
ಪುತ್ತೂರು: ಮಂಗಳೂರು ನಗರದ ಕೇಂದ್ರ ಮೈದಾನದಲ್ಲಿ ನಡೆದ ಅಮ್ಮುಂಜೆ ಗ್ರಾಮದ ಜನಾರ್ಧನ ಪೂಜಾರಿಯವರ ಕೊಲೆ ಪ್ರಕರಣದ ಎಲ್ಲಾ ಆರೋಪಿಗಳನ್ನು 2ನೇ ಹೆಚ್ಚುವರಿ ಜಿಲ್ಲಾ & ಸತ್ರ ನ್ಯಾಯಾಲಯದ ನ್ಯಾಯಾಧೀಶರು ಖುಲಾಸೆಗೊಳಿಸಿದ್ದಾರೆ.
ಪ್ರಕರಣದ ವಿವರ:
18-04-2023 ರಂದು ಮಧ್ಯಾಹ್ನ ಮಂಗಳೂರು ನಗರದ ಕೇಂದ್ರ ಮೈದಾನದ ಫುಟ್ಬಾಲ್ ಗ್ರೌಂಡ್ ನ ಸಾರ್ವಜನಿಕರು ಕುಳಿತುಕೊಳ್ಳುವ ಸುಮಾರು 6 ಅಡಿ ಎತ್ತರದ ಪಬ್ಲಿಕ್ ಗ್ಯಾಲರಿಯ ಮೇಲ್ದಂಡೆಯಲ್ಲಿ ಜನಾರ್ಧನ ಪೂಜಾರಿ ಎಂಬುವವರು ಮಲಗಿಕೊಂಡಿದ್ದು, ಈ ಸಮಯ ಪ್ರಶಾಂತ, ರವಿಕುಮಾರ್, ವಿಜಯ್, ಶರತ್ ಎಂಬುವವರು ಅಲ್ಲಿಗೆ ಬಂದು ಮಲಗಿದ್ದ ಜನಾರ್ಧನ ಪೂಜಾರಿಯವರ ಪ್ಯಾಂಟ್ ಕಿಸೆಯಲ್ಲಿದ್ದ ಮೊಬೈಲ್ ಹ್ಯಾಂಡ್ ಸೆಟ್‌ನ್ನು ಎಳೆದು, ಜನಾರ್ಧನ ಪೂಜಾರಿ ಅವರಿಗೆ ಹಲ್ಲೆ ನಡೆಸಿದ್ದು, ಮಾರಾಣಾಂತಿಕವಾಗಿ ಗಾಯವನ್ನುಂಟು ಮಾಡಿ ಕೊಲೆ ಮಾಡಲಾಗಿದೆ ಎಂಬುದಾಗಿ ಆರೋಪಿಸಿ ಆರೋಪಿಗಳ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು ಮತ್ತು ಈ ಸಂಬಂಧ ಆರೋಪಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದರು.
ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ಮಾನ್ಯ 2ನೇ ಹೆಚ್ಚವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪ್ರಾಸಿಕ್ಯೂಷನ್ ಪರ ಸುಮಾರು 25 ಜನ ಸಾಕ್ಷಿಗಳನ್ನು ವಿಚಾರಣೆಗೊಳಪಡಿಸಿದ್ದು ಅದರಲ್ಲಿ ಪ್ರತ್ಯಕ್ಷದರ್ಶಿ ಸಾಕ್ಷಿಗಳು ಪ್ರಕರಣಕ್ಕೆ ಪೂರಕವಾಗಿ ಸಾಕ್ಷಿ ನುಡಿದಿದ್ದರು. ಅದರಲ್ಲೂ ವಿಶೇಷವಾಗಿ ಪ್ರಕರಣದ ಪ್ರತ್ಯಕ್ಷದರ್ಶಿ ಸಾಕ್ಷಿಯಾದ ಭರತ ಎಂಬುವವರು ದುಬೈನಿಂದ ವೀಡಿಯೋ ಕಾಲ್ ಮೂಲಕ ನ್ಯಾಯಾಲಯಕ್ಕೆ ಸಾಕ್ಷಿ ನೀಡಿ ಪ್ರಕರಣದ ಪರವಾಗಿ ಸಾಕ್ಷಿ ನುಡಿದಿದ್ದರು. ಆದರೆ ಪ್ರಾಸಿಕ್ಯೂಷನ್ ಆರೋಪಿಗಳ ಆರೋಪವನ್ನು ಸಾಬೀತುಪಡಿಸುವಲ್ಲಿ ವಿಫಲವಾಗಿದೆ ಎಂಬುದನ್ನು ಮನಗಂಡು ಆರೋಪಿಗಳನ್ನು ಖುಲಾಸೆಗೊಳಿಸಿದೆ.
ಆರೋಪಿಗಳ ಪರವಾಗಿ ವಕೀಲರಾದ ವೇಣು ಕುಮಾರ್ ಮತ್ತು ಯುವರಾಜ್ ಕೆ ಆಮೀನ್ ವಾದಿಸಿದ್ದರು.


