ಕುಂದಾಪುರ: ಇತ್ತೀಚೆಗಷ್ಟೇ ಮುಂಬಡ್ತಿಯೊಂದಿಗೆ ಗುಜ್ಜಾಡಿ ಗ್ರಾಮ ಪಂಚಾಯಿತಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಆಗಿ ವರ್ಗಾವಣೆಯಾಗಿರುವ ದಿನಕರ್ ಬೆಂಗ್ರೆ ಅವರು, ಇನ್ನೂ ಗುಜ್ಜಾಡಿ ಗ್ರಾಮ ಪಂಚಾಯಿತಿಗೆ ಹಾಜರಾಗದೆ ಜಿಲ್ಲಾ ಪಂಚಾಯಿತಿಯಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.


ವರ್ಗಾವಣೆಯಾದರೂ ಜಿಲ್ಲಾ ಪಂಚಾಯಿತಿಯಲ್ಲೇ ಏಕೆ?
ವರ್ಗಾವಣೆಯಾದ ಬಳಿಕವೂ ಗುಜ್ಜಾಡಿ ಗ್ರಾಮ ಪಂಚಾಯಿತಿಗೆ ಹಾಜರಾಗದಿರುವ ಕುರಿತು ಪ್ರಶ್ನಿಸಿದಾಗ, ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಜಿಲ್ಲಾ ಪಂಚಾಯಿತಿಯಲ್ಲೇ ಉಳಿದುಕೊಂಡು ಕೆಲಸ ನಿರ್ವಹಿಸುವಂತೆ ಸೂಚಿಸಿರುವುದಾಗಿ ದಿನಕರ್ ಬೆಂಗ್ರೆ ತಿಳಿಸಿದ್ದಾರೆ ಎನ್ನಲಾಗಿದೆ. ಈ ಹೇಳಿಕೆ ಇದೀಗ ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.
ವರ್ಗಾವಣೆಯ ಆದೇಶ ಜಾರಿಯಾದ ಬಳಿಕ ಅಧಿಕಾರಿಯನ್ನು ಸಂಬಂಧಿಸಿದ ಗ್ರಾಮ ಪಂಚಾಯಿತಿಗೆ ಹಾಜರುಪಡಿಸದೆ ಜಿಲ್ಲಾ ಪಂಚಾಯಿತಿಯಲ್ಲೇ ಕರ್ತವ್ಯ ನಿರ್ವಹಿಸಲು ಅವಕಾಶ ನೀಡಿರುವುದೇಕೆ? ಇದಕ್ಕೆ ಹಿರಿಯ ಅಧಿಕಾರಿಗಳ ಅಧಿಕೃತ ಆದೇಶವಿದೆಯೇ? ಇದ್ದರೆ ಅದರ ಆಧಾರವೇನು? ಎಂಬ ಪ್ರಶ್ನೆಗಳು ಗುಜ್ಜಾಡಿ ಗ್ರಾಮಸ್ಥರಿಂದ ಕೇಳಿಬರುತ್ತಿವೆ.
ಕಳೆದ ಹಲವು ವರ್ಷಗಳಿಂದ ಕಾಯಂ PDO ಕೊರತೆಯಿಂದಾಗಿ ಗುಜ್ಜಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರು ವಿವಿಧ ಆಡಳಿತಾತ್ಮಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎನ್ನಲಾಗಿದ್ದು, ಇದೀಗ PDO ವರ್ಗಾವಣೆಯಾದರೂ ಪಂಚಾಯಿತಿಗೆ ಹಾಜರಾಗದಿರುವುದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ.
ಅಧಿಕಾರಿಗಳ ಮೌನಕ್ಕೆ ಕಾರಣವೇನು?
“ಹಿರಿಯ–ಕಿರಿಯ ಅಧಿಕಾರಿಗಳ ನಡುವಿನ ಹೊಂದಾಣಿಕೆಯಲ್ಲಿ ಗುಜ್ಜಾಡಿ ಗ್ರಾಮ ಪಂಚಾಯಿತಿಯ ಆಡಳಿತವೇ ಬಲಿಯಾಗುತ್ತಿದೆಯೇ?” ಎಂಬ ಅನುಮಾನವನ್ನೂ ಕೆಲ ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ. ಆದರೆ ಈ ಆರೋಪಗಳ ಕುರಿತು ಸಂಬಂಧಿಸಿದ ಜಿಲ್ಲಾ ಪಂಚಾಯಿತಿ ಅಧಿಕಾರಿಗಳ ಸ್ಪಷ್ಟನೆ ಇನ್ನೂ ಬಹಿರಂಗವಾಗಬೇಕಿದೆ.
ಹೀಗಾಗಿ, ದಿನಕರ್ ಬೆಂಗ್ರೆ ಅವರನ್ನು ಗುಜ್ಜಾಡಿ ಗ್ರಾಮ ಪಂಚಾಯಿತಿಗೆ ಹಾಜರುಪಡಿಸುವ ಕುರಿತು ಜಿಲ್ಲಾ ಪಂಚಾಯಿತಿ ಹಿರಿಯ ಅಧಿಕಾರಿಗಳು ಸ್ಪಷ್ಟ ಆದೇಶ ನೀಡಬೇಕು. ವರ್ಗಾವಣೆಯ ನಂತರವೂ ಜಿಲ್ಲಾ ಪಂಚಾಯಿತಿಯಲ್ಲೇ ಕರ್ತವ್ಯ ನಿರ್ವಹಿಸುತ್ತಿರುವುದಕ್ಕೆ ಕಾರಣವೇನು ಎಂಬುದನ್ನೂ ಸಾರ್ವಜನಿಕರಿಗೆ ಸ್ಪಷ್ಟಪಡಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಗುಜ್ಜಾಡಿ ಗ್ರಾಮ ಪಂಚಾಯಿತಿಗೆ ನ್ಯಾಯ ಯಾವಾಗ?
ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಗುಜ್ಜಾಡಿ ಗ್ರಾಮ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. ಇದೇ ವೇಳೆ, ಶಾಸಕರು, ಜನಪ್ರತಿನಿಧಿಗಳು ಹಾಗೂ ಸಂಘಟನೆಗಳ ಮುಖಂಡರು ಗುಜ್ಜಾಡಿ ಗ್ರಾಮಸ್ಥರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಮಧ್ಯಪ್ರವೇಶಿಸಬೇಕು ಎಂದು ಮನವಿ ಮಾಡಲಾಗಿದೆ.


