
ಕರ್ನಾಟಕ ಲೋಕಾಯುಕ್ತವು ಐಪಿಎಸ್ ಅಧಿಕಾರಿ ಶ್ರೀನಾಥ್ ಜೋಷಿ ಮತ್ತು ಕಾನ್ಸ್ಟೇಬಲ್ ನಿಂಗಪ್ಪ ವಿರುದ್ಧದ ಭ್ರಷ್ಟಾಚಾರದ ಆರೋಪ ಸಾಬೀತಾಗಿದೆ ಎಂದು ಘೋಷಿಸಿದೆ. ಅವರು ಸರ್ಕಾರಿ ಅಧಿಕಾರಿಗಳಿಂದ ‘‘ಕೆಜಿ’’ ಎಂಬ ಕೋಡ್ ವರ್ಡ್ ಬಳಸಿ ಹಣ ವಸೂಲಿ ಮಾಡುತ್ತಿದ್ದರು. ನಿಂಗಪ್ಪ ಕ್ರಿಪ್ಟೋ ಕರೆನ್ಸಿಯಲ್ಲಿ ದೊಡ್ಡ ಮೊತ್ತ ಹೂಡಿಕೆ ಮಾಡಿದ್ದಾರೆ ಎಂಬುದು ತನಿಖೆಯಲ್ಲಿ ಬಹಿರಂಗಗೊಂಡಿದೆ ಎಂದು ಲೋಕಾಯುಕ್ತ ಪ್ರಕಟಣೆ ತಿಳಿಸಿದೆ.
ಕರ್ನಾಟಕ ಲೋಕಾಯುಕ್ತ ಅಧಿಕಾರಿಯಿಂದಲೇ ಭ್ರಷ್ಟಾಚಾರ (Corruption) ಪ್ರಕರಣ ಇದೀಗ ಸಾಬೀತಾಗಿದ್ದು, ಕ್ರಮಕ್ಕೆ ಶಿಫಾರಸು ಮಾಡಿರುವುದಾಗಿ ಲೋಕಾಯುಕ್ತ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ಬೆಂಗಳೂರು ನಗರ ಎಸ್ಪಿಯಾಗಿದ್ದ ಐಪಿಎಸ್ ಅಧಿಕಾರಿ (IPS Officer) ಶ್ರೀನಾಥ್ ಜೋಷಿ ಹಾಗೂ ಕಾನ್ಸ್ಟೇಬಲ್ ನಿಂಗಪ್ಪ ಅಕ್ರಮವೆಸಗಿರುವುದು ದೃಢಪಟ್ಟಿದೆ. ಇವರಿಬ್ಬರೂ ಅಬಕಾರಿ, ಬಿಬಿಎಂಪಿ ಅಧಿಕಾರಿಗಳಿಂದ ಹಣ ವಸೂಲಿ ಮಾಡಿದ್ದಾರೆ ಎಂದು ಲೋಕಾಯುಕ್ತ ತಿಳಿಸಿದೆ. ಶ್ರೀನಾಥ್ ಜೋಷಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದೆ.
ಲೋಕಾಯುಕ್ತ ಸಂಸ್ಥೆಯ ಹೆಸರು ದುರ್ಬಳಕೆ ಮಾಡಿಕೊಂಡು ಹಣ ಪಡೆದ ಬಗ್ಗೆ ರಹಸ್ಯ ಮಾಹಿತಿ ದೊರೆತ ಕೂಡಲೇ ಲೋಕಾಯುಕ್ತರು ಸಂಸ್ಥೆಯ ಪೊಲೀಸ್ ಅಧೀಕ್ಷಕರಿಗೆ ತನಿಖೆಗೆ ಆದೇಶಿಸಿದ್ದರು. ಅದರನ್ವಯ ಬೆಂಗಳೂರು ನಗರ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ನಡೆಸಿದ ತನಿಖೆಯಲ್ಲಿ ಶ್ರೀನಾಥ್ ಜೋಷಿ ಹಾಗೂ ಕಾನ್ಸ್ಟೇಬಲ್ ನಿಂಗಪ್ಪ ಸರ್ಕಾರಿ ಅಧಿಕಾರಿಗಳಿಂದ ಹಣ ವಸೂಲಿ ಮಾಡಿರುವುದು ದೃಢಪಟ್ಟಿದೆ.
ಪ್ರಕರಣ ಸಂಬಧ ಕಾನ್ಸ್ಟೇಬಲ್ ನಿಂಗಪ್ಪ ಅಲಿಯಾಸ್ ನಿಂಗಪ್ಪ ಸಾವಂತನನ್ನು ಬಂಧಿಸಲಾಗಿದೆ ಎಂಬುದಾಗಿಯೂ ಲೋಕಾಯುಕ್ತ ಪ್ರಕಟಣೆ ತಿಳಿಸಿದೆ.


