ಪುತ್ತೂರು: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಹಾಗೂ ದ.ಕ. ಜಿಲ್ಲಾಡಳಿತ ವತಿಯಿಂದ ನೃತ್ಯೋಪಾಸನಾ ಕಲಾ ಅಕಾಡೆಮಿ(ರಿ.) ಪುತ್ತೂರು ಇದರ ಸಹಯೋಗದಲ್ಲಿ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು ಇವರ ಸಹಕಾರದಲ್ಲಿ ಗಡಿ-ಸಂಸ್ಕೃತಿ- ಉತ್ಸವದ ಅಂಗವಾಗಿ `ಕಲಾರ್ಣವ-2025′ ಭಾವ-ರಾಗ-ತಾಳ ಕಾರ್ಯಕ್ರಮ ಸಂಜೆ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ವಿಜೃಂಭನಡೆಯಿಂದ ನಡೆದಿದ್ದು, ಕಲಾರಾಧಕರನ್ನು ಮನಸೂರೆಗೊಳಿಸಿದೆ.
ಫೆಡರೇಶನ್ ಆಫ್ ಇಂಡಿಯಾದ ಯುವ ಕಲಾ ಪ್ರಶಸ್ತಿ ಪುರಸ್ಕೃತ ಬಾಲ ಕಲಾವಿದ ಮಾಸ್ಟರ್ ಶಮಂತಕ ಇವರಿಂದ ಭರತನಾಟ್ಯ ಪ್ರದರ್ಶನ, ಅದರ ಬಳಿಕ ಅಂತರ್ರಾಷ್ಟ್ರೀಯ ಬಾಲ ಕಲಾವಿದೆ ಕುಮಾರಿ ಗಂಗಾ ಶಶಿಧರನ್ ಅವರಿಂದ ವಯಲಿನ್ ವೈಭವ ನಡೆಯಿತು. ಆರಂಭದಲ್ಲಿ ಸಭಾ ಕಾರ್ಯಕ್ರಮ ನಡೆಯಿತು.
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಪ್ರಾಧಿಕಾರದ ಮೂಲಕ ಕನ್ನಡಕ್ಕೆ ಒತ್ತು ಕೊಡುವ ಕೆಲಸ ಅಗುತ್ತಿದೆ. ಇದರ ಜೊತೆಗೆ ಎಲ್ಲಾ ಭಾಷೆಗೂ ಒತ್ತು ಕೊಡುವ ಕೆಲಸ ಸರಕಾರ ಮಾಡುತ್ತಿದೆ ಎಂದ ಅವರು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಅಭಿವೃದ್ಧಿ ರೂ. 60 ಕೋಟಿಯಲ್ಲಿ ಆಗಲಿದೆ. ಎಲ್ಲರ ಸಹಕಾರ ಬೇಕೆಂದರು.
ಕರ್ನಾಟಕದ ಎರಡನೇ ಹೆಚ್ಚುವರಿ ಭಾಷೆಯನ್ನಾಗಿ ತುಳುವನ್ನು ಘೋಷಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುತ್ತಿದೆ. ಆಂಧ್ರಪ್ರದೇಶದಲ್ಲಿ 2ನೇ ಭಾಷಾ ಪ್ರಕ್ರಿಯೆ ಮಾಡಲಾದ ವಿಧಾನವನ್ನು ಅಧ್ಯಯನ ಮಾಡಲು ಪರಿಣಿತರ ತಂಡ ಕಳುಹಿಸಲಾಗಿದ್ದು, ಕೊನೆಯ ಹಂತದಲ್ಲಿದೆ. ಗಡಿನಾಡಿನ ತುಳು ಭಾಷೆಗೆ ಮಾನ್ಯತೆ ದೊರಕಿಸುವಲ್ಲಿ ಸರಕಾರದ ಮಟ್ಟದಲ್ಲಿ ಗಡಿ ಅಭಿವೃದ್ಧಿ ಪ್ರಾಧಿಕಾರವೂ ಸಹಕರಿಸಬೇಕು ಎಂದು ಶಾಸಕ
ಅಶೋಕ್ ಕುಮಾರ್ ರೈ ಹೇಳಿದರು.
ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿದರು. ಕಲೆ, ಸಾಹಿತ್ಯ ಮತ್ತು ಸಂಸ್ಕøತಿಗಳು ನಿಂತ ನೀರಾಗದೆ ನಿರಂತರ ಚಲಿಸುತ್ತಿರಬೇಕು. ಇದಕ್ಕೆ ಸೂಕ್ತ ರೀತಿಯ ಪ್ರೋತ್ಸಾಹ ಸಿಗಬೇಕು. ಗಡಿ ಪ್ರದೇಶದಲ್ಲಿ ಕನ್ನಡವನ್ನು ಬೆಳೆಸಿ, ಉಳಿಸುವ ಕೆಲಸವನ್ನು ಪ್ರಾಧಿಕಾರ ಮಾಡುತ್ತಿರುವುದು ಸಂತೋಷದಾಯಕ. ಅಂತಾರಾಷ್ಟ್ರೀಯ ಖ್ಯಾತಿಯ ಬಾಲ ಕಲಾವಿದರಿಬ್ಬರು ಪುತ್ತೂರಿನಲ್ಲಿ ಪ್ರದರ್ಶನ ನೀಡುತ್ತಿರುವುದು ಶ್ಲಾಘನೀಯ ಎಂದ ಅವರು ಯಾವುದೇ ಕಲೆಯಲ್ಲಿ ನಾಟ್ಯ ಸಂಗೀತ ಒಳಗೊಂಡಿರುತ್ತದೆ. ಯುವ ಜನಾಂಗ ನಮ್ಮ ಸಂಸ್ಕ್ರತಿಯಿಂದ ವಿಮುಖರಾಗುತ್ತಿರುವುದು ನೊಡುತ್ತಿದ್ದೇವೆ. ಅವರನ್ನು ಮತ್ತೆ ನಮ್ಮ ಸಂಸ್ಕøತಿಯ ಕಡೆ ಕರೆತರುವ ಕೆಲಸ ಇಂತಹ ಕಲೆಗಳ ಮೂಲಕ ಆಗಬೇಕಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಅಧ್ಯಕ್ಷತೆ ವಹಿಸಿ ಮಾತನಾಡಿ 2010 ರಲ್ಲಿ ಕಪ್ರಾಧಿಕಾರ ಹುಟ್ಟಿಕೊಂಡಿದೆ. ಅದರಲ್ಲೂ 6 ಗಡಿ ಪ್ರದೇಶದ ಕನ್ನಡಿಗರ ರಕ್ಷಣೆಗಾಗಿ ಹುಟ್ಟಿದೆ. ಗಡಿ ಭಾಗದ ಸಮಸ್ಯೆಗಳಿಗೆ ಸ್ಪಂದನೆ ಸರಕಾರದಿಂದ ಆಗುತ್ತಿದೆ. ಕೇರಳ, ಗೋವ ತಲಂಗಾಣ, ಗೋವ ಸಹಿತ 6 ರಾಜ್ಯದಲ್ಲಿ ಕನ್ನಡ ಮಾತನಾಡುವವರು ಇದ್ದಾರೆ. ಹೊರ ರಾಜ್ಯದಲ್ಲಿ 64 ಕನ್ನಡ ಶಾಲೆಗಳು ಆರಂಭ. ಕರ್ನಾಟಕದ ಒಳಗಿದ್ದವರು ಕನ್ನಡ ಮಾತನಾಡುವುದು ಸಹಜ. ಆದರೆ ಹೊರಗಿರುವ ಕನ್ನಡಿಗರು ಬಹಳಷ್ಟು ಗಟ್ಟಿಯಾಗಿ ಕನ್ನಡ ಮಾತಮಾಡುತ್ತಾರೆ. ಮಹಾರಾಷ್ಡ್ರದ ಸಾಂಗ್ಲಿಯಲ್ಲಿ ಪಿಯುಸಿಯಲ್ಲಿ ಕನ್ನಡ ಕಲಿಸುತ್ತಾರೆ. ಗೋವಾದಲ್ಲಿ 4 ಲಕ್ಷ ಜನ ಕನ್ನಡಿಗರಿದ್ದಾರೆ. ಕೇರಳದಲ್ಲಿ ಸಂಪೂರ್ಣವಾಗಿ ಕನ್ನಡಿಗರು ಕನ್ನಡ ಮಾತನಾಡುತ್ತಾರೆ. ಒಟ್ಟಿನಲ್ಲಿ ಗಡಿ ಭಾಗದಲ್ಲಿ ಕನ್ನಡಕ್ಕೆ ಹೆಚ್ಚು ಒತ್ತುಕೊಡುವ ಕೆಲಸ ಮಾಡುತ್ತಿದ್ದಾರೆ. ಎಲ್ಲೊ ಒಂದು ಕಡೆ ಬೇರೆ ಬಾಷೆಗಳಿಂದಾಗಿ ಕನ್ನಡ ಮರೆಯ ಬಾರದೆಂದು ಮತ್ತು ಕರ್ನಾಟಕದ ಎಲ್ಲಾ ಕಲಾ ತಂಡ ಉಳಿಯಬೇಕು ಹೊರ ತಂಡಗಳು ಉಳಿಯಬೇಕೆಂದು ಪ್ರಾಧಿಕಾರ ಕೆಲಸ ಮಾಡುತ್ತಿದೆ ಎಂದರು.
ಶಾಲಿನಿ ಆತ್ಮಭೂಷನ್ ದಂಪತಿ ಶ್ರೀಗಳನ್ನು ಗೌರವಿಸಲಾಯಿತು.
ಸಭಾ ಕಾರ್ಯಕ್ರಮದ ಆರಂಭದಲ್ಲಿ ಜನಪದ ನೃತ್ಯ ಪ್ರದರ್ಶನ ನಡೆಯಿತು. ಸಂಸದ ಕ್ಯಾ| ಬ್ರಿಜೇಶ್ ಚೌಟ ಅವರು ಕಲಾವಿದರನ್ನು ಗೌರವಿಸಿ ಶುಭ ಹಾರೈಸಿ ತೆರಳಿದರು.
ಜನಪದ ನೃತ್ಯದಲ್ಲಿ ತಮಟೆ ನೃತ್ಯ, ಜನಪದ ನೃತ್ಯ, ವೀರಗಾಸೆ, ಅಗೋರಿ ನೃತ್ಯ, ಪೂಜಾ ಕುಣಿತ ವಿಶೇಷ ಆಕರ್ಷಣೆಯಾಗಿತ್ತು.
ದೇಶ, ವಿದೇಶಗಳ ಸುಮಾರು 300ಕ್ಕೂ ಅಧಿಕ ವೇದಿಕೆಗಳಲ್ಲಿ ವಯಲಿನ್ ಕಛೇರಿ ನೀಡಿದ ಈ ಮಲಯಾಳಂ ಭಾಷಿಕ ಬಾಲ ಪ್ರತಿಭೆ ಅಂತರ್ರಾಷ್ಟ್ರೀಯ ಖ್ಯಾತಿಯ ಕೇರಳ ಮಲಪುರಂನ ವಯಲಿನ್ ಕಲಾವಿದೆ ಕುಮಾರಿ ಗಂಗಾ ಶಶಿಧರನ್ ಇದೇ ಮೊದಲ ಬಾರಿಗೆ ಪುತ್ತೂರಿಗೆ ಆಗಮಿಸಿದ್ದರು. ಮಾಸ್ಟರ್ ಶಮಂತಕ ಧಾರವಾಡ ಮೂಲದ ಎಳೆ ಭರತನಾಟ್ಯ ಪ್ರತಿಭೆ. ತಬಲಾ, ಮೃದಂಗ ಹಾಗೂ ಯಕ್ಷಗಾನ ಕಲಾವಿದನಾಗಿಯೂ ಪ್ರಸಿದ್ಧಿ ಪಡೆದಿರುವ ಈ ಕಲಾವಿದರಿಬ್ಬರ ಕಲಾ ಪ್ರದರ್ಶನಕ್ಕೆ ಪುತ್ತೂರಿನ ಕಲಾರಾಧಕರು ಸುಮಾರು ಮೂರುವರೆ ಗಂಟೆಗಳ ತನಕ ಕಲೆಯನ್ನು ಆರಾಧಿಸಿದರು. ಹುಟ್ಟಿದರೆ ಕನ್ನಡ ನಾಡು ಹಾಡನ್ನು ವಯಲಿನ್ ನಲ್ಲಿ ನುಡಿಸಿದ ವೇಳೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಉಮೇಶ್ ನಾಯಕ್ ಬಾಲ ಪ್ರತಿಭೆಗೆ ಕನ್ನಡ ಪೇಟ, ಶಾಲು ತೊಡಿಸಿ ಗೌರವಿಸಿದರು. ಬಳಿಕ ಗಂಗಾ ಶಶಿಧರನ್ ಅವರು ಕನ್ನಡಕ್ಕೆ ಗೌರವ ಕೊಡುವ ನಿಟ್ಟಿನಲ್ಲಿ ನಿಂತು ವಯಲಿನ್ ಬಾರಿಸಿದರು. ಇಬ್ಬರು ಬಾಲಕಲಾವಿದರಿಗೆ ನೃತ್ಯೋಪಸಾನ ಕಲಾಕೇಂದ್ರದ ವಿದ್ಯಾರ್ಥಿನಿ ಧನ್ಯಶ್ರೀ ಅವರು ರಚಿಸಿದ ಚಿತ್ರಪಟವನ್ನು ಕೊಡುಗೆಯಾಗಿ ನೀಡಿದರು.
ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ,,ಗಡಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತೀಹಳ್ಳಿ,ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಉಮೇಶ್ ನಾಯಕ್, ತಹಸೀಲ್ದಾರ್ ಬಿ ಎಸ್ ಕೂಡಲಗಿ ಅಕಾಡೆಮಿ ಸ್ಥಾಪಕ ಟ್ರಸ್ಟಿ, ನೃತ್ಯಗುರು ವಿದುಷಿ ಶಾಲಿನಿ ಆತ್ಮಭೂಷಣ್ ಪತ್ರಕರ್ತ ಆತ್ಮಭೂಷಣ್, ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಡೀನ್ ಪ್ರೊ. ವಿಜಯಾ ಸರಸ್ವತಿ, ವೇದಿಕೆಯಲ್ಲಿ ಉಪಸ್ಥಿತರಿದ್ದರು.


