ಉಡುಪಿ : 8 ವರ್ಷಗಳ ಹಿಂದೆ ಮೃತಪಟ್ಟ ವ್ಯಕ್ತಿಯ ಕುಟುಂಬದವರನ್ನು ಬೆದರಿಸಿ ಹಣ ವಸೂಲಿಗೆ ಯತ್ನ – ಇಬ್ಬರು ಅರೆಸ್ಟ್

ಉಡುಪಿ : 8 ವರ್ಷಗಳ ಹಿಂದೆ ತೀರಿಹೋದ ವ್ಯಕ್ತಿಯೊಬ್ಬರು ವಜ್ರದ ವ್ಯಾಪಾರದಲ್ಲಿ 5 ಲಕ್ಷ ರೂಪಾಯಿ ಬಾಕಿ ಇರಿಸಿದ್ದಾರೆ ಎಂದು ಸುಳ್ಳು ಹೇಳಿ, ಅವರ ಕುಟುಂಬಕ್ಕೆ ಜೀವ ಬೆದರಿಕೆಯೊಡ್ಡುತ್ತಿದ್ದ ಇಬ್ಬರು ಖತರ್ನಾಕ್ ಆರೋಪಿಗಳನ್ನು ಉಡುಪಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಶಿವಳ್ಳಿ ಗ್ರಾಮದ ಕುಕ್ಕುಂಜೆ ನಿವಾಸಿ ಸಾಜೀದ್ ಹಾಗೂ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಸೈಯದ್ ಸೈಫ್ ಅಹಮ್ಮದ್ (40) ಬಂಧಿತ ಆರೋಪಿಗಳು.

ದೂರುದಾರರಿಗೆ ಜುಲೈ 2, 2026ರಂದು ವಾಟ್ಸಾಪ್ ಕರೆಯೊಂದು ಬಂದಿದ್ದು, ಹಿಂದಿಯಲ್ಲಿ ಮಾತನಾಡಿದ ವ್ಯಕ್ತಿ, “ನಿಮ್ಮ ಮಗ ಅಜಿತ್ ಪಾಡಿಯಾರ್ ನಮ್ಮ ಬಳಿ ವಜ್ರದ ವ್ಯವಹಾರ ನಡೆಸಿ 5 ಲಕ್ಷ ರೂಪಾಯಿ ಬಾಕಿ ಇಟ್ಟಿದ್ದಾನೆ, ಆ ಹಣವನ್ನು ನೀವು ನೀಡಬೇಕು” ಎಂದು ಒತ್ತಾಯಿಸಿದ್ದ. ಮಗ ಅಜಿತ್ 8 ವರ್ಷಗಳ ಹಿಂದೆಯೇ ತೀರಿಹೋಗಿದ್ದು, ಈ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಎಂದು ತಂದೆ ಹಣ ನೀಡಲು ನಿರಾಕರಿಸಿದ್ದರು. ಆದಾಗ್ಯೂ, ಅದೇ ದಿನ ದುಬಾಯಿಯಲ್ಲಿದ್ದ ದೂರುದಾರರ ಮತ್ತೊಬ್ಬ ಮಗ ಅಮೀತ್ ಅವರಿಗೂ ವಾಟ್ಸಾಪ್ ಕರೆ ಮಾಡಿದ ಆರೋಪಿಗಳು, 5 ಲಕ್ಷ ನೀಡದಿದ್ದರೆ ಊರಿನಲ್ಲಿರುವ ಅವರ ಪತ್ನಿ ರಕ್ಷಾ ಅವರಿಗೆ ತೊಂದರೆ ಕೊಡುವುದಾಗಿ ಬೆದರಿಕೆ ಹಾಕಿದ್ದರು. ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಹರಿರಾಮ್ ಶಂಕರ್ IPS, ಹೆಚ್ಚುವರಿ ಎಸ್‌ಪಿ ಸುಧಾಕರ್ ನಾಯ್ಕ ಹಾಗೂ ಡಿವೈಎಸ್‌ಪಿ ಬೆಳ್ಳಿಯಪ್ಪ ಅವರ ಮಾರ್ಗದರ್ಶನದಲ್ಲಿ, ಉಡುಪಿ ನಗರ ಠಾಣಾ ಇನ್‌ಸ್ಪೆಕ್ಟರ್ ಮಹೇಶ ಪ್ರಸಾದ್.ಪಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಈ ವಿಶೇಷ ತಂಡ ಜುಲೈ 20 ರಂದು ಸಾಜೀದ್‌ನನ್ನು ಮತ್ತು ಆಗಸ್ಟ್ 26 ರಂದು ಸೈಯದ್ ಸೈಫ್ ಅಹಮ್ಮದ್‌ನನ್ನು ದಸ್ತಗಿರಿ ಮಾಡಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಲಾದ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

Star Of Kudla

Learn More →

Leave a Reply

Your email address will not be published. Required fields are marked *