
ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದ ಬಳಿಯಿರುವ ಶ್ರೀ ಶಾರದಾ ಭಜನಾ ಮಂದಿರದಲ್ಲಿ ನವರಾತ್ರಿ ಪ್ರಯುಕ್ತ ನಡೆದ 91ನೇ ವರ್ಷದ ಶಾರದೋತ್ಸವದ ವೈಭವದ ಶೋಭಾಯಾತ್ರೆ ಅ.2ರಂದು ಸಂಜೆ ನಡೆಯಿತು.
ಬೊಳುವಾರು ವೃತ್ತದಲ್ಲಿ ಭಗವಾಧ್ವಜ ಇರುವ ಅಲಂಕೃತಗೊಂಡ ತೆರೆದ ವಾಹನದಲ್ಲಿದ್ದ ಶ್ರೀ ಮಹಾಲಿಂಗೇಶ್ವರ ದೇವರ ಭಾವಚಿತ್ರಕ್ಕೆ ಸೇರಿದ್ದ ಗಣ್ಯರು ಪುಷ್ಪಾರ್ಚನೆ ಸಲ್ಲಿಸಿದರು. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಅರ್ಚಕ ಲಕ್ಷ್ಮೀನಾರಾಯಣ ಅಸ್ರಣ್ಣ ಅವರು ಶ್ರೀ ಶಾರದೆ ಮಾತೆಗೆ ರಥಾರತಿ ಬೆಳಗಿದರು.
ಇದೇ ಸಂದರ್ಭ ಶಾಸಕ ಅಶೋಕ್ ಕುಮಾರ್ ರೈ ಅವರು ಶ್ರೀ ಶಾರದಾ ಮಾತೆಗೆ ಪುಷ್ಪಾರ್ಚನೆ ಮಾಡಿದರು. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಭಗವಾಧ್ವಜಾರೋಹಣ ಮಾಡಿದರು. ಬಳಿಕ ಶ್ರೀ ಶಾರದಾ ಮೂರ್ತಿಗೆ ಮಂಗಳಾರತಿ ನಡೆದು ಶೋಭಾಯಾತ್ರೆ ಆರಂಭಗೊಂಡಿತು.
ಶಾರದಾ ಭಜನಾ ಮಂದಿರದ ಅಧ್ಯಕ್ಷ ಸೀತಾರಾಮ ರೈ ಕೆದಂಬಾಡಿಗುತ್ತು, ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಶಾಸಕ ಸಂಜೀವ ಮಠಂದೂರು, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೂಟ್ಟು ಅವರು ತೆಂಗಿನ ಕಾಯಿ ಒಡೆದು ಶೋಭಾಯಾತ್ರೆಗೆ ಅಧಿಕೃತ ಚಾಲನೆ ನೀಡಿದರು.
ಬೊಳುವಾರಿನಲ್ಲಿ ಶೋಭಾಯಾತ್ರೆಯ ಆರಂಭದಲ್ಲಿ ಭಕ್ತಿಗಾನ ಕಾರ್ಯಕ್ರಮ ನಡೆಯಿತು. ಮಿಥುನ್‌ರಾಜ್ ವಿದ್ಯಾಪುರ ಅವರ ನೇತೃತ್ವದಲ್ಲಿ ಭಕ್ತಿಗಾನಸುದೆ ನಡೆಯಿತು. ಪದ್ಮರಾಜ್ ಬಿ.ಸಿ. ಅವರು ಸಂಗೀತ ರಸಮಂಜರಿ ಕಾರ್ಯಕ್ರಮ ನಿರ್ವಹಿಸಿದರು.
ದರ್ಬೆ ವೃತ್ತದ ತನಕ ಸಾಗಿ ನಂತರ ಹಿಂತಿರುಗಿ ದೇವಸ್ಥಾನದ ಎದುರಿನ ಗದ್ದೆಯಲ್ಲಿರುವ ಕೆರೆಯಲ್ಲಿ ಯಾಂತ್ರೀಕೃತ ತಂತ್ರಜ್ಞಾನದ ಮೂಲಕ ವಿಶಿಷ್ಠ ರೀತಿಯಲ್ಲಿ ಶಾರದಾ ವಿಗ್ರಹದ ಜಲಸ್ಥಂಭನ ನಡೆಯಿತು. ಶೋಭಾಯಾತ್ರೆಯಲ್ಲಿ ಶಾರದಾ ಮಾತೆಗೆ ಭಕ್ತಾದಿಗಳು ಹಣ್ಣುಕಾಯಿ ಹಾಗೂ ಮಂಗಳಾರತಿ ಸೇವೆ ಮಾಡಿಸಿ ಪ್ರಸಾದ ಸ್ವೀಕರಿಸಿದರು. ಸಂಪ್ರದಾಯ, ಸಂಸ್ಕೃತಿ, ಧಾರ್ಮಿಕತೆಗೆ ಅನುಗುಣವಾಗಿ ಸುಂದರವಾಗಿ, ಶಿಸ್ತುಬದ್ಧ ಹಾಗೂ ಅಚ್ಚುಕಟ್ಟಾಗಿ ಶೋಭಾಯಾತ್ರೆ ನೆರವೇರಿತು.
ಶೋಭಾಯಾತ್ರೆಯಲ್ಲಿ ಬೊಳುವಾರು ವೃತ್ತದಿಂದ ದರ್ಬೆಯ ತನಕ 6 ಕೇಂದ್ರಗಳಲ್ಲಿ ನಿಂತು ಸಾರ್ವಜನಿಕರಿಗೆ ಶೋಭಾಯಾತ್ರೆ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿತ್ತು. ಬೊಳುವಾರು ವೃತ್ತ, ಇನ್‌ಲ್ಯಾಂಡ್ ಮಯೂರ, ಶ್ರೀಧರ ಭಟ್ ಬ್ರದರ್ಸ್, ಬಸ್ ನಿಲ್ದಾಣ, ಹೊಟೇಲ್ ಸುಜಾತ ಬಳಿ ಹಾಗು ದರ್ಬೆ ವೃತ್ತದ ಬಳಿ ಕಲಾ ತಂಡಗಳಿಂದ ವಿಶೇಷ ಪ್ರದರ್ಶನಗಳು ನಡೆಯಿತು.
ಶೋಭಾಯಾತ್ರೆಯು ಬೊಳುವಾರಿನಿಂದ ದರ್ಬೆಗೆ ಸೇರುವ ಸಂದರ್ಭ ಸುಮಾರು 12 ತಂಡಗಳ 300 ಮಂದಿ ನೃತ್ಯ ಭಜನಾರ್ಥಿಗಳು ದರ್ಬೆಯಲ್ಲಿ ವೃತ್ತಕ್ಕೆ ಸುತ್ತುವರಿದು ಏಕಕಾಲದಲ್ಲಿ ಎಲ್ಲರೂ ಜೊತೆಯಾಗಿ ನೃತ್ಯ ಭಜನೆ ಮಾಡಿದರು.
ಶೋಭಾಯಾತ್ರೆ ಸಾಗಿಬರುವ ಬೊಳುವಾರಿನಿಂದ ದರ್ಬೆ ವೃತ್ತದವರೆಗೆ ಶೋಭಾಯಾತ್ರೆ ಸಮಿತಿ ವತಿಯಿಂದ ರಸ್ತೆಯುದ್ದಕ್ಕೂ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಈ ಭಾರಿ ವಿಶೇಷವಾಗಿ ಮೈಸೂರು, ಮಂಗಳೂರು ದಸರಾ ಮಾದರಿಯಲ್ಲಿ ಮುಖ್ಯ ರಸ್ತೆಯಲ್ಲಿ ರಸ್ತೆಗೆ ಅಡ್ಡಲಾಗಿ ಹಾಗೂ ರಸ್ತೆ ವಿಭಜಕದ ಉದ್ದಕ್ಕೂ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.
ಶಾರದಾ ಭಜನಾ ಮಂದಿರದ ಅಧ್ಯಕ್ಷ ಸೀತಾರಾಮ ರೈ ಕೆದಂಬಾಡಿಗುತ್ತು ಅವರ ತಾಯಿ ವಯೋವೃದ್ಧರಾಗಿದ್ದು ಅವರು ಶಾರದೆಯ ಶೋಭಾಯಾತ್ರೆಯನ್ನು ನೋಡಲೆಂದು ಬೊಳುವಾರಿನಲ್ಲಿ ಶೋಭಾಯಾತ್ರೆಯ ಚಾಲನೆ ಸಂದರ್ಭಕುಟುಂಬದ ಜೊತೆ ಬಂದಿದ್ದರು. ಈ ಸಂದರ್ಭ ಶಾರದೆ ಮಾತೆಯ ಆಶೀರ್ವಾದ ಪಡೆದ ಮಂದಿರದ ಅಧ್ಯಕ್ಷ ಸೀತಾರಾಮ ರೈ ಕೆದಂಬಾಡಿಗುತ್ತು ಅವರು ಜನಸಂದಣಿಯ ನಡುವೆ ಚಯರ್‌ನಲ್ಲಿ ಕೂತಿದ್ದ ತಾಯಿ ಪದ್ಮಾವತಿ ಅವರ ಬಳಿಗೆ ಬಂದು ಅವರ ಆಶೀರ್ವಾದ ಪಡೆದರು.
ಶೋಭಾಯಾತ್ರೆಯಲ್ಲಿ ಭಗವಾಧ್ವಜ ಹಾಗೂ ಶ್ರೀ ಮಹಾಲಿಂಗೇಶ್ವರ ದೇವರ ಭಾವಚಿತ್ರವಿದ್ದ ತೆರೆದ ವಾಹನ, ಕರ್ನಾಟಕ, ಕೇರಳ ಹಾಗೂ ತುಳುನಾಡಿನ ವೈವಿಧ್ಯಮಯ ಕಲಾ ತಂಡಗಳ ಸಾಂಸ್ಕೃತಿಕ ಪ್ರದರ್ಶನಗಳು ವಿಶೇಷ ಆಕರ್ಷಣೆಯಾಗಿತ್ತು. ಚೆಂಡೆ ಮೇಳ, ವಾದ್ಯ ಘೋಷ, ವಾದ್ಯ ವೃಂದ, 300 ಮಂದಿಯ ಕುಣಿತ ಭಜನೆಗಳೊಂದಿಗೆ ಕೇರಳದ ತ್ರಿಶೂರಿನ ಪಂದಳಾಟಮ್, ಸಿಂಗಾರಿ ಕಾವಡಿ, ಪಾಲಕ್ಕಾಡಿನ ಪ್ಲವರ್ ಡ್ಯಾನ್ಸ್, ತ್ರಿಶೂರ್‌ನ ದೇವಿ ಬೋರ್ಡ್, ಸಹಸ್ರಬೆಳಕು ಕಲಾತಂಡ, ದೇವಂ ನೃತ್ಯ ಕಲಾ ತಂಡ, ವೀಳಕಟ್ಟಾಂ, ಸಿಂಗಾರಿ ಕಾಪಾಡಿ ಕಲಾತಂಡ, ಶ್ರೀ ದೇವಿಯ ಭವ್ಯ ಫಲಕದ ರಥ, ಕರಿಂಕಾಳಿ ತಂಡ, ಕಥಕಲಿ ತಂಡ, ಪೂಕಾವಡಿ ತಂಡ, ಆಂದ್ರದ ಕಲಾತಂಡದ ಕೊಟ್ಟಾಯಂನ ಗರುಡ ಯಾನ ವಿಶೇಷ ಆಕರ್ಷಣೆಯಾಗಿತ್ತು. ಶೋಭಾಯಾತ್ರೆಯಲ್ಲಿ ಡಿಜೆ ಮತ್ತು ಸುಡುಮದ್ದು ಹಾಗು ನಾಸಿಕ್ ಬ್ಯಾಂಡ್ ಪ್ರದರ್ಶನಗಳನ್ನು ನಿಷೇಧಿಸಲಾಗಿತ್ತು. ದರ್ಬೆಯಲ್ಲಿ ನವರಾತ್ರಿಯ ಉತ್ಸವಕ್ಕೆ ಪೂರಕವಾಗಿ ಹುಲಿ, ಸಿಂಹ ವೇಷಧಾರಿಗಳ ಪ್ರದರ್ಶನವೂ ನಡೆಯಿತು. ಶೋಭಾಯಾತ್ರೆಯ ಕೊನೆಯಲ್ಲಿ ಭವ್ಯರಥದಲ್ಲಿ ಶಾರದಾ ಮಾತೆಯು ವಿರಾಜಮಾನರಾಗಿದ್ದರು. ರಥದ ಸಾರಥಿಯಾಗಿ ದಯಾನಂದ ಅವರು ಸಹಕರಿಸಿದರು.
ಶಾರದಾ ಮಾತೆಗೆ ಪಿ.ಕೆ.ಗಣೇಶ್ ಮತ್ತು ಬಳಗ ಮಂಗಳವಾದ್ಯ ನುಡಿಸಿದರು.
ನವರಾತ್ರಿಯ ಸಂದರ್ಭ ಶಾರದಾ ಭಜನಾ ಮಂದಿರದಲ್ಲಿ ಪ್ರತಿಷ್ಟಾಪಿಸಲ್ಪಟ್ಟ ಶಾರದೆ ಮಾತೆಯ ವಿಗ್ರಹವನ್ನು ಅ.2ರಂದು ಮಧ್ಯಾಹ್ನ ಶೃಂಗಾರ ಮಾಡಿ ಪೂಜೆ ಸಲ್ಲಿಸಿ ಸಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಒಂದು ಸುತ್ತು ಬಂದು ಕೆರೆಯ ಬಳಿಯಿಂದ ಅಲಂಕೃತ ರಥಕ್ಕೆ ತರಲಾಯಿತು. ಶಾರದಾ ಭಜನಾ ಮಂದಿರದ ಬಳಿ ತೆಂಗಿನ ಕಾಯಿ ಒಡೆದು ಶಾರದೆ ವಿಗ್ರಹವನ್ನು ಬೊಳುವಾರಿಗೆ ಕೊಂಡೊಯ್ಯಲಾಯಿತು. ಬಳಿಕ ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು. ಕರ್ನಾಟಕ, ಕೇರಳ, ಆಂಧ್ರಪ್ರದೇಶ ಮತ್ತು ತುಳುನಾಡಿನ ವಿವಿಧ ಜಾನಪದ ಕಲಾ ತಂಡಗಳ ವಿಭಿನ್ನ ಕಲಾ ಪ್ರದರ್ಶನಗಳೊಂದಿಗೆ ಆರಂಭಗೊಂಡ ಶೋಭಾಯಾತ್ರೆಯು ಪುತ್ತೂರು ಪೇಟೆಯಿಂದ ದರ್ಬೆ ವೃತ್ತದವರೆಗೆ ಸಾಗಿ ಅಲ್ಲಿಂದ ಹಿಂದಿರುಗಿ ಆಗಮಿಸಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ಗದ್ದೆಯ ಕೆರೆಯಲ್ಲಿ ಶಾರದೆ ವಿಗ್ರಹ ಜಲಸ್ಥಂಭನಗೊಳಿಸಲಾಯಿತು.
ಮಹಾವೀರ ಆಸ್ಪತ್ರೆಯ ಜನಪ್ರಿಯ ವೈದ್ಯ, ಶಾರದೋತ್ಸವ ಮೆರವಣಿಗೆ ಸಮಿತಿಯ ಮುಖ್ಯ ರೂವಾರಿ ಡಾ.ಸುರೇಶ್ ಪುತ್ತೂರಾಯ, ಶಾರದಾ ಭಜನಾ ಮಂದಿರದ ಪ್ರಧಾನ ಕಾರ್ಯದರ್ಶಿ ಜಯಂತ ಉರ್ಲಾಂಡಿ, ಜಿಲ್ಲಾ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಮುರಳಿಕೃಷ್ಣ ಹಸಂತಡ್ಕ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ರಾಧಾಕೃಷ್ಣ ನಂದಿಲ, ಪ್ರಧಾನ ಕಾರ್ಯದರ್ಶಿ ಅಶೋಕ್ ಕುಂಬ್ಳೆ, ಶಾರದಾ ಭಜನಾ ಮಂದಿರದ ಕೋಶಾಧಿಕಾರಿ ನವೀನ್ ಕುಲಾಲ್,ಜೊತೆ ಕಾರ್ಯದರ್ಶಿ ನೀಲಂತ್ ಕುಮಾರ್, ಶಾರದೋತ್ಸವ ಸಮಿತಿ ಅಧ್ಯಕ್ಷ ಸೀತಾರಾಮ ರೈ ಕೆದಂಬಾಡಿಗುತ್ತು ಅವರ ತಾಯಿ ಪದ್ಮಾವತಿ, ಟಿಎಪಿಸಿಎಂಎಸ್‌ನ ಅಧ್ಯಕ್ಷ ಕೃಷ್ಣ ಕುಮಾರ್ ರೈ ಕೆದಂಬಾಡಿಗುತ್ತು, ಉದ್ಯಮಿ ರತ್ನಾಕರ ರೈ ಕೆದಂಬಾಡಿಗುತ್ತು,ನವನೀತ್ ಕೆಮ್ಮಿoಜೆ,ಹರಿಣಿ ಪುತ್ತೂರಾಯ, ಭಜನಾ ಮಂದಿರದ ಹಿರಿಯ ಕಾರ್ಯಕರ್ತ ಕಿಟ್ಟಣ್ಣ ಗೌಡ ಬಪ್ಪಳಿಗೆ, ಜಯಕಿರಣ್ ಉರ್ಲಾಂಡಿ, ಕೃಷ್ಣ ಎಂ ಅಳಿಕೆ, ಗಣೇಶ್ ಆಚಾರ್ಯ, ಮಹಾಲಿಂಗೇಶ್ವರ ದೇವಸ್ಥಾನದ ನಿತ್ಯ ಕರಸೇವಕರ ತಂಡದ ಸದಸ್ಯರು, ತಾ.ಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಬಿಎಮ್‌ಎಸ್ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಗೌರವಾಧ್ಯಕ್ಷ ಸಂತೋಷ್ ರೈ ಕೈಕಾರ, ಅಜಿತ್ ರೈ ಹೊಸಮನೆ, ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಹಸಂಯೋಜಕ ದಿನೇಶ್ ಪಂಜಿಗ, ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಡಾ. ಕೃಷ್ಣ ಪ್ರಸನ್ನ, ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷೆಯಾಗಿರುವ ನಗರಸಭೆ ಸದಸ್ಯೆ ಗೌರಿ ಬನ್ನೂರು, ಶಾರದೋತ್ಸವ ಸಮಿತಿ ಮಾತೃಮಂಡಳಿ ಸದಸ್ಯರು, ಕುಂಜೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಮಾಜಿ ಸಮಿತಿ ಸದಸ್ಯ ವಿಶ್ವನಾಥ ಕುಲಾಲ್, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಉದಯ ಹೆಚ್, ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು, ಹರಿಪ್ರಸಾದ್ ಯಾದವ್, ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ನಿರ್ದೇಶಕ ಕಿರಣ್ ಬಲ್ನಾಡು, ಚಿತ್ರ ನಟ ಮನೋಜ್ ಪುತ್ತೂರು, ವಿರೂಪಾಕ್ಷ ಭಟ್ ಮಚ್ಚಿಮಲೆ, ಪುರುಷೋತ್ತಮ ಕೋಲ್ಪೆ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.
