
ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವಂತಹ ಅಪರಾಧ ಕೃತ್ಯಗಳಿಗೆ ಸಂಬಂಧಿಸಿ ಹಲವಾರು ಮೃತದೇಹಗಳನ್ನು ಹೂತು ಹಾಕಿರುವುದಾಗಿ ವಕೀಲರ ಮೂಲಕ ಹೇಳಿಕೆ ನೀಡುತ್ತಿದ್ದ ಪಾಪ ಪ್ರಜ್ಞೆ ಕಾಡಿದ್ದ ಅನಾಮಧೇಯ ವ್ಯಕ್ತಿಯೋರ್ವ ಜುಲೈ 3 ರಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಬಂದು ದೂರು ನೀಡಿರುವುದಾಗಿ ವಕೀಲರಾದ ಓಜಸ್ವಿ ಗೌಡ ಮತ್ತು ಸಚಿನ್ ಎಸ್ ದೇಶಪಾಂಡೆ ಸಾಮಾಜಿಕ ಜಾಲತಾಣಗಳ ಮೂಲಕ ಬಹಿರಂಗ ಪಡಿಸಿದ್ದಾರೆ.
ಈ ಪ್ರಕರಣದ ಬಗ್ಗೆ ಎಸ್ಪಿ ಕಚೇರಿಗೆ ಮತ್ತು ಧರ್ಮಸ್ಥಳ ಪೊಲೀಸ್ ಠಾಣೆಗೆ ಸದ್ರಿ ವ್ಯಕ್ತಿಯಿಂದ ದೂರು ದಾಖಲಾಗಿದ್ದು ವಿಚಾರಣೆ ಮಾಡಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಎಸ್ಪಿಯವರಿಗೆ ಸಲ್ಲಿಸಿದ್ದೆನ್ನಲಾದ ಸುಮಾರು ಆರು ಪುಟಗಳ ದೂರನ್ನು ವಕೀಲರು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ. ಸುರಕ್ಷತಾ ದೃಷ್ಟಿಯಿಂದ ಆ ವ್ಯಕ್ತಿಯ ಹೆಸರನ್ನು ಇನ್ನೂ ಕೂಡ ಬಹಿರಂಗಗೊಂಡಿಲ್ಲವಾದರೂ, ‘ಆ’ ವ್ಯಕ್ತಿ ಧರ್ಮಸ್ಥಳದಲ್ಲಿ ಸ್ವಚ್ಛತಾ ಕಾರ್ಮಿಕ ಆಗಿದ್ದ ಎಂದು ಖಚಿತಪಡಿಸಿದೆ. ಅಲ್ಲದೇ, ಆತ 1995ರಿಂದ 2014ರ ವರೆಗೆ ಉದ್ಯೋಗದಲ್ಲಿದ್ದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಅಲ್ಲದೇ ಅತ್ಯಂತ ಭಾರ ಹೃದಯದಿಂದ ಹಾಗೂ ಪರಿಹಾರವಾಗದ ಪಾಪಪ್ರಜ್ಞೆಯಿಂದ ಹೊರಬರುವ ಸಲುವಾಗಿ ಈ ದೂರು ನೀಡುತ್ತಿದ್ದೇನೆ. ನಾನು 11 ವರ್ಷಗಳ ಹಿಂದೆ ನನ್ನ ಸಣ್ಣ ಕುಟುಂಬ ಸಮೇತ ಧರ್ಮಸ್ಥಳವನ್ನು ರಾತ್ರೋರಾತ್ರಿ ತೊರೆದು, ನೆರೆ ರಾಜ್ಯವೊಂದರಲ್ಲಿ ತಲೆಮರೆಸಿಕೊಂಡೆ. ಧರ್ಮಸ್ಥಳದಿಂದ ದೂರವಿದ್ದರೂ, ನಾನು ಮತ್ತು ನನ್ನ ಕುಟುಂಬ ಯಾವುದೇ ಕ್ಷಣದಲ್ಲಿ ಹಿಂದಿನವರಂತೆಯೇ ಕೊಲೆಗೊಳಗಾಗುತ್ತೇವೆ ಎಂಬ ಖಚಿತತೆ ನಮ್ಮನ್ನು ದಿನನಿತ್ಯ ಕಾಡಿದೆ ಎಂದು ಅನಾಮಧೇಯ ವ್ಯಕ್ತಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
“ಆರೋಪಿತರ ಹೆಸರುಗಳು ಮತ್ತು ಅಪರಾಧಗಳಲ್ಲಿ ಅವರ ನಿಖರ ಪಾತ್ರವನ್ನು ಪೊಲೀಸರಿಗೆ ತಿಳಿಸುವ ಮುನ್ನವೇ ನಾನು ಕೊಲೆಯಾದರೆ ಇಲ್ಲವೇ ಅಲಭ್ಯವಾಗಿ ಹೋದರೆ, ನಡೆದಿರುವ ಸತ್ಯವು ನನ್ನೊಡನೆಯೇ ನಾಶವಾಗದಿರಲೆಂದು ಮುಂದುವರೆದ ದೂರನ್ನು ನನ್ನ ಸಹಿ ಹಾಕಿ, ಸುಪ್ರೀಂ ಕೋರ್ಟ್ ವಕೀಲರಾದ ಶ್ರೀ ಕೆ. ವಿ. ಧನಂಜಯ್ ರವರಿಗೆ ನೀಡಿರುತ್ತೇನೆ” ಎಂದು ಎಸ್ಪಿಯವರಿಗೆ ಸಲ್ಲಿಸಿರುವ ಆರು ಪುಟಗಳ ದೂರಿನಲ್ಲಿ ಕೊನೆಯಲ್ಲಿ ಉಲ್ಲೇಖಿಸಿದ್ದಾರೆ.
ಅನಾಮಿಕ ವ್ಯಕ್ತಿ ಎಸ್ಪಿಯವರಿಗೆ ಸಲ್ಲಿಸಿರುವ ಆರು ಪುಟಗಳ ದೂರು ಹೀಗಿದೆ:-








