
2015ರ ಮಾರ್ಚ್ 7ರಂದು ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಅಪರಿಚಿತ ವ್ಯಕ್ತಿಯಿಂದ ಹತ್ಯೆಗೊಳಗಾಗಿದ್ದ ಬೆಂಗಳೂರಿನ ಸಾಫ್ಟ್‌ವೇರ್ ಎಂಜಿನಿಯರ್ ಪ್ರಭಾ ಅರುಣ್ ಕುಮಾರ್ ಅವರ ಪ್ರಕರಣದಲ್ಲಿ ನ್ಯೂ ಸೌತ್ ವೇಲ್ಸ್ ಪೊಲೀಸರಿಗೆ ಈವರೆಗೂ ಹಂತಕರ ಬಗ್ಗೆ ಯಾವ ಸುಳಿವು ಕೂಡ ದೊರಕಿಲ್ಲ. ಸಾರ್ವಜನಿಕರ ನೆರವು ಕೋರಿರುವ ಅವರು ಸುಳಿವು ನೀಡಿದವರಿಗೆ 1 ಮಿಲಿಯನ್ ಡಾಲರ್ ಬಹುಮಾನ ಘೋಷಣೆ ಮಾಡಿದ್ದಾರೆ.
ಡ್ನಿ: ಸುಮಾರು ಒಂದು ದಶಕದ ಹಿಂದೆ ನಡೆದ ಕರ್ನಾಟಕ ಮೂಲದ ಸಾಫ್ಟ್‌ವೇರ್ ಎಂಜಿನಿಯರ್ ಪ್ರಭಾ ಅರುಣ್ ಕುಮಾರ್ ಅವರ ಹತ್ಯೆ ಪ್ರಕರಣ ಬಗೆಹರಿಸಲು ಸಹಾಯ ಮಾಡುವ ವ್ಯಕ್ತಿಗೆ 1 ಮಿಲಿಯನ್ ಡಾಲರ್ ಬಹುಮಾನ ನೀಡುವುದಾಗಿ ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ಸರ್ಕಾರ ಘೋಷಣೆ ಮಾಡಿದೆ.
ಪ್ರಭಾ ಅರುಣ್ ಕುಮಾರ್ ಅವರನ್ನು 2015ರ ಮಾರ್ಚ್ 7ರಂದು ಸಿಡ್ನಿಯ ಪಶ್ಚಿಮದಲ್ಲಿನ ಪರಮಟ್ಟ ಪಾರ್ಕ್‌ನಲ್ಲಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ 41 ವರ್ಷದ ಪ್ರಭಾ ಅವರ ಕತ್ತಿಗೆ ಇರಿದು ಹತ್ಯೆ ಮಾಡಲಾಗಿತ್ತು. ಘಟನೆ ನಡೆದು 10 ವರ್ಷಗಳಾಗುತ್ತಾ ಬಂದರೂ ಈವರೆಗೂ ಹಂತಕರ ಸುಳಿವು ದೊರಕಿಲ್ಲ. ಇದು ಆಸ್ಟ್ರೇಲಿಯಾ ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
“ತನಿಖೆ ಸಂದರ್ಭದಲ್ಲಿ ಪೊಲೀಸ್ ಪಡೆಯ ಪತ್ತೇದಾರರು ಅನೇಕ ಹಂತದ ವಿಚಾರಣೆಗಳನ್ನು ನಡೆಸಿದ್ದಾರೆ. ಮಾಹಿತಿಗಾಗಿ ಸಾರ್ವಜನಿಕರ ನೆರವಿಗಾಗಿ ಹಲವು ಬಾರಿ ಮನವಿಗಳನ್ನು ಮಾಡಲಾಗಿದೆ. ಆದರೂ ಈ ಪ್ರಕರಣ ಬಗೆಹರಿಯದೆ ಉಳಿದಿದೆ” ಎಂದು ಎನ್‌ಎಸ್‌ಡಬ್ಲ್ಯೂ ಪೊಲೀಸರು ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನ ಮೈಂಡ್ ಟ್ರೀ ಕಂಪೆನಿಯ ಉದ್ಯೋಗಿಯಾಗಿದ್ದ ಪ್ರಭಾ ಅವರು ಕರ್ತವ್ಯದ ನಿಯೋಜನೆ ಮೇರೆಗೆ ಆಸ್ಟ್ರೇಲಿಯಾಕ್ಕೆ ತೆರಳಿದ್ದರು. ಬೆಂಗಳೂರಿನಲ್ಲಿದ್ದ ಪತಿ ಅರುಣ್ ಕುಮಾರ್ ಜತೆ ಫೋನ್‌ನಲ್ಲಿ ಮಾತನಾಡುತ್ತಾ ತೆರಳುತ್ತಿದ್ದ ಅವರಿಗೆ ತಮ್ಮನ್ನು ಯಾರೋ ಹಿಂಬಾಲಿಸುತ್ತಿದ್ದಾರೆ ಎಂಬ ಅನುಮಾನ ಮೂಡಿತ್ತು. ಅದನ್ನು ಪತಿ ಬಳಿ ಹೇಳಿದ್ದರು. ಅದೇ ವೇಳೆ ಅವರ ಮೇಲೆ ದಾಳಿ ನಡೆದಿತ್ತು. ಅವರು ವಾಸವಿದ್ದ ಸ್ಥಳದಿಂದ ಕೇವಲ 300 ಮೀಟರ್ ದೂರದಲ್ಲಿ ಈ ಹತ್ಯೆ ನಡೆದಿತ್ತು.
ಪರಿಚಿತರ ಕೈವಾಡ ಶಂಕೆ
ಪತ್ನಿ ಶವವನ್ನು ವಾಪಸ್ ತರುವ ಸಲುವಾಗಿ ಅರುಣ್ ಕುಮಾರ್ ಅವರು ತಮ್ಮ ಇಬ್ಬರು ಹೆಣ್ಣುಮಕ್ಕಳ ಜತೆ ಆಸ್ಟ್ರೇಲಿಯಾಕ್ಕೆ ತೆರಳಿದ್ದರು. ಹತ್ಯೆ ಮಾಡಿದ ವ್ಯಕ್ತಿ ಪ್ರಭಾ ಅವರಿಗೆ ಅಪರಿಚಿತನಾದರೂ, ಆಸ್ಟ್ರೇಲಿಯಾ ಅಥವಾ ಭಾರತದಲ್ಲಿರುವ ಅವರ ಪರಿಚಿತರೇ ಈ ಕೊಲೆ ಮಾಡಿಸಿರಬಹುದು ಎನ್ನುವುದು ಪೊಲೀಸರ ಅನುಮಾನವಾಗಿದೆ. ತನಿಖೆ ವೇಳೆ ಅನೇಕ ಪುರಾವೆಗಳು ದೊರಕಿದರೂ, ಹಂತಕರ ಬಂಧನಕ್ಕೆ ಅಗತ್ಯವಾದ ಪ್ರಬಲ ಸಾಕ್ಷ್ಯ ಅಥವಾ ಸುಳಿವು ಈವರೆಗೂ ಲಭ್ಯವಾಗಿಲ್ಲ.


