ಪುತ್ತೂರು: ಪುತ್ತೂರು ನಗರಸಭಾ ವ್ಯಾಪ್ತಿಯ ಸಿಂಹವನದಲ್ಲಿ ಸರ್ವೇ ನಂ.153/3ರಲ್ಲಿ ಮನೆ ನಿವೇಶನವಾಗಿ ನೀಡಿ ಜಾಗವನ್ನು ಪುತ್ತೂರು ತಹಶೀಲ್ದಾರ್ 2011ರಲ್ಲಿ ರದ್ದು ಮಾಡಿ ಆದೇಶ ಮಾಡಿದ್ದು, ಆದರೆ ಅದನ್ನು ಈವರೆಗೆ ಸ್ವಾಧೀನ ಪಡಿಸಿಕೊಳ್ಳದೇ ಇರುವ ವಿರುದ್ಧ ರಾಜ್ಯ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ದೂರು ನೀಡಲಾಗಿದೆ ಎಂದು ಪುತ್ತೂರು ಪುರಸಭಾ ಮಾಜಿ ಸದಸ್ಯ ಇಸಾಕ್ ಸಾಲ್ಮರ ಆರೋಪಿಸಿದರು.

ಅವರು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ತಲಾ 5 ಸೆಂಟ್ಸ್ ನಂತ 6 ಕುಟುಂಬಗಳಿಗೆ ಜಾಗ ನೀಡಲಾಗಿದ್ದು, ಆದರೆ ಬಳಿಕ ಅದರ ವಿರುದ್ಧ ದೂರುಗಳ ಬಂದ ಹಿನ್ನೆಲೆಯಲ್ಲಿ ತಹಶೀಲ್ದಾರ್ ತನಿಖೆ ನಡೆಸಿ ನೀಡಿರುವ ನಿವೇಶನವನ್ನು ರದ್ದು ಮಾಡಿದ್ದರು. ಆದರೆ ಅದನ್ನು ಸ್ವಾಧೀನ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಈವರೆಗೂ ಯಾವುದೇ ಕ್ರಮ ಜರಗಿಸಿಲ್ಲ.
ಈ ಕುರಿತು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ದೂರು ನೀಡಿದ್ದು, ಅವರು ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿ ಅಲ್ಲಿಂದ ತಹಶೀಲ್ದಾರ್ ಗೆ ರದ್ದು ಪಡಿಸುವ ಆದೇಶ ಬರಬೇಕಿದೆ. ಒಂದು ತಿಂಗಳೊಳಗೆ ಆದೇಶ ಬಾರದೇ ಇದ್ದಲ್ಲಿ ತಾಲೂಕು ಕಚೇರಿಯ ಮುಂದೆ ಧರಣಿ ನಡೆಸಲಾಗುತ್ತದೆ.
ಜತೆಗೆ ರದ್ದುಗೊಂಡ ನಿವೇಶನಗಳಲ್ಲಿನ ಕಟ್ಟಡಗಳಿಗೆ ಸಂಬಂಧಿಸಿ ಲೋಕಾಯುಕ್ತಕ್ಕೆ ದೂರು ನೀಡಿದ್ದು, ಅವರು ವರದಿ ಕಳಿಸುವಂತೆ ನಗರಸಭೆಗೆ ಸೂಚಿಸಿದ್ದಾರೆ. ಆದರೆ ಅವರು ಇನ್ನೂ ಕೂಡ ವರದಿ ಕಳುಹಿಸದೇ ಇದ್ದು, 15 ದಿನಗಳೊಳಗೆ ವರದಿ ಸಲ್ಲಿಕೆ ಮಾಡದೇ ಇದ್ದರೆ ಅದರ ವಿರುದ್ಧವೂ ಹೋರಾಟ ನಡೆಸಲಾಗುತ್ತದೆ ಎಂದರು.


