ಪುತ್ತೂರು: ಸೌಭಾಗ್ಯ, ಸಮೃದ್ಧಿ, ಸಂತಾನ, ಆರೋಗ್ಯ ಹಾಗೂ ಕುಟುಂಬದ ಕ್ಷೇಮಕ್ಕಾಗಿ ಮಹಿಳೆಯರು ಶ್ರದ್ಧಾಭಕ್ತಿಯಿಂದ ಆಚರಿಸುವ ಪವಿತ್ರ ವರಮಹಾಲಕ್ಷ್ಮೀ ವ್ರತಕ್ಕೆ ವಿಶೇಷ ಧಾರ್ಮಿಕ ಮಹತ್ವವಿದೆ. ವರಮಹಾಲಕ್ಷ್ಮೀ ದೇವಿಯ ಆರಾಧನೆಯ ಮೂಲಕ ಮನೆ-ಮನಗಳಲ್ಲಿ ಶುಭ, ಶಾಂತಿ ಮತ್ತು ಸಮೃದ್ಧಿ ನೆಲೆಸಲಿ ಎಂಬ ಸಂಕಲ್ಪದೊಂದಿಗೆ ಪುತ್ತೂರಿನಲ್ಲಿ 19ನೇ ವರ್ಷದ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ಪೂಜೆ ಶ್ರದ್ಧಾಭಕ್ತಿಯಿಂದ ನೆರವೇರಿತು.


ಸಮರ್ಪಣಾ ಮಹಿಳಾ ಸೇವಾ ಸಂಸ್ಥೆ, ವರಮಹಾಲಕ್ಷ್ಮೀ ಪೂಜಾ ಸಮಿತಿ, ಒಡಿಯೂರು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ ಪುತ್ತೂರು ಘಟಕ ಹಾಗೂ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಶ್ರಯದಲ್ಲಿ ಆ.28ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಪೂಜಾ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆ ಒಡಿಯೂರು ಶ್ರೀ ವಜ್ರಮಾತಾ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಿತು. ವೇ.ಮೂ. ಹರಿಪ್ರಸಾದ್ ವೈಲಾಯ ಅವರ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ವರಮಹಾಲಕ್ಷ್ಮೀ ಪೂಜೆ ನೆರವೇರಿತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ದೇವಿಯ ದರ್ಶನ ಪಡೆದು ಪ್ರಸಾದ ಹಾಗೂ ಅನ್ನಪ್ರಸಾದ ಸ್ವೀಕರಿಸಿದರು.

ತಾಲೂಕಿನಲ್ಲೇ ಅತ್ಯಂತ ದೊಡ್ಡ ಮಟ್ಟದ ವರಮಹಾಲಕ್ಷ್ಮೀ ಪೂಜೆ
ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿದ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಕಳೆದ 19 ವರ್ಷಗಳಿಂದ ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಅವರ ನೇತೃತ್ವದಲ್ಲಿ ದೇವಳದ ವಠಾರದಲ್ಲಿ ನಡೆಯುತ್ತಿರುವ ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮ ಪುತ್ತೂರು ತಾಲೂಕಿನಲ್ಲೇ ಅತ್ಯಂತ ದೊಡ್ಡ ಮಟ್ಟದ ಕಾರ್ಯಕ್ರಮವಾಗಿ ಬೆಳೆದಿದೆ ಎಂದರು. ಈ ಬಾರಿ ಪೂಜಾ ಕಾರ್ಯಕ್ರಮದ ವ್ಯವಸ್ಥೆಯ ಕುರಿತು ಕೆಲವು ಗೊಂದಲಗಳು ಎದುರಾಗಿದ್ದರೂ, ಮಹಾಲಿಂಗೇಶ್ವರ ದೇವರ ಅನುಗ್ರಹದಿಂದ ಅತ್ಯಂತ ವ್ಯವಸ್ಥಿತವಾಗಿ ಕಾರ್ಯಕ್ರಮ ನಡೆಯುತ್ತಿರುವುದು ಸಂತಸ ತಂದಿದೆ. ದೇವರ ಸನ್ನಿಧಿಯಲ್ಲೇ ಇಂತಹ ಬೃಹತ್ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿರುವುದು ವಿಶೇಷ ಎಂದ ಅವರು, ಮುಂದಿನ ವರ್ಷಕ್ಕೆ ಸುಮಾರು ರೂ.15 ಕೋಟಿ ವೆಚ್ಚದಲ್ಲಿ ನೂತನ ಸಭಾಭವನ ನಿರ್ಮಾಣವಾಗುವ ನಿರೀಕ್ಷೆಯಿದ್ದು, ಆಗ ಇನ್ನಷ್ಟು ವ್ಯವಸ್ಥಿತವಾಗಿ ಕಾರ್ಯಕ್ರಮ ಆಯೋಜಿಸಲು ಸಾಧ್ಯವಾಗಲಿದೆ. ಇದಕ್ಕೆ ಭಕ್ತರ ಸಹಕಾರ ಅಗತ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಮರ್ಪಣಾ ಮಹಿಳಾ ಸೇವಾ ಸಂಸ್ಥೆಯ ಗೌರವಾಧ್ಯಕ್ಷೆ, ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಮಾತನಾಡಿ, ಈ ಸ್ಥಳದಲ್ಲಿ 21ನೇ ವರ್ಷದ ವರಮಹಾಲಕ್ಷ್ಮೀ ಪೂಜೆ ನಡೆಯುತ್ತಿದ್ದು, ತಮ್ಮ ನೇತೃತ್ವದಲ್ಲಿ 19ನೇ ವರ್ಷದ ಪೂಜಾ ಕಾರ್ಯಕ್ರಮ ನಡೆಯುತ್ತಿದೆ ಎಂದರು. ಈ ಬಾರಿ ಭಕ್ತರಲ್ಲಿ ಕೆಲವು ಗೊಂದಲಗಳು ಉಂಟಾದರೂ, ದೇವರ ಅನುಗ್ರಹದಿಂದ ಹಾಗೂ ಎಲ್ಲರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದೆ. ದೇವರ ಹೆಸರಿನೊಂದಿಗೆ, ದೇವರ ಸನ್ನಿಧಿಯಲ್ಲಿ ನಡೆಸುವ ಈ ಧಾರ್ಮಿಕ ಕಾರ್ಯಕ್ಕೆ ಎಲ್ಲರೂ ಸಹಕಾರ ನೀಡಿದ್ದಾರೆ. ನಮ್ಮಿಂದ ಎಷ್ಟು ಸಾಧ್ಯವೋ ಅಲ್ಲಿಯವರೆಗೆ ವರಮಹಾಲಕ್ಷ್ಮೀ ಪೂಜೆಯನ್ನು ಇದೇ ದೇವರ ಸನ್ನಿಧಿಯಲ್ಲಿ ಮುಂದುವರಿಸುವ ಸಂಕಲ್ಪವಿದೆ ಎಂದರು.

ಮಹಿಳಾ ಶಕ್ತಿ ಜಾಗೃತಿಗೆ ವರಮಹಾಲಕ್ಷ್ಮೀ ವ್ರತ ಪ್ರೇರಣೆ
ಯಕ್ಷಗಾನ ತಾಳಮದ್ದಳೆ ಅರ್ಥಧಾರಿ ಶುಭಾ ಜೆ.ಸಿ. ಅಡಿಗ ಧಾರ್ಮಿಕ ಉಪನ್ಯಾಸ ನೀಡಿದರು.ಬಳಿಕ ಮಾತನಾಡಿದ ಅವರು ಹಣ, ಮತ್ಸರ, ಶ್ರೀಮಂತಿಕೆ, ಲೋಭ ಸೇರಿದಂತೆ ಮನುಷ್ಯನ ಅಧಃಪತನಕ್ಕೆ ಕಾರಣವಾಗುವ ಹಲವು ದುರ್ಗುಣಗಳನ್ನು ಮನಸ್ಸಿನಿಂದ ದೂರಗೊಳಿಸಲು ಮಹಿಳೆಯಲ್ಲಿರುವ ದೇವಿ ಶಕ್ತಿ ಜಾಗೃತವಾಗಬೇಕು. ಮಹಿಳೆ ಪ್ರಕೃತಿಯ ಸ್ವರೂಪವಾಗಿದ್ದು, ಆಕೆಯಲ್ಲಿ ಅಪಾರ ಶಕ್ತಿ ಅಡಗಿದೆ ಎಂದರು.ಮೊಬೈಲ್ ಫೋನ್‍ಗೆ ರೀಚಾರ್ಜ್ ಮಾಡುವಂತೆ ಮಹಿಳೆಯರೂ ತಮ್ಮ ಆಂತರಿಕ ಶಕ್ತಿಯನ್ನು ಪುನರುಜ್ಜೀವನಗೊಳಿಸಿಕೊಳ್ಳಬೇಕು. ವ್ರತಾಚರಣೆ ಹಾಗೂ ಧಾರ್ಮಿಕ ಆಚರಣೆಗಳು ಇದಕ್ಕೆ ಪ್ರೇರಣೆಯಾಗುತ್ತವೆ. ವರಮಹಾಲಕ್ಷ್ಮೀ ವ್ರತವನ್ನು ಶ್ರದ್ಧೆಯಿಂದ ಆಚರಿಸುವ ಮೂಲಕ ಮಹಿಳೆಯೊಳಗಿನ ದೈವಿಕ ಕಲೆ ಮತ್ತಷ್ಟು ರೂಪುಗೊಳ್ಳುತ್ತದೆ. ಮಹಿಳೆಯೇ ಶಕ್ತಿಯ ಸ್ವರೂಪವಾಗಿರುವುದರಿಂದ ವರಮಹಾಲಕ್ಷ್ಮೀ ಪೂಜೆಗೆ ವಿಶೇಷ ಆಧ್ಯಾತ್ಮಿಕ ಮಹತ್ವವಿದೆ ಎಂದು ಅವರು ವಿವರಿಸಿದರು.
ಐದು ಸಾವಿರಕ್ಕೂ ಅಧಿಕ ಶಸ್ತ್ರಚಿಕಿತ್ಸೆಗಳನ್ನು ನಡೆಸಿ ಬಡವರ ಸೇವೆಯಲ್ಲಿ ತೊಡಗಿರುವ ಪುತ್ತೂರು ಸರಕಾರಿ ಆಸ್ಪತ್ರೆಯ ಡಾ. ಅಜಯ್ ಹಾಗೂ ಕೊಂಬೆಟ್ಟು ಸರಕಾರಿ ಪ್ರೌಢಶಾಲೆಯಲ್ಲಿ ವಿಶೇಷ ಸಾಧನೆ ಮಾಡಿ ಪ್ರಸ್ತುತ ನಿಟ್ಟೆ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಅರುಣ್ ಕುಮಾರ್ ಬಿ. ಅವರನ್ನು ಸನ್ಮಾನಿಸಲಾಯಿತು. ಒಡಿಯೂರು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ ಪುತ್ತೂರು ಘಟಕದ ಅಧ್ಯಕ್ಷೆ ನಯನಾ ರೈ ಹಾಗೂ ಅನ್ನಪೂರ್ಣಿಮ ರೈ ಸನ್ಮಾನ ಪತ್ರ ವಾಚಿಸಿದರು. ಧಾರ್ಮಿಕ ಕಾರ್ಯಕ್ಕೆ ಕಳೆದ ಎರಡು ವರ್ಷಗಳಿಂದ ಪೂರ್ಣ ಸಹಕಾರ ನೀಡುತ್ತಿರುವ ಸರ್ವೇಶ್ ರಾಜ್ ಮತ್ತು ಬಳಗವನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.
ವರಮಹಾಲಕ್ಷ್ಮೀ ಪೂಜೆಯ ಭಕ್ತರಿಗೆ ದೇವರ ಪ್ರಸಾದವಾಗಿ ಸೀರೆ
19ನೇ ವರ್ಷದ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ಪೂಜೆಯ ವಿಶೇಷತೆಯಾಗಿ ಪೂಜೆಯಲ್ಲಿ ಭಾಗವಹಿಸಿ ಸೇವೆ ಮಾಡಿಸಿದ ಭಕ್ತರಿಗೆ ಸೀರೆಯನ್ನು ಪ್ರಸಾದ ರೂಪದಲ್ಲಿ ವಿತರಿಸಲಾಯಿತು. ಸೀರೆಯೊಂದಿಗೆ ಬಳೆ, ನೂಲು ಹಾಗೂ ಅರಸಿನ-ಕುಂಕುಮವನ್ನು ಶ್ರೀ ದೇವರ ಪ್ರಸಾದವೆಂದು ಭಕ್ತಿಭಾವದಿಂದ ವಿತರಿಸಲಾಯಿತು. ದೇವಿಯ ಆರಾಧನೆಯ ನೆನಪಾಗಿ ದೊರೆತ ಈ ಪ್ರಸಾದವು ಮಹಿಳೆಯರಲ್ಲಿ ವಿಶೇಷ ಸಂತಸ ಮೂಡಿಸಿತು. ಇದೆ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉದ್ಯಮಿ ರೋಶನ್ ರೈ ಅವರ ಪತ್ನಿ ಸ್ವಸ್ತಿಕಾ ರೋಶನ್ ರೈ ಬನ್ನೂರು, ಗೀತಾ ಡಿ. ರೈ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಮಹಾಬಲ ರೈ ವಳತ್ತಡ್ಕ, ಕಾರ್ಯನಿರ್ವಹಣಾಧಿಕಾರಿ ಕೆ.ವಿ. ಶ್ರೀನಿವಾಸ್, ವರಮಹಾಲಕ್ಷ್ಮೀ ಪೂಜಾ ಸಮಿತಿ ಅಧ್ಯಕ್ಷೆ ಶುಭಮಾಲಿನಿ ಮಲ್ಲಿ,ವರಮಹಾಲಕ್ಷ್ಮೀ ಪೂಜಾ ಸಮಿತಿ ಉಪಾಧ್ಯಕ್ಷೆ ಶಾರದಾ ಅರಸ್, ಸಮರ್ಪಣಾ ಮಹಿಳಾ ಸೇವಾ ಸಂಸ್ಥೆಯ ಅಧ್ಯಕ್ಷೆ ಗಂಗಾರತ್ನ ವಿ. ರೈ, ಹರಿಣಾಕ್ಷಿ ಜೆ. ಶೆಟ್ಟಿ ಉಪಸ್ಥಿತರಿದ್ದರು.


