ವಿಟ್ಲ ಕೇಪು ಗ್ರಾಮದಲ್ಲಿ ಪೋಲೀಸ್ ಕ್ರಮ; ಬಿಜೆಪಿ ನಿಯೋಗ ಭೇಟಿ, ಸರ್ಕಾರದ ವಿರುದ್ಧ ಆರೋಪ

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಕೇಪು ಗ್ರಾಮದಲ್ಲಿ ಸಂಪ್ರದಾಯಿಕವಾಗಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಪೋಲೀಸರು ತಡೆ ನೀಡಿದ ಘಟನೆ ರಾಜಕೀಯ ಹಾಗೂ ಸಾಂಸ್ಕೃತಿಕ ವಿವಾದಕ್ಕೆ ಕಾರಣವಾಗಿದೆ.

ಕೇಪು ಉಳ್ಳಾಲ್ತಿ ದೈವಸ್ಥಾನದ ಬಳಿ ವರ್ಷಾನುಗಟ್ಟಲೆ ಯಾವುದೇ ಅಡಚಣೆಯಿಲ್ಲದೆ ನಡೆಯುತ್ತಿದ್ದ ಜೂಜಿಲ್ಲದ ಕೋಳಿ ಅಂಕಕ್ಕೆ ನಿನ್ನೆ ಪೋಲೀಸರು ದಾಳಿ ನಡೆಸಿದ್ದಾರೆ. ಜಾತ್ರೆ ಹಾಗೂ ದೈವೋತ್ಸವದ ಭಾಗವಾಗಿ ನಡೆಯುವ ಈ ಕೋಳಿ ಅಂಕವನ್ನು ಕರಾವಳಿಯ ಜನ ಸಂಪ್ರದಾಯದ ಅಂಗವಾಗಿ ಆಚರಿಸುತ್ತಿದ್ದಾರೆ.

ಈ ಘಟನೆಗೆ ಪ್ರತಿಕ್ರಿಯೆ ನೀಡಿದ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ನೇತೃತ್ವದ ಬಿಜೆಪಿ ನಿಯೋಗ ಕೇಪು ಗ್ರಾಮಕ್ಕೆ ಭೇಟಿ ನೀಡಿ, ಪೋಲೀಸ್ ಕ್ರಮವನ್ನು ಖಂಡಿಸಿದೆ. ಸಾಂಪ್ರದಾಯಿಕವಾಗಿ ನಡೆದು ಬಂದ ಕೋಳಿ ಅಂಕಕ್ಕೆ ಕಾಂಗ್ರೇಸ್ ಸರ್ಕಾರ ತಡೆ ಒಡ್ಡುತ್ತಿದೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಆರೋಪಿಸಿದ್ದಾರೆ.

ಕರಾವಳಿಯಲ್ಲಿ ದೈವಾರಾಧನೆಯ ಜೊತೆಗೆ ಕೋಳಿ ಅಂಕವೂ ಅವಿಭಾಜ್ಯವಾಗಿ ಬೆಸೆದುಕೊಂಡಿದ್ದು, ದೈವಗಳ ನೇಮ ನಡೆಯುವ ಮೊದಲು ಕೋಳಿ ಅಂಕ ನಡೆದು ಆ ಸ್ಥಳದಲ್ಲಿ ಕೋಳಿಯ ರಕ್ತ ಬೀಳಬೇಕು ಎಂಬ ನಂಬಿಕೆ ಇದೆ ಎಂದು ಸ್ಥಳೀಯರು ಹೇಳಿದ್ದಾರೆ. ಈತನಕ ಯಾವುದೇ ಸಮಸ್ಯೆಯಿಲ್ಲದೆ ನಡೆದುಕೊಂಡು ಬಂದ ಸಂಪ್ರದಾಯವನ್ನು ಇದೀಗ ಪೋಲೀಸರ ಮೂಲಕ ನಿಲ್ಲಿಸುವ ಪ್ರಯತ್ನ ನಡೆಯುತ್ತಿದೆ ಎಂಬ ಆಕ್ಷೇಪ ವ್ಯಕ್ತವಾಗಿದೆ.

ಕಂಬಳ ಹಾಗೂ ಕೋಳಿ ಅಂಕ ಕರಾವಳಿ ಜನರ ಸಂಸ್ಕೃತಿಯ ಭಾಗವಾಗಿದ್ದು, ಸ್ಥಳೀಯರು ತಮ್ಮ ಮನೆಗಳಲ್ಲಿ ಸಾಕಿದ ಕೋಳಿಗಳನ್ನು ಗ್ರಾಮದ ಜಾತ್ರೆಯ ಸಂದರ್ಭ ಕೋಳಿ ಅಂಕದಲ್ಲಿ ಬಳಸುತ್ತಾರೆ. ಯಾವುದೇ ಜೂಜಿಲ್ಲದೆ ಮನೋರಂಜನೆಗಾಗಿ ನಡೆಯುವ ಈ ಅಂಕಕ್ಕೆ ತಡೆ ನೀಡಬಾರದು ಎಂದು ಬಿಜೆಪಿ ನಾಯಕರು ಒತ್ತಾಯಿಸಿದ್ದಾರೆ.

ಇದೇ ವೇಳೆ, ನಿನ್ನೆ ನಡೆದ ಪೋಲೀಸ್ ಕ್ರಮದ ವೇಳೆ ಸ್ಥಳದಲ್ಲಿದ್ದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರನ್ನು ಪೋಲೀಸರು ತಡೆದಿದ್ದು, ಈ ಸಂಬಂಧ ಶಾಸಕರ ವಿರುದ್ಧವೂ ಪ್ರಕರಣ ದಾಖಲಿಸಿರುವುದು ವಿವಾದಕ್ಕೆ ಮತ್ತಷ್ಟು ತೀವ್ರತೆ ತಂದಿದೆ.

ಈ ಘಟನೆ ಕರಾವಳಿಯ ಸಂಪ್ರದಾಯ ಮತ್ತು ಸರ್ಕಾರದ ನಿಯಂತ್ರಣದ ನಡುವೆ ಸಂಘರ್ಷ ಉಂಟುಮಾಡಿದ್ದು, ಮುಂದಿನ ಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ಕುತೂಹಲ ಹೆಚ್ಚಾಗಿದೆ.

News Editor

Learn More →

Leave a Reply

Your email address will not be published. Required fields are marked *