
ಉಡುಪಿ: ಹಿಂದಿ ಹೇರಿಕೆ ಹಾಗೂ ಕರವೇ ಕಾರ್ಯಕರ್ತರನ್ನು ಬಂಧಿಸಿರುವ ರಾಜ್ಯ ಸರಕಾರದ ನಡೆಯನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆಯ (ನಾರಾಯಣ ಗೌಡ ಬಣ) ಉಡುಪಿ ಜಿಲ್ಲಾ ಘಟಕದ ನೇತೃತ್ವದಲ್ಲಿ ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.
ರಾಜಾಭಾಷಾ ಆಯೋಗ ಹಿಂದಿಯೇತರ ರಾಜ್ಯಗಳ ಮೇಲೆ ಹಿಂದಿಯನ್ನು ಬಲವಂತವಾಗಿ ಹೇರುವ ವ್ಯವಸ್ಥಿತ ಕುತಂತ್ರ ನಡೆಸುತ್ತಾ ಬಂದಿದೆ. ದೇಶದಲ್ಲಿ ಈಗ ಯಾವುದೇ ರಾಜಭಾಷೆಗಳು ಇಲ್ಲ. ಇರುವುದು ನೆಲದ ಭಾಷೆಗಳು, ಜನರ ಭಾಷೆಗಳು. ರಾಜಭಾಷೆ ಎಂಬುದೇ ಪ್ರಜಾಪ್ರಭುತ್ವ ವಿರೋಧಿ. ಹೀಗಾಗಿ ಒಕ್ಕೂಟ ಸರ್ಕಾರ ರಾಜಭಾಷಾ ಆಯೋಗವನ್ನು ಈ ಕೂಡಲೇ ರದ್ದುಪಡಿಸಬೇಕು. ರಾಜಭಾಷೆಯ ಹೆಸರಲ್ಲಿ ಹಿಂದಿ ಹೇರುವುದನ್ನು ನಾವು ಸಹಿಸುವುದಿಲ್ಲ. ಹಿಂದಿಹೇರಿಕೆ ದೇಶಕ್ಕೆ ಮಾರಕ ಮಾತ್ರವಲ್ಲ, ಭಾರತದ ಐಕ್ಯತೆಗೆ ಧಕ್ಕೆ ತರುತ್ತಿದೆ ಎಂದು ಕರವೇ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಕರವೇ ಜಿಲ್ಲಾಧ್ಯಕ್ಷ ಅರಾ ಪ್ರಭಾಕರ್ ಪೂಜಾರಿ, ಉಪಾಧ್ಯಕ್ಷ ಅನಿಲ್ ಪೂಜಾರಿ, ಅಜರುದ್ದಿನ್, ಜಿಲ್ಲಾ ಸಂಚಾಲಕರಾದ ಕೃಷ್ಣಪಂಗಾಳ, ಜಿಲ್ಲಾ ಸಂಚಾಲಕರಾದ ಸುಧಾಕರ್ ಕಲ್ಮಾಡಿ, ಕಾಪು ತಾಲೂಕು ಅಧ್ಯಕ್ಷ ವೀರೇಶ್, ಕಾರ್ಕಳ ತಾಲೂಕು ಅಧ್ಯಕ್ಷ ಇಮ್ರಾನ್ ಶೇಕ್, ಕುಂದಾಪುರ ತಾಲೂಕು ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಉಪಸ್ಥಿತರಿದ್ದರು.
