
ಉಳ್ಳಾಲ: ತೊಕ್ಕೊಟ್ಟು ಫ್ಲೈಓವರ್ ಮೇಲೆ ಬೈಕ್ ಅಡ್ಡಗಟ್ಟಿ ವ್ಯಕ್ತಿಯೊಬ್ಬರನ್ನು ಭೀಕರವಾಗಿ ಕಡಿದು ಹತ್ಯೆ ಮಾಡಿದ ಘಟನೆ ಇಂದು ನಸುಕಿನ ಜಾವ ನಡೆದಿದೆ.
ಕಿನ್ಯ ಅಜ್ಜಿನಡ್ಕ ನಿವಾಸಿ ಆರಿಫ್ (40) ಹತ್ಯೆಗೀಡಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಇಂದು ಬೆಳಗಿನ ಜಾವ ಸುಮಾರು 4 ಗಂಟೆ ವೇಳೆಗೆ ಈ ದುರ್ಘಟನೆ ನಡೆದಿರುವುದಾಗಿ ತಿಳಿದುಬಂದಿದೆ.
ಮೇಲ್ನೋಟಕ್ಕೆ ದೊರೆತ ಮಾಹಿತಿಯ ಪ್ರಕಾರ, ದುಷ್ಕರ್ಮಿಗಳು ಫ್ಲೈಓವರ್ ಮೇಲೆಯೇ ಕಾಯುತ್ತ ಕುಳಿತಿದ್ದು, ಆರಿಫ್ ಪ್ರಯಾಣಿಸುತ್ತಿದ್ದ ಬೈಕ್ ಅನ್ನು ಅಡ್ಡಗಟ್ಟಿ, ಬಳಿಕ ತಲೆಗೆ ಗಂಭೀರವಾಗಿ ಹಲ್ಲೆ ನಡೆಸಿ ಕೊಲೆಗೈದಿದ್ದಾರೆ ಎನ್ನಲಾಗಿದೆ.
ಆರಿಫ್ ವಿರುದ್ಧ 2008ರಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದವು. ಬಳಿಕ ದೀರ್ಘಕಾಲ ಯಾವುದೇ ಪ್ರಕರಣಗಳಿಲ್ಲದೆ ಇದ್ದರು. 2022ರಲ್ಲಿ ಉಚ್ಚಿಲ ಸೇತುವೆ ಸಮೀಪ ಇವರ ಮೇಲೆ ಕೊಲೆಗೆ ಯತ್ನ ನಡೆದಿದ್ದು, ಆ ಪ್ರಕರಣದಲ್ಲಿ ನೌಫಾಲ್ ಮತ್ತು ತಂಡವನ್ನು ಪೊಲೀಸರು ಬಂಧಿಸಿದ್ದರು.
ಪ್ರಸ್ತುತ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ. ಹತ್ಯೆಗೆ ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ.
ಇದೇ ವೇಳೆ, 2022ರ ಮೇ ತಿಂಗಳಲ್ಲಿ ಆರಿಫ್ ಇದೇ ರೀತಿ ಬೆಳಗ್ಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಬಜಾಲ್ ಪ್ರದೇಶದ ನೌಫಾಲ್ ಮತ್ತು ತಂಡವು ದಾಳಿ ನಡೆಸಿ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿತ್ತು ಎಂಬ ಮಾಹಿತಿ ಲಭ್ಯವಾಗಿದೆ.
ವಿವಾಹಿತನಾಗಿದ್ದ ಆರಿಫ್ ಮೂಲತಃ ಕುದ್ರೋಳಿ ನಿವಾಸಿಯಾಗಿದ್ದು, ಕಳೆದ ಆರು ವರ್ಷಗಳಿಂದ ಕುಟುಂಬ ಸಮೇತ ಅಜ್ಜಿನಡ್ಕ ಬಳಿಯ ಮುಳ್ಳುಗುಡ್ಡೆ ಪ್ರದೇಶದಲ್ಲಿ ವಾಸವಾಗಿದ್ದರು.
ಘಟನಾ ಸ್ಥಳಕ್ಕೆ ಡಿಸಿಪಿ ಮಿಥುನ್ ಹಾಗೂ ಸೋಕೋ (SOCO) ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಮೃತ ಆರಿಫ್ ಪತ್ನಿ, ಮೂವರು ಪುತ್ರರು ಹಾಗೂ ಒಬ್ಬ ಪುತ್ರಿಯನ್ನು ಅಗಲಿದ್ದಾರೆ.


