
ಓಮಾನ್ ತುಳುವೆರ್ ಸಂಘಟನೆಯ ನೇತೃತ್ವದಲ್ಲಿ ಓಮಾನ್ ಕಲಾವಿದೆರ್ ಬಳಗದಿಂದ ಜನವರಿ 31ರಂದು ಮಸ್ಕತ್‌ನ ಮಜನ್ ಹೈಟ್ ಸಭಾಂಗಣದಲ್ಲಿ ನಡೆದ ನಿತ್ಯೆ ಬನ್ನಗ ನಾಟಕ ಪ್ರದರ್ಶನ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಯುವ ಸಾಧಕಿ, ತುಳು ಲಿಪಿ ಶಿಕ್ಷಕಿ ಶ್ರೀಶಾವಾಸವಿ ತುಳುನಾಡ್ (ವಿದ್ಯಾಶ್ರೀ ಎಸ್) ಅವರಿಗೆ ತುಳುನಾಡ್ದ ಗೇನದ ಪಿಂಗಾರ ಬಿರುದು ಪ್ರದಾನ ಮಾಡಲಾಯಿತು.

ಸಪ್ತಭಾಷಾ ಸಾಹಿತಿ, ತುಳು ಲಿಪಿ ಶಿಕ್ಷಕಿ, ಸಂಘಟಕಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯೆ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರಾಗಿರುವ ಶ್ರೀಶಾವಾಸವಿ ತುಳುನಾಡ್‌ರವರ ತುಳುಪರ ಚಟುವಟಿಕೆ, ತುಳುಲಿಪಿ ಅಧ್ಯಯನ-ಅಧ್ಯಾಪನ, ಸಪ್ತಭಾಷಾ ಸಾಹಿತ್ಯ, ಸಿನೆಮಾ ಯಕ್ಷಗಾನ ಸೇರಿದಂತೆ ಕಲಾ ಸಾಧನೆ, ಸಂಸ್ಕೃತಿ-ಸಂಪ್ರದಾಯದ ಬಗೆಗಿನ ವಿಶೇಷ ಒಲವು, ಜ್ಞಾನ ಸಂಪತ್ತು, ಓಮಾನ್‌ನಲ್ಲಿರುವ ತುಳುವರಿಗೆ ತುಳು ಲಿಪಿ ಕಲಿಸಿದ್ದೂ ಸೇರಿದಂತೆ ಅವರ ಸಮಗ್ರ ಸಾಧನೆಯನ್ನು ಪರಿಗಣಿಸಿ ಓಮಾನ್ ತುಳುವೆರ್ ಸಂಘಟನೆಯಿಂದ ತುಳುನಾಡ್ದ ಗೇನದ ಪಿಂಗಾರ ಬಿರುದು ನೀಡಿ ಗೌರವಿಸಿದರು.

ಈ ಸಂದರ್ಭ ವೇದಿಕೆಯಲ್ಲಿ ಕರ್ನಾಟಕ ಘನ ಸರಕಾರದ ಸಭಾಧ್ಯಕ್ಷರಾದ ಮಾನ್ಯ ಯು ಟಿ ಖಾದರ್, ಸಚಿವರಾದ ಸಿ ಟಿ ರವಿ, ರಘುಪತಿ ಭಟ್, ವಿಶ್ವವಾಣಿ ಪತ್ರಿಕೆಯ ಮುಖ್ಯಸ್ಥರಾದ ವಿಶ್ವೇಶ್ವರ ಭಟ್, ಓಮಾನ್‌ನ ಕಲಾ ಪೋಷಕರು, ಉದ್ಯಮಿಗಳು ಆಗಿರುವ ದಿವಾಕರ ಶೆಟ್ಟಿ ಮಲ್ಲಾರ್, ಓಮಾನ್ ಕನ್ನಡ ಸಂಘದ ಅಧ್ಯಕ್ಷರಾದ ಪ್ರಸಾದ್, ಓಮಾನ್ ತುಳುವೆರ್ ಸಂಘಟನೆಯ ರಮಾನಂದ ಶೆಟ್ಟಿ, ಸುಧೀರ್ ಶೆಟ್ಟಿ, ಸ್ಟ್ಯಾನ್ಲಿ ಮತ್ತಿತ್ತರ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಆ ಸಂದರ್ಭ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಶೈಕ್ಷಣಿಕ, ಕ್ರೀಡಾ ಮತ್ತು ಕಲಾ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಓಮಾನ್‌ನ ಬಾಲ ಮತ್ತು ಯುವ ಸಾಧಕರಿಗೆ ಓಮಾನ್ ತುಳುವ ಬೊಲ್ಲಿ ಪ್ರಶಸ್ತಿ ಹಾಗೂ ಹಿರಿಯ ಸಂಘಟಕರಾದ ದಿವಾಕರ ಶೆಟ್ಟಿ ಮಲ್ಲಾರ್‌ರವರಿಗೆ ಕಡಲಾಯರೆದ ತುಳುವ ಮಾಣಿಕ್ಯ, ನಾಟಕ ನಿರ್ದೇಶಕರಾದ ಜೆ.ಪಿ ತೂಮಿನಾಡುರಿಗೆ ತುಳುನಾಡ ಕಲಾ ಮಾಣಿಕ್ಯ ಬಿರುದು ಪ್ರದಾನ ಮಾಡಲಾಯಿತು. ಆ ಬಳಿಕ ಓಮಾನ್ ಕಲಾವಿದೆರ್ ತಂಡದಿಂದ ನಿತ್ಯೆ ಬನ್ನಗ ನಾಟಕ ಪ್ರದರ್ಶನ ನಡೆಯಿತು.


