳಿಸಿ ಲೋಕಾರ್ಪಣೆಯನ್ನು ಮಾಡಲಾಗುವುದು. ಪ್ರಸ್ತುತ ವರ್ಷ ಮಂಗಳೂರಿನ ಪಾಂಡೇಶ್ವರದಲ್ಲಿ ಮತ್ತು ಪುತ್ತೂರಿನ ಈಶ್ವರಮಂಗಲದಲ್ಲಿ ೧೫ನೇ ಮತ್ತು ೧೭ನೇ ಶಾಖೆಗಳನ್ನು ಅತೀ ಶೀಘ್ರದಲ್ಲಿ ತೆರೆಯಲಾಗುವುದು. ಸಂಘದ ಪ್ರಗತಿ ಮತ್ತು ಸೇವೆಯನ್ನು ಪರಿಗಣಿಸಿ ೨೦೨೪-೨೫ ನೇ ಸಾಲಿನಲ್ಲಿ ಸಂಘವು ತನ್ನ ವ್ಯವಹಾರದಲ್ಲಿ ಸರ್ವತೋಮುಖ ಪ್ರಗತಿಯನ್ನು ಸಾಧಿಸಿದಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವಾರ್ಷಿಕ ಮಹಾಸಭೆಯಲ್ಲಿ ಸಾಧನ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಸಂಘವು ೬ನೇ ಸಲ ಈ ಪ್ರಶಸ್ತಿಗೆ ಭಾಜನವಾಗಿದೆ. ಕರ್ನಾಟಕ ಸರಕಾರವು ಅಖಿಲ ಭಾರತ ಸಹಕಾರಿ ಸಪ್ತಾಹದಲ್ಲಿ ಸಂಘಕ್ಕೆ ೨ ಸಲಉತ್ತಮ ವಿವಿಧೋದ್ದೇಶ ಸಹಕಾರಿ ಸಂಘ ಪ್ರಶಸ್ತಿ’ ನೀಡಿ ಗೌರವಿಸಿದೆ. ಸದಸ್ಯರಿಗೆ ಸೋಲಾರ್ ವಾಟರ್ ಹೀಟರ್ ಮತ್ತು ಸೋಲಾರ್ ಲೈಟ್ ಅಳವಡಿಸಲು ಶೂನ್ಯ ಬಡ್ಡಿದರದಲ್ಲಿ ರೂ. ೨,೦೦,೦೦೦ ದ ತನಕ ಸಾಲವನ್ನು ವಿತರಿಸುತ್ತೇವೆ ಎಂದು ಅಧ್ಯಕ್ಷ ಸಹಕಾರ ರತ್ನ ಕೆ. ಸೀತಾರಾಮ ರೈ ಸವಣೂರು ತಿಳಿಸಿದ್ದಾರೆ.

ಸಂಘದ ಉಪಾಧ್ಯಕ್ಷ ಎನ್. ಸುಂದರ್ ರೈ, ಮಹಾಪ್ರಬಂಧಕ ವಸಂತ ಜಾಲಾಡಿ ಮತ್ತು ಸಹಾಯಕ ಮಹಾಪ್ರಬಂಧಕ ಸುನಾದ್ ರಾಜ್ ಶೆಟ್ಟಿ ಉಪಸ್ಥಿತರಿದ್ದರು.

News Editor

Learn More →

Leave a Reply

Your email address will not be published. Required fields are marked *