ಇನ್ನು KSRTC ಬಸ್ ಅಪಘಾತವಾದರೆ ತಕ್ಷಣ ಸ್ಪಂದನೆ! ‘ಅಪಘಾತ ತುರ್ತು ಸ್ಪಂದನಾ ವಾಹನ’ ಸೇವೆ ಆರಂಭ

ಪ್ರಯಾಣಿಕರ ಸುರಕ್ಷತೆ ಹೆಚ್ಚಿಸುವ ಹಾಗೂ ಬಸ್ ಸೇವೆಯಲ್ಲಿ ಉಂಟಾಗುವ ಅಡಚಣೆಗಳನ್ನು ತ್ವರಿತವಾಗಿ ಪರಿಹರಿಸುವ ಉದ್ದೇಶದಿಂದ ಕರ್ನಾಟಕ ರಸ್ತೆ ಸಾರಿಗೆ ನಿಗಮ (KSRTC) ‘ಅಪಘಾತ ತುರ್ತು ಸ್ಪಂದನಾ ವಾಹನ’ ಸೇವೆಯನ್ನು ಆರಂಭಿಸಿದೆ. ಶಾಂತಿನಗರದ ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಯಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಈ ನೂತನ ಸೇವೆಗೆ ಚಾಲನೆ ನೀಡಿದರು.

ಅಪಘಾತಕ್ಕೀಡಾದ ಅಥವಾ ತಾಂತ್ರಿಕ ದೋಷದಿಂದ ಮಾರ್ಗಮಧ್ಯೆ ನಿಂತುಹೋಗುವ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ತಕ್ಷಣ ದುರಸ್ತಿ ನೆರವು ಒದಗಿಸುವುದು ಈ ಸೇವೆಯ ಪ್ರಮುಖ ಉದ್ದೇಶವಾಗಿದೆ. ಮೊದಲ ಹಂತದಲ್ಲಿ ಬೆಂಗಳೂರು ಹಾಗೂ ಮೈಸೂರು ಕೇಂದ್ರಗಳಲ್ಲಿ ಎರಡು ತುರ್ತು ಸ್ಪಂದನಾ ವಾಹನಗಳನ್ನು ನಿಯೋಜಿಸಲಾಗಿದ್ದು, ಬೆಂಗಳೂರು ಸುತ್ತಮುತ್ತಲಿನ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ ಸೇರಿದಂತೆ ಹಲವು ಜಿಲ್ಲೆಗಳಲ್ಲಿನ ಅವಘಡಗಳಿಗೆ ಶೀಘ್ರವಾಗಿ ಸ್ಪಂದಿಸಲಿವೆ.

ಕೆಂಪೇಗೌಡ ಬಸ್ ನಿಲ್ದಾಣ ಮತ್ತು ಮೈಸೂರು ರಸ್ತೆ ಬಸ್ ನಿಲ್ದಾಣಗಳಿಂದ ಸಂಚರಿಸುವ ರಾಜ್ಯ ಹಾಗೂ ಅಂತಾರಾಜ್ಯ ಬಸ್‌ಗಳು ಕೆಲವೊಮ್ಮೆ ತಾಂತ್ರಿಕ ದೋಷದಿಂದ ರಸ್ತೆಯಲ್ಲೇ ನಿಂತು ಟ್ರಾಫಿಕ್ ಸಮಸ್ಯೆ ಉಂಟುಮಾಡುತ್ತವೆ. ಇಂತಹ ಸಂದರ್ಭಗಳಲ್ಲಿ ಅಗತ್ಯ ಬಿಡಿಭಾಗಗಳು, ಉಪಕರಣಗಳು ಹಾಗೂ ತಾಂತ್ರಿಕ ಸಿಬ್ಬಂದಿಯೊಂದಿಗೆ ತುರ್ತು ವಾಹನಗಳು ಸ್ಥಳಕ್ಕೆ ತಲುಪಿ ಸಮಸ್ಯೆಯನ್ನು ತಕ್ಷಣ ಪರಿಹರಿಸಲಿವೆ ಎಂದು ಸಚಿವರು ತಿಳಿಸಿದರು.

ಅಪಘಾತ ಸಂಭವಿಸಿದ ವೇಳೆ ಚಾಲಕ ಹಾಗೂ ನಿರ್ವಾಹಕರಿಗೆ ತಕ್ಷಣ ನೆರವು ನೀಡುವುದರ ಜೊತೆಗೆ ಗಾಯಗೊಂಡ ಪ್ರಯಾಣಿಕರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲು ಸಹ ಈ ವಾಹನಗಳು ಸಹಕಾರಿಯಾಗಲಿವೆ. ಪ್ರತಿಯೊಂದು ತುರ್ತು ಸ್ಪಂದನಾ ವಾಹನಕ್ಕೆ 7.22 ಲಕ್ಷ ರೂ ವೆಚ್ಚವಾಗಿದ್ದು, 2026ರ ಜನವರಿ ಅಂತ್ಯದೊಳಗೆ ಇನ್ನೂ 10 ಹೊಸ ವಾಹನಗಳನ್ನು ಸೇವೆಗೆ ಒಳಪಡಿಸುವ ಯೋಜನೆ ಇದೆ. ಮುಂದಿನ ಹಂತಗಳಲ್ಲಿ ರಾಜ್ಯದ ಇತರ ಜಿಲ್ಲೆಗಳಿಗೂ ಈ ಸೇವೆಯನ್ನು ವಿಸ್ತರಿಸಲಾಗುವುದು ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

News Editor

Learn More →

Leave a Reply

Your email address will not be published. Required fields are marked *