
ಮಂಗಳೂರು | ಪ್ರತಿಭಟನೆಗೆ ಬಾಂಡ್; SDPI ಆರೋಪಕ್ಕೆ ಕಮಿಷನರ್ ಸ್ಪಷ್ಟನೆ
ಮಂಗಳೂರು: RTI ಅರ್ಜಿ ಸಲ್ಲಿಸಿ ಸಮಯ ವ್ಯರ್ಥ ಮಾಡಬೇಡಿ, ಮಾಹಿತಿ ಬೇಕಿದ್ದರೆ ತಕ್ಷಣವೇ ಒದಗಿಸುತ್ತೇವೆ ಎಂದು SDPI ಆರೋಪಕ್ಕೆ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.
ಅಬ್ದುಲ್ ರಹ್ಮಾನ್‌ರ ಕೊಲೆ ಪ್ರಕರಣದ ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವಲ್ಲಿ ಪೊಲೀಸ್ ಇಲಾಖೆ ಮತ್ತು ರಾಜ್ಯ ಸರಕಾರದ ವೈಫಲ್ಯ ಖಂಡಿಸಿ ಎಸ್‌ಡಿಪಿಐ ನಿನ್ನೆ ಮಂಗಳೂರಿನಲ್ಲಿ ಪ್ರತಿಭಟನೆ ಹಮ್ಮಿಕೊಂಡಿತ್ತು. ಈ ವೇಳೆ SDPI ಪ್ರತಿಭಟನೆಗೆ ತೆಗೆದುಕೊಂಡ ಬಾಂಡ್‌ಗಳ ಕುರಿತು ಪ್ರಶ್ನೆಗಳನ್ನು ಎತ್ತಿದ್ದಾರೆ. ಜೊತೆಗೆ ಸಂಘಪರಿವಾರಕ್ಕೆ ಸಂಬಂಧಿಸಿದ ಎಷ್ಟು ಮಂದಿ ವ್ಯಕ್ತಿಗಳ ಮೇಲೆ ಇದೇ ರೀತಿಯ ಕ್ರಮ ಜಾರಿಗೊಳಿಸಲಾಗಿದೆ ಎಂಬ ಪ್ರಶ್ನೆಯನ್ನೂ ಅವರು ಮುಂದಿಟ್ಟರು. ಈ ಮಾಹಿತಿಯನ್ನು RTI ಮೂಲಕ ಪಡೆದು ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಹೇಳಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಂಗಳೂರು ಪೊಲೀಸ್ ಕಮಿಷನರ್, ಇದಕ್ಕಾಗಿ 30 ದಿನಗಳ ಕಾಲ ಕಾಯುವ ಅಗತ್ಯವೇ ಇಲ್ಲ. ಅಗತ್ಯವಿದ್ದರೆ ಸಂಬಂಧಿತ ಮಾಹಿತಿಯನ್ನು ತಕ್ಷಣವೇ ಹಂಚಿಕೊಳ್ಳಲು ನಾವು ಸಿದ್ಧರಾಗಿದ್ದೇವೆ. ನಮಗೆ ಏನನ್ನೂ ಮರೆಮಾಚುವ ಉದ್ದೇಶ ಇಲ್ಲ.
ದುರದೃಷ್ಟವಶಾತ್, ಈ ಪ್ರದೇಶದಲ್ಲಿ ತಾವು ಬಾಧಿತರಾಗಿರುವಂತೆ ತೋರಿಸಿ, ಸತ್ಯಾಂಶಗಳನ್ನು ಮರೆಮಾಚುತ್ತಾ, ಚತುರವಾದ ಮಾತಿನ ಮೂಲಕ ನಿರಪರಾಧಿ ಜನರನ್ನು ಪ್ರಚೋದಿಸುವ ಪ್ರವೃತ್ತಿ ಸಾಮಾನ್ಯವಾಗುತ್ತಿದೆ ಎಂದು ಹೇಳಿದ್ದಾರೆ.


