ಮೈಸೂರು: ಮಂತ್ರದಂಡ ಮತ್ತು ಲಾಟರಿ ಆಸೆಗೆ ಬಿದ್ದು ಬರೋಬ್ಬರಿ 31 ಲಕ್ಷ ರೂಪಾಯಿ ಕಳೆದುಕೊಂಡ ಘಟನೆ ಮಂಗಳೂರಿನ ಉದ್ಯಮಿಯ ಬದುಕಿನಲ್ಲಿ ನಡೆದಿದೆ.

ಮಂಗಳೂರಿನ ಕೃಷಿಕ ಹಾಗೂ ಸೆರಾಮಿಕ್ಸ್ ಕಂಪನಿ ಉದ್ಯೋಗಿ ಸೂರಜ್ ಹೆಗ್ಡೆ (61) ಎಂಬುವವರು ಪತ್ರಿಕೆಯಲ್ಲಿ ಬಂದಿದ್ದ ಜಾಹೀರಾತು ನಂಬಿ ಮೈಸೂರಿನ ಮಹಿಳೆಯ ಬಲೆಗೆ ಬಿದ್ದು ವಂಚನೆಗೊಳಗಾದವರು.
2022ರ ಅಕ್ಟೋಬರ್ನಲ್ಲಿ ಪತ್ರಿಕೆಯೊಂದರಲ್ಲಿ ‘ಲಕ್ಷ್ಮಿ ಕುಬೇರ ಯಂತ್ರದ ಮೂಲಕ ಆರ್ಥಿಕ ಪ್ರಗತಿ’ ಎಂಬ ಜಾಹೀರಾತು ಪ್ರಕಟವಾಗಿತ್ತು. ಇದನ್ನು ನಂಬಿ ಕರೆ ಮಾಡಿದ ಸೂರಜ್ ಹೆಗ್ಡೆಗೆ, ಮೈಸೂರಿನ ಸರಸ್ವತಿಪುರಂನ ಎಂ.ಎಂ. ವಿಜಯಲಕ್ಷ್ಮಿ ಎಂಬಾಕೆಯ ಪರಿಚಯವಾಗಿದೆ. ಮಂಗಳೂರಿನ ಹೋಟೆಲ್ನಲ್ಲಿ ಭೇಟಿಯಾದ ಈಕೆ, “ನನ್ನ ಬಳಿ ಅಪಾರ ದೈವಿಕ ಶಕ್ತಿ ಮತ್ತು ಮಂತ್ರದಂಡ ಇದೆ. ನೀವೊಂದು ಮಹಾಯಜ್ಞ ಮಾಡಿದರೆ ಸೂಪರ್ ಮಿಲಿಯನೇರ್ ಆಗಬಹುದು” ಎಂದು ನಂಬಿಸಿದ್ದಾಳೆ. ಸಣ್ಣ ಪೂಜೆಗೆಂದು 30 ಸಾವಿರ ಕೀಳುವ ಮೂಲಕ ವಂಚನೆಯ ಮೊದಲ ಬಾಗಿಲು ತೆರೆದಿದ್ದಳು. ಬಳಿಕ ಯಜ್ಞದ ಹೆಸರಲ್ಲಿ 4.50 ಲಕ್ಷ ರೂ. ಪೀಕಿದ್ದಾಳೆ.


