

ಪುತ್ತೂರು: ಸರಕಾರಿ ಜಾಗವಾಗಿದ್ದರೂ ಪರಿಶಿಷ್ಟ ಪಂಗಡದ ಮಹಿಳೆಯೋರ್ವರಿಗೆ ಮನೆಗೆ ತೆರಳಲು ರಸ್ತೆ ಮಾಡಿಕೊಡದೆ ಆಡಳಿತ ವ್ಯವಸ್ಥೆ ನಿರ್ಲಕ್ಷ್ಯ ವಹಿಸಿದೆ. 15 ದಿನಗಳಲ್ಲಿ ಸಂಬಂಧಿಸಿದ ಅಧಿಕಾರಿಗಳು ನ್ಯಾಯ ಕೊಡದಿದ್ದರೆ ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ಕಾರ್ಯಕರ್ತರು ಕಾರ್ಯಾಚರಣೆ ನಡೆಸಿ ರಸ್ತೆ ನಿರ್ಮಾಣ ಮಾಡುತ್ತೇವೆ. ಯಾವುದೇ ಅಹಿತಕರ ಘಟನೆಗಳು ನಡೆದರೆ ಆಡಳಿತ ವ್ಯವಸ್ಥೆಯೇ ಹೊಣೆಯಾಗುತ್ತದೆ ಎಂದು ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಗಿರಿಧರ್ ನಾಯ್ಕ ಎಚ್ಚರಿಸಿದ್ದಾರೆ.

ಶನಿವಾರ ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಟ್ವಾಳ ತಾಲೂಕು ಕಡೇಶಿವಾಲ್ಯ ಗ್ರಾಮದ ನೀರಕಜೆ ಎಂಬಲ್ಲಿ ವಾಸ್ತವ್ಯ ಹೊಂದಿರುವ ಚೆನ್ನಪ್ಪ ಎಂಬವರ ಪತ್ನಿ ಸರ್ವೆ ಬಂಬರ್ 98/2 ಎ ರಲ್ಲಿ 1.98 ಎಕ್ರೆ ಜಮೀನು ಹೊಂದಿದ್ದಾರೆ. ಇದು 1970-71 ದರ್ಖಾಸ್ತು ಮಂಜೂರಾದ ಜಾಗವಾಗಿದ್ದದು, 25 ವರ್ಷಗಳ ಹಿಂದೆ ಮನೆ ಕಟ್ಟಿದ್ದಾರೆ. ಇವರ ಮನೆಗೆ ಬರುವಲ್ಲಿ 0.46 ಎಕ್ರೆ ಸರಕಾರಿ ಜಮೀನು ಇದ್ದು, ಸರಕಾರಿ ಜಾಗವಾಗಿದ್ದರೂ ಮನೆಗೆ ಹೋಗಲು ರಸ್ತೆ ನಿರ್ಮಾಣ ಮಾಡಲು ಅವಕಾಶ ನೀಡದೆ ಅನಧಿಕೃತವಾಗಿ ಸ್ವಾಧೀನ ಮಾಡಲಾಗಿದೆ. ಮೀನಾಕ್ಷಿ ಅವರ ಮನೆಗೆ ಹೋಗಲು ಸಂಪರ್ಕ ಸರ್ತೆ ಇಲ್ಲದಾಗಿದ್ದು, ಜಮೀನಿನ ಆಸುಪಾಸಿನವರಾದ ಪದ್ಮನಾಭ ರೈ ಎಂಬವರು ರಸ್ತೆ ಮಾಡಲು ಅಡ್ಡಿಪಡಿಸುತ್ತಿದ್ದಾರೆ.
ಕಾಲುದಾರಿ ಮಾತ್ರ ಇರುವುದರಿಂದ ಮೀನಾಕ್ಷಿ ಅವರು ಮೂಲಭೂತ ಸೌಕರ್ಯದಿಂದ ವಂಚಿತರಾಗಿದ್ದು, ಅನಾರೋಗ್ಯ ಸಮಯದಲ್ಲಿ ಆಸ್ಪತ್ರೆ ತೆರಳಲು ಅಸಾಧ್ಯವಾಗಿದೆ. ಮೀನಾಕ್ಷಿ ಅವರ ಪತಿ 9 ತಿಂಗಳ ಹಿಂದೆ ಮೃತಪಟ್ಟಿದ್ದು, ಪುತ್ರ ಅಕ್ಷಯ್ ಎಂಬವರು ಮರದಿಂದ ಬಿದ್ದು ಕೆಲಸ ಮಾಡಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ. ಎಸಿ, ತಹಶೀಲ್ದಾರ್, ಜಿಲ್ಲಾಧಿಕಾರಿಯವರಿಗೆ ದೂರು ನೀಡಿದರೂ ಈ ಪರಿಶಿಷ್ಟ ಪಂಗಡದ ಅಸಹಾಯಕ ಕುಟುಂಬಕ್ಕೆ ನ್ಯಾಯ ಒದಗಿಸಿಲ್ಲ. ಈ ಕಾರಣದಿಂದ ರಸ್ತೆ ನಿರ್ಮಿಸಿ ನ್ಯಾಯ ದೊರಕಿಸದೇ ಇದ್ದಲ್ಲಿ ಉಗ್ರ ಪ್ರತಿಭಟನೆ ಅನಿವಾರ್ಯವಾಗಲಿದೆ ಎಂದು ಹೇಳಿದರು.


