
ಖಾಸಗಿ ಶಾಲೆಗಳು ಶುಲ್ಕದ ವಿವರ ಕಡ್ಡಾಯವಾಗಿ ಪ್ರಕಟಿಸಬೇಕು; ಶಿಕ್ಷಣ ಇಲಾಖೆ ಸೂಚನೆ
ಪ್ರಸಕ್ತ 2024-25 ನೇ ಸಾಲಿಗೆ ನಿಗಡಿಪಡಿಸಿರುವ ಶುಲ್ಕದ ವಿವರ ಪ್ರಕಟಿಸುವಂತೆ ಶಿಕ್ಷಣ ಇಲಾಖೆಯು ರಾಜ್ಯ ಪಠ್ಯಕ್ರಮದ ಖಾಸಗಿ ಶಾಲೆಗಳಿಗೆ ಸೂಚನೆ ನೀಡಿದೆ. ರಾಜ್ಯದಲ್ಲಿ 17,125 ಖಾಸಗಿ ಶಾಲೆಗಳಿದ್ದು, ಬಹುತೇಕ ಎಲ್ಲವೂ ಪ್ರವೇಶ ಪ್ರಕ್ರಿಯೆ ಆರಂಭಿಸಿದೆ. ಶಿಕ್ಷಣ ಇಲಾಖೆ ನಿಯಮಗಳ ಪ್ರಕಾರ, ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಳ್ಳುವ ವೇಳೆ ಆ ವಿದ್ಯಾರ್ಥಿ ಮತ್ತು ಪೋಷಕರನ್ನು ಪರೀಕ್ಷೆಗೆ ಒಳಪಡಿಸಬಾರದು ಎಂದು ಸ್ಪಷ್ಟವಾಗಿ ಸೂಚಿಸಿದೆ
ಬಹುತೇಕ ಖಾಸಗಿ ಶಾಲೆಗಳು ಇದ್ಯಾವುದನ್ನೂ ಲೆಕ್ಕಿಸದೆ ನೇರವಾಗಿ ವಿದ್ಯಾರ್ಥಿ ಮತ್ತು ಪೋಷಕರನ್ನು ಪರೀಕ್ಷೆಗೆ ಒಳಪಡಿಸುತ್ತಿವೆ. ಇಲ್ಲಿ ಪಾಸಾದ ಬಳಿಕವಷ್ಟೇ ವಿದ್ಯಾರ್ಥಿಗಳಿಗೆ ಸೀಟು ಖಚಿತವಾಗುತ್ತದೆ. ಪ್ರತಿಷ್ಠಿತ ಶಾಲೆಗಳಲ್ಲಿ ಪೋಷಕರ ವೃತ್ತಿ ಕೂಡ ಬಹಳ ಮುಖ್ಯವಾಗುತ್ತದೆ. ಒಳ್ಳೆಯ ವೇತನ ಅಥವಾ ಬಿಸಿನೆಸ್ ನಲ್ಲಿ ಆದಾಯ ಗಳಿಸುತ್ತಿದ್ದರಷ್ಟೇ ಸೀಟು ನೀಡುತ್ತಾರೆ. ಏಕೆಂದರೆ, ಪ್ರತಿ ಬಾರಿ ಶುಲ್ಕ ಪ್ರಶ್ನಿಸದೇ ಪಾವತಿಸುತ್ತಾರೆ ಎಂಬ ಖಾತ್ರಿಗಾಗಿ ಪೋಷಕರ ವೃತ್ತಿಯನ್ನು ಶಾಲೆಗಳು ಗಂಭೀರವಾಗಿ ಪರಿಗಣಿಸುತ್ತವೆ. ಇದಕ್ಕಾಗಿಯೇ ಕೆಲವು ನಿಯಮಗಳನ್ನು ಪಾಲಿಸುವಂತೆ ಖಾಸಗಿ ಶಾಲೆಗಳಿಗೆ ಇಲಾಖೆ ಸೂಚನೆ ನೀಡಿದೆ.
ನಿಗದಿಪಡಿಸಿದ ಶುಲ್ಕವನ್ನಷ್ಟೇ ಪಡೆಯಬೇಕು. ಶುಲ್ಕದಲ್ಲಿ ಡೊನೇಷನ್ ಪಡೆಯಬಾರದು, ಇದನ್ನು ಶಾಲಾ ಶುಲ್ಕದಲ್ಲಿ ಸೇರಿಸಬಾರದು. ವಿದ್ಯಾರ್ಥಿಗಳನ್ನು ಯಾವುದೇ ರೀತಿಯ ಪರೀಕ್ಷೆಗೆ ಒಳಪಡಿಸಬಾರದು. ನಿಗದಿತ ಶುಲ್ಕವನ್ನು ಶಾಲಾ ಜಾಲತಾಣ, ಸೂಚನಾ ಫಲಕದಲ್ಲಿ ಪ್ರಕಟಿಸಬೇಕು. ನಿಯಮ ಉಲ್ಲಂಘಿಸಿದರೆ 25 ಸಾವಿರ ರೂಪಾಯಿ ದಂಡ.


