
ಉಡುಪಿ: ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಯುತ್ತಿರುವ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯದಲ್ಲಿ ಪಾಲ್ಗೊಳ್ಳದ ಶಿಕ್ಷಕ ರೋರ್ವರನ್ನು ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಬ್ರಹ್ಮಾವರ ತಾಲೂಕಿನ ಶೆಟ್ಟಿಬೆಟ್ಟು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ವೆಂಕಟೇಶ್ ಪಿ.ಬಿ. ಅಮಾನತು ಗೊಂಡಿರುವ ಶಿಕ್ಷಕ. ಗಣತಿದಾರರಾಗಿ ಅವರನ್ನು ನೇಮಿಸಿ ಆದೇಶ ಮಾಡಲಾಗಿತ್ತು. ಆದರೆ, ಶಿಕ್ಷಕ ತನ್ನ ನೇಮಕಾತಿ ಆದೇಶ ಸ್ವೀಕರಿಸಿರಲಿಲ್ಲ. ಹಲವು ಬಾರಿ ದೂರವಾಣಿ ಮೂಲಕ ಸಂಪರ್ಕಿಸಿ ತಿಳಿಸಿದರೂ ನೇಮಕಾತಿ ಆದೇಶ ಪ್ರತಿ ಸ್ವೀಕರಿಸಲು ನಿರಾಕರಿಸಿದ್ದರು. ಗಣತಿ ಕಾರ್ಯಕ್ಕೆ ಪಾಲ್ಗೊಳ್ಳದಿರುವ ಕಾರಣ ಕೇಳಿ ನೋಟಿಸ್ ನೀಡಿದ್ದರೂ ಈವರೆಗೂ ಉತ್ತರ ನೀಡಿಲ್ಲ. ಹೀಗಾಗಿ ಸಮೀಕ್ಷೆಯಲ್ಲಿ ಕರ್ತವ್ಯ ನಿರ್ವಹಿಸದ ಶಿಕ್ಷಕನನ್ನು ಅಮನಾತ್ತಿನಲ್ಲಿಟ್ಟು ಡಿಸಿ ಆದೇಶಿಸಿದ್ದಾರೆ.
ಸಮೀಕ್ಷಾ ಕಾರ್ಯದಲ್ಲಿ ನಿರ್ಲಕ್ಷ್ಯ ತೋರಿದರೆ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸ್ವರೂಪಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
