ಉಡುಪಿ| ನಕಲಿ ದಾಖಲೆ ಸೃಷ್ಟಿಸಿ ಹಲವರ ಹೆಸರಿನಲ್ಲಿ ಸಾಲ ಪಡೆದು ವಂಚನೆ: ಪ್ರಕರಣ ದಾಖಲು

ಉಡುಪಿ| ನಕಲಿ ದಾಖಲೆ ಸೃಷ್ಟಿಸಿ ಹಲವರ ಹೆಸರಿನಲ್ಲಿ ಸಾಲ ಪಡೆದು ವಂಚನೆ: ಪ್ರಕರಣ ದಾಖಲು

ಉಡುಪಿ, ಮಾ.13: ಮಹಾಲಕ್ಷ್ಮೀ ಸಹಕಾರಿ ಬ್ಯಾಂಕ್ ಮಲ್ಪೆ ಶಾಖೆಯ ಮ್ಯಾನೇಜರ್‌, ಅಧ್ಯಕ್ಷರು ಸಹಿತ ಇತರರು ಹಲವು ಮಂದಿಯ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಲಕ್ಷಾಂತರ ರೂ. ಸಾಲ ಪಡೆದು ವಂಚಿಸಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಾಲಕ್ಷ್ಮೀ ಸಹಕಾರಿ ಬ್ಯಾಂಕ್ ಮಲ್ಪೆ ಶಾಖೆಯ ಸದಸ್ಯೆ, ಅಂಬಾಗಿಲಿನ ಶಾಹಿನ್ ಅವರನ್ನು ಆರೋಪಿ ರಿಯಾಝ್ ಎಂಬವರು ಆ ಬ್ಯಾಂಕ್‌ನ ಮ್ಯಾನೇಜರ್ ಸುಬ್ಬಣ್ಣ‌ ಅವರಿಗೆ ಪರಿಚಯ ಮಾಡಿಸಿದ್ದರು. 2021ರ ಜೂನ್‌ನಲ್ಲಿ ಬ್ಯಾಂಕಿನ ಮ್ಯಾನೇಜರ್ ಸುಬ್ಬಣ್ಣ ಅವರು ಶಾಹಿನ್ ಮತ್ತು ಇತರರಾದ ಅಫ್ರೀನ್, ತಸ್ಲೀಮ್, ರೆಹನಾ, ಮೈಮುನಾ, ಝೀನತ್, ನಬೀಸಾ, ರೇಷ್ಮಾ, ವಾರಿಜಾ, ಪ್ರೇಮಾ, ಮಣಿಪುರ ಮೈಮುನಾ, ಮುಫಿದಾ, ಮುಹಮ್ಮದ್ ಆಸಿಫ್, ಮುಮ್ತಾಝ್, ಸಂಶಾದ್, ನಸೀಮಾ, ಫೌಝಿಯಾ ಹಾಗೂ ಇತರರ ಮನೆಗಳಿಗೆ ಹೋಗಿ ತಾವು ತಮ್ಮ ಸಂಸ್ಥೆಯಿಂದ 20,000 ರೂ. ಹಣವನ್ನು ನೀಡುತ್ತೇವೆ, ನೀವು ತಿಂಗಳಿಗೆ 900ರೂ. ಬ್ಯಾಂಕಿಗೆ ಪಾವತಿಸುವಂತೆ ತಿಳಿಸಿ ನಂಬಿಸಿದ್ದರು.
ಅದರಂತೆ ಎಲ್ಲರ ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಪಡೆದು ತಮ್ಮ ಯಾವುದೇ ದಾಖಲೆಗೆ ಸಹಿ ಪಡೆಯದೆ ಕೊರೊನಾ ಸಮಯದಲ್ಲಿ 20,000ರೂ. ಹಣವನ್ನು ಇವರೆಲ್ಲರಿಗೂ ಅವರ ಮನೆಯಲ್ಲಿ ನೀಡಿದ್ದರು. ಶಾಹಿನ್ ಮತ್ತು ಇತರರು ತಿಂಗಳಿಗೆ ಸರಿಯಾಗಿ ಹಣವನ್ನು ಪಾವತಿಸಿ ಆ ಬಗ್ಗೆ ತಾವು ಪಡೆದ ಸಾಲವನ್ನು ಸಂಪೂರ್ಣ ಮರುಪಾವತಿ ಮಾಡಿದ್ದರು.

ಇದೀಗ ಶಾಹಿನ್ ಹಾಗೂ ಇತರರಿಗೆ ಬ್ಯಾಂಕಿನಿಂದ ನೋಟಿಸ್ ಬಂದಿದ್ದು ಆ ಬಗ್ಗೆ ಬ್ಯಾಂಕಿಗೆ ಹೋಗಿ ವಿಚಾರಿಸಿದಾಗ 2,00,000ರೂ. ಸಾಲವನ್ನು ಪಡೆದಿದ್ದು ಅದನ್ನು ಕೂಡಲೇ ಕಟ್ಟುವಂತೆ ತಿಳಿಸಿದರು. ಆದರೆ ಇವರು 2,00,000 ರೂ. ಸಾಲವನ್ನು ಪಡೆದಿರುವುದಿಲ್ಲ ಹಾಗೂ ಯಾವುದೇ ಸಾಲ ಪತ್ರಗಳಿಗೆ ಸಹಿ ಮಾಡಿರುವುದಿಲ್ಲ ಎಂದು ಹೇಳಿದರು.

ಬ್ಯಾಂಕಿನ ಮ್ಯಾನೇಜರ್ ಹಾಗೂ ಅಧ್ಯಕ್ಷರು ಹಾಗೂ ಇತರರು ಸೇರಿ ಶಾಹಿನ್ ಹಾಗೂ ಇತರರ ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್‌ನ್ನು ಬಳಸಿಕೊಂಡು ನಕಲು ಸಹಿ ಮಾಡಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅವರ ಹೆಸರಿನಲ್ಲಿ 2,00,000ರೂ. ಸಾಲ ಪಡೆದು ಮೋಸ ಮಾಡಿರುವುದಾಗಿ ದೂರಲಾಗಿದೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

News Editor

Learn More →

Leave a Reply

Your email address will not be published. Required fields are marked *