ನಟ ದುನಿಯಾ ವಿಜಯ್-ನಾಗರತ್ನ ವಿಚ್ಛೇದನ ಮಂಜೂರು- ಪತ್ನಿಗೆ 2 ಕೋಟಿ ಜೀವನಾಂಶ ನೀಡೋಕೆ ಹೈಕೋರ್ಟ್ ಆದೇಶ

ಸ್ಯಾಂಡಲ್‌ವುಡ್ ನಟ ‘ದುನಿಯಾ’ ವಿಜಯ್ ಹಾಗೂ ಅವರ ಪತ್ನಿ ನಾಗರತ್ನ ಅವರ ಸುದೀರ್ಘ ದಾಂಪತ್ಯ ಜೀವನಕ್ಕೆ ಕೊನೆಗೂ ಅಧಿಕೃತವಾಗಿ ತೆರೆ ಬಿದ್ದಿದೆ. ದಂಪತಿಯ ವಿಚ್ಛೇದನ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠವು ಇಬ್ಬರಿಗೂ ವಿಚ್ಛೇದನ ಮಂಜೂರು ಮಾಡಿ ಆದೇಶ ಹೊರಡಿಸಿದೆ. ಇದರೊಂದಿಗೆ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಇಬ್ಬರ ನಡುವಿನ ಕಾನೂನು ಸಮರಕ್ಕೆ ತೆರೆ ಬಿದ್ದಂತಾಗಿದೆ.

ನ್ಯಾಯಮೂರ್ತಿ ಡಿ.ಕೆ. ಸಿಂಗ್ ಹಾಗೂ ನ್ಯಾಯಮೂರ್ತಿ ಶಾಂತಿಭೂಷಣ್ ಅವರನ್ನೊಳಗೊಂಡ ಉನ್ನತ ವಿಭಾಗೀಯ ಪೀಠವು ಈ ಪ್ರಮುಖ ತೀರ್ಪನ್ನು ನೀಡಿದೆ. ವಿಚ್ಛೇದನ ಮಂಜೂರು ಮಾಡುವ ಜೊತೆಗೆ, ಪತ್ನಿ ನಾಗರತ್ನ ಅವರಿಗೆ ₹2 ಕೋಟಿ ರೂಪಾಯಿ ಜೀವನಾಂಶ (Alimony) ಪಾವತಿಸುವಂತೆ ನಟ ದುನಿಯಾ ವಿಜಯ್ ಅವರಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ. ವಿಜಯ್ ಅವರ ಸಮಾಜಿಕ ಸ್ಥಾನಮಾನ ಹಾಗೂ ಪ್ರಸ್ತುತ ಹಣಕಾಸಿನ ಸ್ಥಿತಿಗತಿಯನ್ನು ಸಮಗ್ರವಾಗಿ ಪರಿಗಣಿಸಿ ನ್ಯಾಯಪೀಠವು ಈ ಮೊತ್ತವನ್ನು ನಿಗದಿಪಡಿಸಿದೆ.

ಇತ್ತೀಚೆಗಷ್ಟೇ ದುನಿಯಾ ವಿಜಯ್ ಅವರ ಪುತ್ರ ಕ್ಲಾಸ್‌ಮೇಟ್ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಪ್ರಕರಣ ಎದುರಿಸುತ್ತಿದ್ದು, ಈ ಘಟನೆಯ ಬಿಸಿಯಾರುವ ಮುನ್ನವೇ ವಿಜಯ್ ದಾಂಪತ್ಯ ಜೀವನದ ಈ ಬೆಳವಣಿಗೆಯೂ ಸುದ್ದಿಯಾಗಿದೆ. ಪತ್ನಿಯ ಭವಿಷ್ಯ ಹಾಗೂ ಜೀವನದ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಹೈಕೋರ್ಟ್ ಈ ಆದೇಶ ನೀಡಿದೆ.

Star Of Kudla

Learn More →

Leave a Reply

Your email address will not be published. Required fields are marked *