ಫರಂಗಿಪೇಟೆ: ಹತ್ತು ದಿನ ಕಳೆದರೂ ಪತ್ತೆಯಾಗದ ದಿಗಂತ್ : ಸಿಐಡಿ ತನಿಖೆಗೆ ಆಗ್ರಹ.

ಮಂಗಳೂರು: ಹತ್ತು ದಿನಗಳು ಕಳೆದು ಇಂದಿಗೆ ಹನ್ನೊಂದನೇ ದಿನ. ಫೆ.25ರಂದು ನಾಪತ್ತೆಯಾಗಿದ್ದ ಫರಂಗಿಪೇಟೆ ಕಿದೆಬೆಟ್ಟಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ದಿಗಂತ್ ಸುಳಿವು ಇನ್ನೂ ಸಿಕ್ಕಿಲ್ಲ, ಈ ಘಟನೆ ಬಗ್ಗೆ ಆನೇಕ ಸಂಶಯಗಳು ವ್ಯಕ್ತವಾಗಿ, ಚರ್ಚೆಗೆ ಕಾರಣವಾಗಿದೆ. ಸ್ಥಳೀಯರು ಈ ಪ್ರಕರಣವನ್ನು ಸಿಐಡಿ ಗೆ ಒಪ್ಪಿಸಿ ಎಂದು ಆಗ್ರಹಿಸಿದ್ದಾರೆ.

ದಿಗಂತ್ ಮನೆಯಿಂದ ಹೋದವನು ಎಲ್ಲಿಗೆ ಹೋದ ಎಂಬ ಕುರಿತು ಸಮೀಪದಲ್ಲಿರುವ ಸಿಸಿ ಕ್ಯಾಮರಾ ಸಹಿತ ಸಂಬಂಧಿಕರು, ಸ್ನೇಹಿತರು ಹಾಗೂ ಪರಿಚಯಸ್ಥರನ್ನೆಲ್ಲಾ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಇದುವರೆಗೂ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ. ಆದರೆ ಶೀಘ್ರ ಪ್ರಕರಣ ಬಗೆಹರಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ದಿಗಂತ್ ನಾಪತ್ತೆ ಪ್ರಕರಣದ ಬಳಿಕ ಫರಂಗಿಪೇಟೆಯಲ್ಲಿ ಪೊಲೀಸರಿಗೆ ಒತ್ತಡ ಹೇರುವ ಸಲುವಾಗಿ ಪ್ರತಿಭಟನೆಯನ್ನೂ ನಡೆಸಲಾಗಿತ್ತು. ಇದಾದ ಬಳಿಕ ತನಿಖೆ ಚುರುಕುಗೊಂಡಿತು. ಬಂಟ್ವಾಳದಲ್ಲಿ ಕೆಲಸ ಮಾಡಿದ್ದ ಪ್ರಮುಖ ಪೊಲೀಸ್ ಅಧಿಕಾರಿಗಳೇ ತನಿಖಾ ತಂಡದಲ್ಲಿದ್ದು, ರಾತ್ರಿ ಹಗಲೆನ್ನದೆ ತನಿಖೆ ಕೈಗೊಂಡಿದ್ದಾರೆ. ಆತನ ಮೊಬೈಲ್ ಸಂದೇಶ, ಚಾಟ್ ಹಿಸ್ಟರಿಗಳನ್ನು ಕಲೆ ಹಾಕಿ ಇದೇನಾದರೂ ಪತ್ತೆ ಕಾರ್ಯಕ್ಕೆ ಸಹಾಯವಾಗುತ್ತಾ ಎಂಬುದನ್ನು ನೋಡಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಅವರೇ ಖುದ್ದಿ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದಾರೆ.

ಫೆಬ್ರವರಿ 25ರಂದು ಸಂಜೆ 7 ಗಂಟೆಗೆ ಮನೆಯಿಂದ ದೇವಸ್ಥಾನಕ್ಕೆಂದು ಹೊರಟಿದ್ದ ದಿಗಂತ್, ರಾತ್ರಿ 8.30ರ ಸುಮಾರಿಗೆ ಆಂಜನೇಯ ವ್ಯಾಯಾಮ ಶಾಲೆ ಬಳಿ ಓಡಾಡಿದ್ದು ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಅಲ್ಲಿಂದ ಯಾವ ಕಡೆಗೆ ಹೋಗಿದ್ದಾನೆ ಎಂಬುದು ಸಮೀಪದ ಯಾವುದೇ ಸಿಸಿ ಟಿವಿಗಳಲ್ಲಿ ದಾಖಲಾಗಿಲ್ಲ. ಆತನ ಚಪ್ಪಲಿಗಳು ಹಾಗೂ ದೂರವಾಣಿ ರೈಲ್ವೆ ಹಳಿಯ ಬಳಿ ಸಿಕ್ಕಿದ್ದು, ಪತ್ತೆ ಕಾರ್ಯಕ್ಕೆ ತೊಡಕುಂಟಾಗಿದೆ. ರೈಲ್ವೆ ನಿಲ್ದಾಣ, ಹಳಿಯ ಆಸುಪಾಸಿನಲ್ಲಿ ಯಾವುದೇ ಕ್ಯಾಮರಾಗಳು ಇಲ್ಲದಿರುವ ಕಾರಣ, ತನಿಖೆ ಕ್ಲಿಷ್ಟವಾಗುತ್ತಿದೆ ಎಂದು ಹೇಳಲಾಗುತ್ತಿದೆ. ಚಪ್ಪಲಿಯಲ್ಲಿ ರಕ್ತದ ಕಲೆಗಳು ಕಂಡ ಕಾರಣ ಸ್ಥಳೀಯರಿಗೆ ಈತನನ್ನು ಅಪಹರಿಸಿರಬಹುದು ಎಂಬ ಸಂಶಯ ಹುಟ್ಟಿಕೊಂಡಿದ್ದು, ಬಳಿಕ ಫರಂಗಿಪೇಟೆ ಬಂದ್ ವರೆಗೆ ಪ್ರಕರಣ ಬೆಳೆದಿತ್ತು. ಈತ ಹೋದ ಹೊತ್ತಿನಲ್ಲಿ ಕ್ವಾಲಿಸ್ ಕಾರೊಂದು ತಿರುಗಾಡಿದ್ದು ಕಂಡುಬಂದಿದ್ದು ಮತ್ತಷ್ಟು ಅನುಮಾನಗಳಿಗೆ ಕಾರಣವಾಗಿತ್ತು. 

ಈಗ ಮಂಗಳ ಮುಖಿಯರು ದಿಗಂತ್ ನನ್ನು ಅಪಹರಿಸಿದರೇ ..? ಎಂದು ಸಂಶಯ ವ್ಯಕ್ತವಾಗಿದೆ. ಈ ಹಿಂದೆ ಇದೇ ರೀತಿಯ ಘಟನೆ ನಡೆದಿತ್ತು ಎಂದು ತಿಳಿದು ಬಂದಿದೆ.

News Editor

Learn More →

Leave a Reply

Your email address will not be published. Required fields are marked *