
ಪುತ್ತೂರು :ಈ ಬಾರಿಯ ರಾಜ್ಯ ಬಜೆಟ್ ನಲ್ಲಿ ಪುತ್ತೂರಿನ ಸೇಡಿಯಾಪು ಎಂಬಲ್ಲಿ ಮೆಡಿಕಲ್ ಕಾಲೇಜಿಗೆ ಪೂರಕವಾಗಿ ಆಸ್ಪತ್ರೆ ಮೇಲ್ಸರ್ಜೆಯ ಪ್ರಸ್ತಾವನೆ ಘೊಷಣೆಯಾಗಿದ್ದು, ಮೆಡಿಕಲ್ ಕಾಲೇಜಿಗೆ ಕಾಯ್ದಿರಿಸಿದ ಜಮೀನಿನಲ್ಲಿ 300 ಹಾಸಿಗೆಯ ಆಸ್ಪತ್ರೆ ನಿರ್ಮಾಣಕ್ಕಾಗಿ ಡಿಪಿಆರ್ ತಯಾರಿಸಲು 1.64 ಕೋಟಿಗೆ ಟೆಂಡರ್ ಪ್ರಕ್ರಿಯೆ ಆರಂಭಗೊಂಡಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.
ಅವರು ಗುರುವಾರ ಶಾಸಕರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಒಟ್ಟು ಮೂರು ಕಡೆಗಳಲ್ಲಿ ಡಿಪಿಆರ್ ಗೆ ಈ 1.64 ಕೋಟಿ ರೂ. ಮಂಜೂರುಗೊಂಡಿದೆ . ಒಟ್ಟು 500 ಬೆಡ್ ಆಗಿ ಆಸ್ಪತ್ರೆ ಮೇಲ್ದರ್ಜೆಗೇರಿದರೆ ಅನುಕೂಲವಾಗಲಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಸೇಡಿಯಾಪಿನಲ್ಲಿ ಆಯುಷ್ ಆಸ್ಪತ್ರೆ, ನರ್ಸಿಂಗ್ ಕಾಲೇಜು, ಆಯುರ್ವೇದ ಆಸ್ಪತ್ರೆ ನಿರ್ಮಾಣ ಮಾಡಲು ಮುಂದಿನ ಬಜೆಟ್ ನಲ್ಲಿ ಅನುದಾನ ನೀಡುವಂತೆ ಮುಖ್ಯಮಂತ್ರಿಗಳಲ್ಲಿ ತಿಳಿಸಲಾಗಿದೆ. ಅನುದಾನ ಮಂಜೂರು ಮಾಡುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಮೆಡಿಕಲ್ ಕಾಲೇಜಿಗೆ ಪೂರಕವಾಗಿ 4 ಸ್ಟಾರ್ ಹೊಟೇಲ್ ನ ಅಗತ್ಯವಿದೆ. ಇದು ಆರ್ಥಿಕವಾಗಿಯೂ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಕೆಲವು ಕಂಪೆನಿಗಳ ಜತೆ ಚರ್ಚಿಸಲಾಗಿದೆ ಎಂದು ತಿಳಿಸಿದರು.
ಪುತ್ತೂರು ವಿಧಾನಸಭಾ ಕ್ಷೇತ್ರದ ಉಪ್ಪಿನಂಗಡಿ ಗ್ರಾಮದಲ್ಲಿ ನೇತ್ರಾವತಿ ಹಾಗೂ ಕುಮಾರಧಾರ ನದಿ ಸಂಗಮದಲ್ಲಿ ಕಿಂಡಿ ಅಣೆಕಟ್ಟು ಹಾಗೂ ಅಭಿವೃದ್ಧಿ ಕಾಮಗಾರಿ 353 ಕೋಟಿ ರೂ. ವೆಚ್ಚದಲ್ಲಿ ನಡೆಯಲಿದ್ದು, ಈ ಪೈಕಿ ದೇವಸ್ಥಾನದ ಅಭಿವೃದ್ಧಿ ಜತೆಗೆ ರಾಜ್ಯದ ಭಕ್ತರನ್ನು ಆಕರ್ಷಿಸುವ ನಿಟ್ಟಿನಲ್ಲಿ ವಸತಿಗೃಹ, ಊಟದ ವ್ಯವಸ್ಥೆ ಆಗಬೇಕು. ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ವಸತಿಗೃಹ ಹಾಗೂ ಪಿಂಡಪ್ರಧಾನ ಕಾರ್ಯಗಳ ವ್ಯವಸ್ಥೆ ಆಗಲಿದೆ ಎಂದು ತಿಳಿಸಿದ ಅವರು, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ಎದುರು ಇರುವ ಈಶಾನ್ಯ ಭಾಗದ ಜಮೀನನ್ನು ದೇವಾಲಯದ ಉಪಯೋಗಕ್ಕೆ ಖರೀಸಲು 1.51 ಕೋಟಿ ರೂ. ಮಂಜೂರಾತಿ ನೀಡಲಾಗಿದೆ. 30 ಸೆಂಟ್ಸ್ ಜಾಗಕ್ಕೆ ಸರಕಾರಕ್ಕೆ ನೀಡಲಾಗಿದೆ ಎಂದು ತಿಳಿಸಿದರು.
ಕೇರಳ ಗಡಿ ಭಾಗವಾದ ಬೆಟ್ಟಂಪಾಡಿ-ಪಾಣಾಜೆ-ಕಾಟುಕುಕ್ಕೆ-ಅಡ್ಕಸ್ಥಳ—ಸಾರಡ್ಕ-ಅಡ್ಯನಡ್ಕ-ವಿಟ್ಲ-ಕಬಕ-ಪುತ್ತೂರು ಮಾರ್ಗವಾಗಿ ಬಸ್ಸಿನ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಉಪ್ಪಿನಂಗಡಿ ಗ್ರಾಮದ ಬಜತ್ತೂರಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ನಿರ್ಮಾಣಕ್ಕಾಗಿ 22 ಕೋಟಿ ರೂ. ಅನುದಾನ ಬಿಡುಗಡೆಗೊಂಡಿದ್ದು 6.5 ಎಕ್ರೆ ಜಾಗದಲ್ಲಿ ಈ ಭವನ ನಿರ್ಮಾಣವಾಗಲಿದೆ. ಇದು ಟೆಂಡರ್ ಹಂತದಲ್ಲಿದೆ ಎಂದು ತಿಳಿಸಿದರು.
ತಾಲೂಕಿನ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗಾಗಿ ಮುಖ್ಯಮಂತ್ರಿಯವರು 50 ಕೋಟಿ ಅನುದಾನ ನೀಡುವ ಭರವಸೆ ನೀಡಿದ್ದು, ಈ ಪೈಕಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸರ್ವ ಅಭಿವೃದ್ಧಿಯೂ ನಡೆಯಲಿದೆ. ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಪಕ್ಷಾತೀತವಾಗಿ ಸುಮಾರು 20 ಜನರ ತಂಡದ ಸಮಿತಿಯನ್ನು ರಚಿಸಲಾಗುವುದು. ಇದಕ್ಕಾಗಿ ಉದ್ಯಮಿಗಳು, ಎಲ್ಲಾ ಪಕ್ಷದವರನ್ನು ಸೇರಿಸಿಕೊಳ್ಳಲಾಗುವುದು. ಇದಕ್ಕಾಗಿ 50 ಕೋಟಿ ರೂಪಾಯಿಯ ಮಾಸ್ಟರ್ ಪ್ಲ್ಯಾನ್ ಸರಕಾರಕ್ಕೆ ಹೋಗಿದೆ ಎಂದು ತಿಳಿಸಿದರು.
ಮಾಣಿ-ಸಂಪಾಜೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಬಗ್ಗೆ ಪ್ರಥಮ ಹಂತದ ಡಿಪಿಆರ್ ತಯಾರಿಸಲು 3.19 ಕೋಟಿ ಮಂಜೂರುಗೊಂಡಿದ್ದು, ಪ್ರಕ್ರಿಯೆ ಆರಂಭಗೊಂಡಿದೆ. ಪಿಲಿಮಿನರಿ ಡಿಪಿಆರ್, ಅಂಡರ್ ಪಾಸ್ ರಸ್ತೆಗಳ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.
ಪುತ್ತೂರಿನ ಬಿರುಮಲೆ ಬೆಟ್ಟದಲ್ಲಿ ಜಿಲ್ಲೆಯಲ್ಲೇ ಅತೀ ಎತ್ತರದ ರಾಷ್ಟ್ರೀಯ ಧ್ವಜಸ್ತಂಭ ನಿರ್ಮಾಣ ಮಾಡಲು ಈಗಾಗಲೇ ನಗರಸಭೆಯಿಂದ ಮಂಜೂರಾತಿಗೊಂಡಿದೆ. ಇದರ ಪ್ರಥಮ ಹಂತದಲ್ಲಿ ಮಣ್ಣು ಪರೀಕ್ಷೆ ಮಾಡಲು ಕಳುಹಿಸಲಾಗಿದೆ ಎಂದು ತಿಳಿಸಿದರು.
ಪುತ್ತೂರಿನಲ್ಲಿ ಮೇ 17 ರಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಕಾಂಗ್ರೆಸ್ ಕುಟುಂಬ ಸಮ್ಮಿಲನ ಎಪಿಎಂಸಿ ಸಭಾಂಗಣದ ಹೊರ ಆವರಣದಲ್ಲಿ ನಡೆಯಲಿದ್ದು, ಈ ಸಂದರ್ಭದಲ್ಲಿ ಕಾರ್ಯಕರ್ತರಿಗೆ ಕಾರ್ಯಾಗಾರವನ್ನೂ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ರಾಜ್ಯದ ವರ್ಕಿಂಗ್ ಅಧ್ಯಕ್ಷ ಚಂದ್ರಶೇಖರ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.


