ಅಯೋಧ್ಯೆಯ ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಹುಂಡಿ ಹಣ ಹಾಗೂ ದೇಣಿಗೆ ಕಳ್ಳತನದ ಆರೋಪಕ್ಕೆ ಸಂಬಂಧಿಸಿದಂತೆ, ಟ್ರಸ್ಟ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹಾಗೂ ಮಾಜಿ ಸದಸ್ಯ ಅನಿಲ್ ಅವರಿಗೆ ವಿಶೇಷ ತನಿಖಾ ತಂಡ (SIT) ಇದೀಗ ಕ್ಲೀನ್ ಚಿಟ್ ನೀಡಿದೆ. ದೇಣಿಗೆ ಹಣದಲ್ಲಿ ಹಗರಣ ನಡೆದಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಜೂನ್ 27 ರಂದು ಚಂಪತ್ ರಾಯ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ರಾಮಮಂದಿರ ದೇಣಿಗೆ ಅಕ್ರಮ ಹಗರಣದ ತನಿಖೆಯನ್ನು ತೀವ್ರಗೊಳಿಸಿದ್ದ ಎಸ್‌ಐಟಿ, ಈ ಮೊದಲು ಹಲವು ಅನುಮಾನಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಿತ್ತು. ಇದೇ ಪ್ರಕರಣದ ಭಾಗವಾಗಿ ಚಂಪತ್ ರಾಯ್ ಮತ್ತು ಅನಿಲ್ ಅವರನ್ನು ಸಹ ವಶಕ್ಕೆ ಪಡೆದುಕೊಂಡು ನಿರಂತರವಾಗಿ ವಿಚಾರಣೆ ನಡೆಸಲಾಗಿತ್ತು. ಹುಂಡಿ ಹಣ ನಿರ್ವಹಣೆ ಹಾಗೂ ಹಣಕಾಸು ವ್ಯವಹಾರಗಳ ಪ್ರತಿಯೊಂದು ದಾಖಲೆಗಳನ್ನು ಎಸ್‌ಐಟಿ ಕೂಲಂಕಷವಾಗಿ ಪರಿಶೀಲನೆಗೆ ಒಳಪಡಿಸಿತ್ತು.
ದೀರ್ಘಾವಧಿಯ ಸುದೀರ್ಘ ವಿಚಾರಣೆ ಮತ್ತು ಸಾಕ್ಷ್ಯಾಧಾರಗಳ ಪರಿಶೀಲನೆಯ ನಂತರ, ಈ ಇಬ್ಬರೂ ಮುಖಂಡರ ಪಾತ್ರ ಹಗರಣದಲ್ಲಿ ಇಲ್ಲದಿರುವುದು ಸ್ಪಷ್ಟವಾಗಿದೆ. ಯಾವುದೇ ರೀತಿಯ ಅಕ್ರಮ ಅಥವಾ ಹಣ ದುರ್ಬಳಕೆಯಲ್ಲಿ ಇವರ ನೇರ ಪಾತ್ರವಿಲ್ಲ ಎಂಬ ತೀರ್ಮಾನಕ್ಕೆ ಬಂದಿರುವ ತನಿಖಾ ತಂಡ, ಅಧಿಕೃತವಾಗಿ ಚಂಪತ್ ರಾಯ್ ಹಾಗೂ ಅನಿಲ್ ಅವರಿಗೆ ಕ್ಲೀನ್ ಚಿಟ್ ನೀಡಿ ಪ್ರಕರಣದ ಮುಂದಿನ ತನಿಖೆಯನ್ನು ಮುಂದುವರಿಸಿದೆ.


