ಬಿಜೆಪಿ ಪಕ್ಷದ ಕರ್ನಾಟಕ ರಾಜ್ಯದ ಕೆಲವೇ ಕೆಲವು ಶಕ್ತಿಕೇಂದ್ರಗಳಲ್ಲಿ ಒಂದಾದ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಬಿಜೆಪಿಯಲ್ಲಿನ ಬಿರುಕು ಮತ್ತೆ ಬಹಿರಂಗಗೊಂಡಿದೆ.

ಬಿಜೆಪಿ ಪಕ್ಷದ ಕರ್ನಾಟಕ ರಾಜ್ಯದ ಕೆಲವೇ ಕೆಲವು ಶಕ್ತಿಕೇಂದ್ರಗಳಲ್ಲಿ ಒಂದಾದ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಬಿಜೆಪಿಯಲ್ಲಿನ ಬಿರುಕು ಮತ್ತೆ ಬಹಿರಂಗಗೊಂಡಿದೆ. ಪುತ್ತಿಲ ಪರಿವಾರದ ಅರುಣ್ ಕುಮಾರ್ ಪುತ್ತಿಲ ಮುಂದಿನ ಚುನಾವಣೆಯಲ್ಲೂ ತಾವು ಸ್ಪರ್ಧಿಸುವ ಸೂಚನೆ ನೀಡಿ ಬಿಜೆಪಿ ಪಕ್ಷದ ಕೆಂಗಣ್ಣಿಗೆ ಗುರಿಯಾಗಿದೆ. ಅರುಣ್ ಕುಮಾರ್ ಪುತ್ತಿಲರ ಈ ಹೇಳಿಕೆಯ ಬೆನ್ನಲ್ಲೇ ಬಿಜೆಪಿ ಪಕ್ಷದ ಜವಾಬ್ದಾರಿಯನ್ನು ಹೊಂದಿದ್ದ ಮೂವರು ಪುತ್ತಿಲ ಪರಿವಾರದ ಮುಖಂಡರನ್ನು ಪಕ್ಷದ ಜವಾಬ್ದಾರಿಯಿಂದ ಹೊರಗಿಟ್ಟಿದೆ. ಈ ಪ್ರಕ್ರಿಯೆ ಪುತ್ತಿಲ ಪರಿವಾರದಲ್ಲಿರುವ ಕಾರ್ಯಕರ್ತರನ್ನು ಕೆರಳಿಸಿದ್ದು, ಪುತ್ತೂರಿನಲ್ಲಿ ನಡೆಯಲಿರುವ ಶ್ರೀನಿವಾಸ ಕಲ್ಯಾಣೋತ್ಸವದ ಬಳಿಕ ಪುತ್ತೂರಿನ ರಾಜಕೀಯ ಬಿರುಗಾಳಿ ಬೀಸುವ ಸಾಧ್ಯತೆ ಹೆಚ್ಚಾಗಿದೆ.

ಒಂದು ಕಾಲದಲ್ಲಿ ರಾಜ್ಯ ವಿಧಾನಸಭೆಯಲ್ಲಿ ಇದ್ದ ಕೆಲವೇ ಕೆಲವು ಬಿಜೆಪಿ ಶಾಸಕರ ಪಟ್ಟಿಯಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಹೆಸರೂ ಇತ್ತು. ಜಿಲ್ಲೆಯಲ್ಲಿ ಬಿಜೆಪಿ ಮತ್ತು ಹಿಂದೂ ಸಂಘಟನೆಗಳ ಶಕ್ತಿಕೇಂದ್ರವಾಗಿಯೂ ಗುರುತಿಸಿಕೊಂಡಿದ್ದ ಪುತ್ತೂರಿನಲ್ಲಿ ಮತ್ತೆ ಸಂಘಟನೆಯ ಮಧ್ಯೆಯೇ ಒಡಕು ಕಾಣಲಾರಂಭಿಸಿದೆ. ಕಳೆದ ಚುನಾವಣೆಯಲ್ಲಿ ತನಗೆ ಟಿಕೆಟ್ ನೀಡಲಿಲ್ಲವೆಂದು ಅರುಣ್ ಕುಮಾರ್ ಪುತ್ತಿಲ ಬಿಜೆಪಿ ಗೆ ಬಂಡಾಯವಾಗಿ ನಿಂತು ಕಾಂಗ್ರೇಸ್ ಅಭ್ಯರ್ಥಿಯ ಗೆಲುವಿಗೆ ಕಾರಣರಾಗಿದ್ದರಲ್ಲದೆ, ಪುತ್ತೂರಿನಲ್ಲಿ ಅತ್ಯಂತ ಸುಭದ್ರವಾಗಿದ್ದ ಬಿಜೆಪಿಯನ್ನೇ ಮೂರನೇ ಸ್ಥಾನಕ್ಕೆ ಕುಸಿಯುವಂತೆ ಮಾಡಿದ್ದರು. ಆ ಬಳಿಕ ಬಿಜೆಪಿ ಮತ್ತು ಪುತ್ತಿಲ ಪರಿವಾರದ ಜೊತೆಗೆ ಮಾತುಕತೆ ನಡೆದು ಪುತ್ತಿಲ ಪರಿವಾರದ ನಾಲ್ಕು ಮುಖಂಡರಿಗೆ ಬಿಜೆಪಿ ಪಕ್ಷದ ಜವಾಬ್ದಾರಿಯನ್ನು ನೀಡಲಾಗಿತ್ತು. ಕ್ರಮೇಣ ಅರುಣ್ ಕುಮಾರ್ ಪುತ್ತಿಲರಿಗೂ ಸ್ಥಾನಮಾನ ನೀಡಬೇಕೆಂಬ ವ್ಯವಸ್ಥಿತ ಒತ್ತಡ ಬಿಜೆಪಿ ಒಳಗಿದ್ದ ಪುತ್ತಿಲ ಪರಿವಾರದ ಕಾರ್ಯಕರ್ತರಿಂದ ಬಂದಿತ್ತು. ಈತನ್ಮಧ್ಯೆ ಬಿಜೆಪಿ ಜವಾಬ್ದಾರಿ ಹೊತ್ತಿದ್ದ ಪುತ್ತಿಲ ಪರಿವಾರದ ಮುಖಂಡರಲ್ಲಿ ಒಂದಿಬ್ಬರು ಮಾತ್ರವೇ ಬಿಜೆಪಿ ಪಕ್ಷದ ಸಂಘಟನೆ ಮತ್ತು ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡರೆ, ಇನ್ನುಳಿದವರು ಬಿಜೆಪಿಯ ಎಲ್ಲಾ ಕಾರ್ಯಕ್ರಮಗಳಿಂದ ದೂರ ಉಳಿದಿದ್ದರು. ಈ ನಡುವೆ ಪುತ್ತಿಲ ಪರಿವಾರದ ಸ್ಥಾಪಕ ಅರುಣ್ ಕುಮಾರ್ ಪುತ್ತಿಲ ತನಗೆ ಸೂಕ್ತ ಸ್ಥಾನಮಾನ ನೀಡದಿದ್ದಲ್ಲಿ ಮುಂದಿನ ಚುನಾವಣೆಯಲ್ಲೂ ಸ್ಪರ್ಧೆಗಿಳಿಯುವ ಸೂಚನೆಯನ್ನು ನೀಡಿದ್ದರು.

ಅರುಣ್ ಕುಮಾರ್ ಪುತ್ತಿಲ,
ಪುತ್ತಿಲ ಪರಿವಾರದ ಸ್ಥಾಪಕ.

ಪಕ್ಷದ ಜವಾಬ್ದಾರಿ ಇದ್ದರೂ, ಪಕ್ಷದ ಯಾವುದೇ ಸಭೆ, ಹೋರಾಟಗಳಿಗೆ ಬರದೆ ಇದ್ದ ಪುತ್ತಿಲ ಪರಿವಾರದ ಮುಖಂಡರನ್ನು ಬಿಜೆಪಿ ಹಲವು ಬಾರಿ ಸಭೆಗೆ ಹಾಜರಾಗುವಂತೆ ಸೂಚನೆ ನೀಡಿತ್ತು. ಆದರೆ ಪಕ್ಷದ ಯಾವುದೇ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳದ ಹಿನ್ನಲೆಯಲ್ಲಿ ಪುತ್ತೂರು ನಗರ ಬಿಜೆಪಿ ಮತ್ತು ಗ್ರಾಮಾಂತರ ಮಂಡಲದ ಉನ್ನತ ಸ್ಥಾನಮಾನ ವಹಿಸಿಕೊಂಡಿದ್ದ ಉಮೇಶ್ ಕೊಡಿಬೈಲು, ಅನಿಲ್ ತೆಂಕಿಲ ಮತ್ತು ಪ್ರಶಾಂತ್ ನೆಕ್ಕಿಲ್ಲಾಡಿ ಎಂಬ ಮೂವರನ್ನು ಇತ್ತೀಚೆಗೆ ಪಕ್ಷದ ಜವಾಬ್ದಾರಿಯಿಂದ ಮುಕ್ತಗೊಳಿಸಿ ಆ ಸ್ಥಾನಕ್ಕೆ ಹೊಸ ಪದಾಧಿಕಾರಿಗಳನ್ನು ನೇಮಿಸಿಲಾಗಿದೆ. ಬಿಜೆಪಿಯ ಈ ನಡೆಗೆ ಅರುಣ್ ಕುಮಾರ್ ಪುತ್ತಿಲರ ಚುನಾವಣೆಯಲ್ಲಿ ಸ್ಪರ್ಧಿಸುವ ಹೇಳಿಕೆಯೂ ಕಾರಣವಾಗಿದೆ. ಪಕ್ಷ ಸಂಘಟನೆಯ ಹಿತದೃಷ್ಟಿಯಿಂದ ಈ ಕ್ರಮ ಅನಿವಾರ್ಯವಾಗಿತ್ತು ಅನ್ನೋದು ಬಿಜೆಪಿಯ ವಾದವೂ ಆಗಿದೆ.

ಶಿವಕುಮಾರ್ ಪಿ. ಬಿ. ಕಲ್ಲಿಮರು
ಪುತ್ತೂರು ಬಿಜೆಪಿ ನಗರ ಮಂಡಲದ ಅಧ್ಯಕ್ಷ.

ನವಂಬರ್ 29 ಮತ್ತು 30. ರಂದು ಪುತ್ತಿಲ ಪರಿವಾರದ ನೇತೃತ್ವದಲ್ಲಿ ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮ ಪುತ್ತೂರಿನಲ್ಲಿ ನಡೆಯಲಿದ್ದು, ಆ ಬಳಿಕ ಪರಿವಾರ ಬಿಜೆಪಿಯ ನಡೆಗೆ ಉತ್ತರ ನೀಡುವ ಸಾಧ್ಯತೆಯನ್ನು ನಿರೀಕ್ಷಿಸಲಾಗಿದೆ. ಬಿಜೆಪಿಯ ಹಲವು ಶಕ್ತಿಕೇಂದ್ರದ ಅಧ್ಯಕ್ಷ ಸ್ಥಾನದಲ್ಲಿ ಪುತ್ತಿಲ ಪರಿವಾರದ ಮುಖಂಡರಿದ್ದು, ಇವರೆಲ್ಲಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೋ, ಅಥವಾ ಮಾತೃಪಕ್ಷದಲ್ಲೇ ಮುಂದುವರಿಯುತ್ತಾರೋ ಅನ್ನೋದು ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮದ ಬಳಿಕ ನಿರ್ಧಾರವಾಗಲಿದೆ.

News Editor

Learn More →

Leave a Reply

Your email address will not be published. Required fields are marked *