
ಮಂಗಳೂರು ; ದಿನಾಂಕ 17/01/2025 ರಂದು ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೆ.ಸಿ ರೋಡ್ ನಲ್ಲಿರುವ ಕೋಟೆಕಾರ್ ವ್ಯವಸಾಯ ಸೇವಾ ಸಹಕಾರಿ ಸಂಘ (ನಿ) ದಲ್ಲಿ ದರೋಡೆ ಪ್ರಕರಣವನ್ನು ಪತ್ತೆಹಚ್ಚಿ ಆರೋಪಿಗಳು ದರೋಡೆ ಗೈದ ಚಿನ್ನಾಭರಣಗಳು ಮತ್ತು ನಗದು ಹಣವನ್ನು ವಶಪಡಿಸಿಕೊಂಡಿದ್ದು ಪ್ರಕರಣದಲ್ಲಿ ಈಗಾಗಲೇ ನಾಲ್ಕು ಜನ ಆರೋಪಿಗಳನ್ನು ದಸ್ತಗಿರಿ ಮಾಡಿ ಬಂಧಿಸಿದ್ದರು.
ದರೋಡೆ ಪ್ರಕರಣದ ತನಿಖೆಯನ್ನು ಮುಂದುವರೆಸಿ ಪ್ರಕರಣದ ಪ್ರಮುಖ ಆರೋಪಿಯಾದ ಶಶಿ ತೇವರ್ ಹೆಸರಲ್ಲಿರುವ ಬಂಟ್ವಾಳ ತಾಲೂಕಿನ ಬಾಸ್ಕರ್ ಬೆಳ್ಚಪಾಡ ಎಂಬಾತನನ್ನು ದಿನಾಂಕ 24/02/2025 ರಂದು ಬೆಂಗಳೂರಿನ ರೈಲ್ವೇ ಸ್ಟೇಷನ್ ಬಳಿ ವಶಕ್ಕೆ ಪಡೆದು ವಿಚಾರಿಸಿದಾಗ ಆತನು ಏಳು ವರ್ಷಗಳಿಂದ ಸ್ಥಳೀಯ ವ್ಯಕ್ತಿ ಉಳ್ಳಾಲ ನಿವಾಸಿ ಮಹಮ್ಮದ್ ನಝೀರ್ ಎಂಬಾತನೊಂದಿಗೆ ಸಂಪರ್ಕದಲ್ಲಿದ್ದು ಕೋಟೆಕಾರ್ ವ್ಯವಸಾಯ ಸೇವಾ ಸಹಕಾರಿ ಸಂಘ (ನಿ) ದಲ್ಲಿ ದರೋಡೆ ಕೃತ್ಯವೆಸಗಲು ಸುಮಾರು 6 ತಿಂಗಳಿನಿಂದ ಇತರ ಆರೋಪಿಗಳೊಂದಿಗೆ ಸೇರಿ ಸಂಚು ರೂಪಿಸಿ ಕೃತ್ಯವೆಸಗಿರುವುದಾಗಿ ತಿಳಿಸಿದ್ದಾನೆ.ಬಳಿಕ ಆತನನ್ನು ಬಂಧಿಸಿದ್ದು ದಸ್ತಗಿರಿ ಮಾಡಿ ಕ್ರಮ ಜರುಗಿಸಿದ್ದಾರೆ.
ಬಾಸ್ಕರ್ ಬೆಳ್ಚಪಾಡ ಮಹಮ್ಮದ್ ನಝೀರ್ ನೊಂದಿಗೆ ಸಂಚಿನಲ್ಲಿ ಪಾಲ್ಗೊಂಡಿದ್ದು ಕೋಟೆಕಾರ್ ವ್ಯವಸಾಯ ಸೇವಾ ಸಹಕಾರಿ ಸಂಘ (ನಿ) ಕಟ್ಟಡವನ್ನು ಆರೋಪಿಗಳಿಗೆ ತೋರಿಸಿಕೊಟ್ಟು ಡಕಾಯತಿ ನಡೆಸಬೇಕಾದ ದಿನ, ವೇಳೆ ಹಾಗೂ ಸೊಸೈಟಿಯಲ್ಲಿರುವ ಸಿಬ್ಬಂದಿಗಳ ಬಗ್ಗೆ ಮತ್ತು ಕೃತ್ಯದ ನಂತರ ತಪ್ಪಿಸಿಕೊಂಡು ಹೋಗುವ ಮಾರ್ಗ ಮುಂತಾದ ಸ್ಥಳೀಯ ಮಾಹಿತಿಯನ್ನು ತಿಳಿಸಿದ ಬಗ್ಗೆ ತನಿಖೆಯಲ್ಲಿ ತಿಳಿದುಬಂದಿದೆ.ಆರೋಪಿ ಬಾಸ್ಕರ್ ಬೆಳ್ಚಪಾಡ ಎಂಬಾತನು ಸುಮಾರು 25 ವರ್ಷಗಳಿಂದ ಹುಟ್ಟೂರಾದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕನ್ಯಾನವನ್ನು ಬಿಟ್ಟು ಮುಂಬೈನಲ್ಲಿ ವಾಸವಾಗಿದ್ದು ಈತನ ವಿರುದ್ದ ಬೇರೆ – ಬೇರೆ ಪೊಲೀಸ್ ಠಾಣೆಯಲ್ಲಿ ಡಕಾಯಿತಿ, ಸುಲಿಗೆ, ಶಸ್ತ್ರಾಸ್ತ್ರ ಕಾಯ್ದೆಯಡಿಲ್ಲಿ ಪ್ರಕರಣಗಳು ದಾಖಲಾಗಿರುತ್ತವೆ.
ಈ ಪ್ರಕರಣದ ಆರೋಪಿಗಳ ಪತ್ತೆಯ ಬಗ್ಗೆ ಪೊಲೀಸ್ ಆಯುಕ್ತರಾದ ಅನುಪಮ್ ಅಗರ್ ವಾಲ್ ಐ.ಪಿ.ಎಸ್ ರವರ ನಿರ್ದೆಶನದಂತೆ ಉಪ ಪೊಲೀಸ್ ಆಯುಕ್ತರಾದ ಸಿದ್ಧಾರ್ಥ ಗೋಯಲ್ ಐ.ಪಿ.ಎಸ್ ಮತ್ತು ಶ್ರೀ ರವಿಶಂಕರ್ ಕೆ.ಎಸ್.ಪಿ.ಎಸ್ ಮತ್ತು ದಕ್ಷಿಣ ಉಪ-ವಿಭಾಗದ ಸಹಾಯಕ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷರಾದ ಟಿ. ಡಿ ನಾಗರಾಜ್ ಉಳ್ಳಾಲ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಉಳ್ಳಾಲ ಠಾಣಾ ಪಿ.ಎಸ್.ಐ ರವರಾದ ಶೀತಲ್ ಅಲಗೂರ, ಸಂತೋಷ್ ಕುಮಾರ್ ಡಿ ಮತ್ತು ಸಿಬ್ಬಂದಿಗಳು ಆರೋಪಿಗಳ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುವುದಾಗಿ ತಿಳಿಸಿದ್ದಾರೆ.


