

ಸೋಮೇಶ್ವರ ಪುರಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ 16 ಸ್ಥಾನಗಳಲ್ಲಿ ಜಯಿಸಿ ಬಹುಮತ ಗಳಿಸಿ ವಿಜಯಪತಾಕೆ ಹಾರಿಸಿದ್ದು, ಕಾಂಗ್ರೆಸ್ 7 ಸ್ಥಾನಗಳಿಗೆ ತೃಪ್ತಿ ಪಟ್ಟಿದೆ.

ಉಳ್ಳಾಲ, ಡಿ.30: ಸೋಮೇಶ್ವರ ಪುರಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ 16 ಸ್ಥಾನಗಳಲ್ಲಿ ಜಯಿಸಿ ಬಹುಮತ ಗಳಿಸಿ ವಿಜಯಪತಾಕೆ ಹಾರಿಸಿದ್ದು, ಕಾಂಗ್ರೆಸ್ 7 ಸ್ಥಾನಗಳಿಗೆ ತೃಪ್ತಿ ಪಟ್ಟಿದೆ.

ರಾಜ್ಯದ ಎರಡನೇ ಅತಿ ದೊಡ್ಡ ಗ್ರಾಮ ಪಂಚಾಯತ್ ಆಗಿದ್ದ ಸೋಮೇಶ್ವರವು ಪುರಸಭೆಯಾಗಿ ಮೇಲ್ದರ್ಜೆಗೇರಿ ಬರೋಬ್ಬರಿ ನಾಲ್ಕು ವರುಷದ ಬಳಿಕ ಡಿ.27 ರಂದು 23 ವಾರ್ಡ್ ಗಳಿಗೆ ಚುನಾವಣೆ ನಡೆದಿತ್ತು. ಕಳೆದ ಮೂವತ್ತು ವರುಷಗಳಿಂದ ಸೋಮೇಶ್ವರ ಸ್ಥಳೀಯಾಡಳಿತವು ಬಿಜೆಪಿ ವಶದಲ್ಲಿದ್ದು ಇದೀಗ ಮತ್ತೆ ನೂತನ ಸೋಮೇಶ್ವರ ಪುರಸಭೆಯಲ್ಲೂ ಬಿಜೆಪಿ ಬಹುಮತ ಪಡೆದು ಆಡಳಿತ ನಡೆಸಲು ಮುಂದಾಗಿದೆ.

ವಾರ್ಡ್ 1ರಲ್ಲಿ ಕಾಂಗ್ರೆಸ್ ನ ಹಾಮೀನ ಬಶೀರ್, 2ರಲ್ಲಿ ಬಿಜೆಪಿಯ ಯಶವಂತ್, 3ರಲ್ಲಿ ಬಿಜೆಪಿಯ ಸ್ವಪ್ನ ಶೆಟ್ಟಿ, 4ರಲ್ಲಿ ಕಾಂಗ್ರೆಸಿನ ಪುರುಷೋತ್ತಮ್ ಶೆಟ್ಟಿ 5ರಲ್ಲಿ ಬಿಜೆಪಿಯ ಜಯ ಪೂಜಾರಿ, 6ರಲ್ಲಿ ಬಿಜೆಪಿಯ ಮಾಲತಿ ನಾಯ್ಕ್, 7ರಲ್ಲಿ ಬಿಜೆಪಿಯ ಕಮಲಾ ನಾಯಕ್, 8ರಲ್ಲಿ ಬಿಜೆಪಿಯ ಮೋಹನ್ ಶೆಟ್ಟಿ, 9ರಲ್ಲಿ ಕಾಂಗ್ರೆಸಿನ ಪರ್ವಿನ್ ಶಾಜಿದ್, 10ರಲ್ಲಿ ಬಿಜೆಪಿಯ ಮನೋಜ್ ಕಟ್ಟೆಮನೆ, 11ರಲ್ಲಿ ಬಿಜೆಪಿಯ ಹರೀಶ್ ಕುಂಪಲ, 12ರಲ್ಲಿ ಬಿಜೆಪಿಯ ಅನಿಲ್ ಕೊಲ್ಯ, 13ರಲ್ಲಿ ಕಾಂಗ್ರೆಸಿನ ದೀಪಕ್ ಪಿಲಾರ್, 14ರಲ್ಲಿ ಬಿಜೆಪಿಯ ಅಮಿತಾ, 15ರಲ್ಲಿ ಬಿಜೆಪಿಯ ಸೋನಾ ಶುಭಾಷಿನಿ, 16ರಲ್ಲಿ ಬಿಜೆಪಿಯ ಅನಿಲ್, 17ರಲ್ಲಿ ಬಿಜೆಪಿಯ ಪುರುಷೋತ್ತಮ್ ಗಟ್ಟಿ, 18ರಲ್ಲಿ ಬಿಜೆಪಿಯ ರವಿಶಂಕರ್ ಸೋಮೇಶ್ವರ, 19ರಲ್ಲಿ ಬಿಜೆಪಿಯ ಶ್ರೀಲತಾ ದಿನೇಶ್ ಗಟ್ಟಿ, 20ರಲ್ಲಿ ಕಾಂಗ್ರೆಸಿನ ಅಬ್ದುಲ್ ಸಲಾಂ, 21ರಲ್ಲಿ ಕಾಂಗ್ರೆಸ್ನ ರಮ್ಲತ್, 22ರಲ್ಲಿ ಕಾಂಗ್ರೆಸಿನ ತಾಹಿರಾ, 23ರಲ್ಲಿ ಬಿಜೆಪಿಯ ಜಯಶ್ರೀ ಜಯ ಗಳಿಸಿದ್ದಾರೆ.
ವಾರ್ಡ್ ಸಂಖ್ಯೆ 13ರ ಕಾಂಗ್ರೆಸ್ ಅಭ್ಯರ್ಥಿ ದೀಪಕ್ ಪಿಲಾರ್ ಮತ್ತು ಬಿಜೆಪಿಯ ಅಭ್ಯರ್ಥಿ ರಾಜೇಶ್ ಕುಮಾರ್ ತಲಾ 247 ಮತಗಳನ್ನ ಪಡೆದು ಸಮಬಲ ಸಾಧಿಸಿದ್ದು ಚೀಟಿ ಎತ್ತುವ ಪ್ರಕ್ರಿಯೆಯಲ್ಲಿ ಕೈ ಅಭ್ಯರ್ಥಿ ದೀಪಕ್ ಪಿಲಾರ್ ಅದೃಷ್ಟದ ಜಯ ಸಾಧಿಸಿದರು. ಸ್ಪೀಕರ್ ಯುಟಿ ಖಾದರ್ ಪ್ರತಿನಿಧಿಸುವ ಉಳ್ಳಾಲ ಕ್ಷೇತ್ರದಲ್ಲಿ ನಡೆದ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡಿದೆ.
