ಪತ್ನಿಯ ವಿವಾಹೇತರ ಸಂಬಂಧ ವಿರೋಧಿಸಿದ ಪತಿಯನ್ನು ಕೊಂದ ಆರೋಪದಲ್ಲಿ ಪತ್ನಿ ಬಂಧನ

ಮೈಸೂರು: ಪತ್ನಿಯ ವಿವಾಹೇತರ ಸಂಬಂಧ ವಿರೋಧಿಸಿದ ಪತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಂಜನಗೂಡು ತಾಲೂಕಿನ ಇಂದಿರಾ ಗ್ರಾಮದಲ್ಲಿ ನಡೆದಿದೆ. ಪತಿಯ ಮೃತದೇಹವನ್ನು ನೇಣಿನ ಕುಣಿಕೆಗೆ ಹಾಕಿ ಆತ್ಮಹತ್ಯೆ ಎಂದು ಬಿಂಬಿಸುವ ವೇಳೆ ಪತ್ನಿ ಸಿಕ್ಕಿಬಿದ್ದಿದ್ದಾಳೆ.

ಇಂದಿರಾ ಗ್ರಾಮದ ಚಿಕ್ಕ ಯಜಮಾನ ಹಾಗೂ ಸಮಸ್ಯೆಗಳಿಗೆ ನ್ಯಾಯ ನೀಡುತ್ತಿದ್ದ ವೀರಣ್ಣ(41) ಮೃತರು. ಆರೋಪಿ ಶಿವಮ್ಮ(35) ಎಂಬಾಕೆಯನ್ನು ಹುಲ್ಲಹಳ್ಳಿ ಪೊಲೀಸರು ಬಂಧಿಸಿದ್ದಾರೆ.

13 ವರ್ಷಗಳ ಹಿಂದೆ ಇವರ ವಿವಾಹ ನೆರವೇರಿತ್ತು. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಶಿವಮ್ಮಗೆ ನಾಲ್ಕು ವರ್ಷದಿಂದ ಹೆಚ್.ಡಿ.ಕೋಟೆಯ ಬಲರಾಮ ಎಂಬಾತನ ಸ್ನೇಹವಿದೆ. ಇದು ವಿವಾಹೇತರ ಸಂಬಂಧಕ್ಕೂ ದಾರಿ ಮಾಡಿಕೊಟ್ಟಿತ್ತು. ಈ ವಿಚಾರ ಪತಿಗೆ ತಿಳಿದು ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ ನ್ಯಾಯ ಪಂಚಾಯಿತಿಯೂ ನಡೆದಿತ್ತು. ಹಲವು ಬಾರಿ ಆತನ ಸಂಪರ್ಕ ಬಿಡುವಂತೆ ಬುದ್ಧಿವಾದ ಹೇಳಲಾಗಿತ್ತು. ಅಷ್ಟಾದರೂ ಶಿವಮ್ಮ ಹಾಗೂ ಬಲರಾಮನ ನಡುವೆ ಸಂಬಂಧ ಮುಂದುವರೆದಿತ್ತು.

ಭಾನುವಾರ ರಾತ್ರಿ ಬಲರಾಮ ಫೋನ್ ಮಾಡಿದ್ದ. ದಂಪತಿಯ ನಡುವೆ ಗಲಾಟೆ ಆಗಿದೆ. ರಾತ್ರಿ ಊಟ ಮಾಡಿ ಪತಿ ಮಲಗಿದ್ದಾನೆ. ಕೆಲವೇ ಸಮಯದಲ್ಲಿ ಶಿವಮ್ಮ ಬಾಯಿ ಬಡಿದುಕೊಂಡು ಮನೆಯಿಂದ ಹೊರಬಂದಿದ್ದಾಳೆ. ಗಂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ತಿಳಿಸಿದ್ದಾಳೆ. ಕುತ್ತಿಗೆಯಲ್ಲಿ ಸೀರೆ ಕಂಡು ಬಂದಿತ್ತು. ಮಾಹಿತಿ ತಿಳಿದ ಹುಲ್ಲಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಬಂದು ವಿಚಾರಣೆ ಮಾಡಿದಾಗ ಬಲರಾಮನ ಜೊತೆ ಸಂಬಂಧ ತಿಳಿಸಿದ್ದಾಳೆ. ಶಿವಮ್ಮಳನ್ನು ವಿಚಾರಣೆಗೆ ಒಳಪಡಿಸಿದಾಗ ಸಂಚು ಬಯಲಾಗಿದೆ. ಶಿವಮ್ಮಳನ್ನು ಬಂಧಿಸಿ, ಹೆಚ್ಚಿನ ವಿಚಾರಣೆ ಮಾಡಲಾಗುತ್ತಿದೆ ಎಂದು ಹುಲ್ಲಹಳ್ಳಿ ಠಾಣೆ ಪೊಲೀಸರು ತಿಳಿಸಿದ್ದಾರೆ.

ಶೀಲ ಶಂಕಿಸಿ ಪತ್ನಿ ಕೊಂದ ಪತಿ ಬಂಧನ: ಪತ್ನಿಯನ್ನು ಹತ್ಯೆ ಮಾಡಿರುವ ಆರೋಪದಡಿ ಪತಿಯನ್ನು ಬೆಂಗಳೂರಿನ ಅಮೃತಹಳ್ಳಿ ಠಾಣೆ ಪೊಲೀಸರು ಇತ್ತೀಚಿಗೆ ಬಂಧಿಸಿದ್ದರು. ಅಂಜಲಿ (22) ಹತ್ಯೆಯಾದವರು. ಪತಿ ರವಿಚಂದ್ರ ಅವರನ್ನು ಕೊಲೆ ಮಾಡಿದ ಆರೋಪದಡಿ ಬಂಧಿಸಲಾಗಿತ್ತು. ಅಮೃತಹಳ್ಳಿಯ ಗಂಗಮ್ಮ ಬಡಾವಣೆಯ ಮನೆಯೊಂದರಲ್ಲಿ ಶುಕ್ರವಾರ ಬೆಳಗ್ಗೆ ಕೃತ್ಯ ನಡೆದಿದೆ.

ಪಾವಗಡದ ಅಂಜಲಿ ಹಾಗೂ ಯಾದಗಿರಿಯ ಸುರಪುರ ಮೂಲದ ರವಿಚಂದ್ರ ಇಬ್ಬರಿಗೆ ಈ ಹಿಂದೆ ಪ್ರತ್ಯೇಕವಾಗಿ ಮದುವೆಯಾಗಿತ್ತು. ವೈಯಕ್ತಿಕ ಕಾರಣಕ್ಕಾಗಿ ದೂರವಾಗಿದ್ದು, ಇಬ್ಬರೂ ಕೆಲ ತಿಂಗಳ ಹಿಂದಷ್ಟೇ ಎರಡನೇ ವಿವಾಹ ಮಾಡಿಕೊಂಡಿದ್ದರು. ರವಿಚಂದ್ರ ಟ್ರಾವೆಲ್ಸ್‌ವೊಂದರಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದರೆ, ಪತ್ನಿ ಅಂಜಲಿ ತರಕಾರಿ ವ್ಯಾಪಾರ ಮಾಡುತ್ತಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದರು.

ಮೂರು ತಿಂಗಳ ಹಿಂದೆ ಅಮೃತಹಳ್ಳಿಗೆ ಬಂದು ಬಾಡಿಗೆ ಮನೆಯಲ್ಲಿ ದಂಪತಿ ವಾಸವಾಗಿದ್ದರು. ಕೆಲಸದ ನಿಮಿತ್ತ ಕೆಲಸಕ್ಕೆ ಹೋದರೆ ಎರಡು-ಮೂರು ದಿನವಾದರೂ ಮನೆಗೆ ಬರುತ್ತಿರಲಿಲ್ಲ. ಈ ಮಧ್ಯೆ ಅಂಜಲಿ ಬೇರೆ ಯುವಕನೊಂದಿಗೆ ಸಂಬಂಧ ಹೊಂದಿರುವ ಬಗ್ಗೆ ಆರೋಪಿ ಸಂಶಯಪಟ್ಟಿದ್ದ. ಕೆಲಸ ಮುಗಿಸಿ ಶುಕ್ರವಾರ ಮನೆಗೆ ಬಂದಾಗ ಪತ್ನಿಯೊಂದಿಗೆ ಯುವಕ ಇರುವುದನ್ನು ನೋಡಿ ಕೆಂಡಕಾರಿದ್ದ. ಆಕ್ರೋಶಗೊಂಡು ಕೈಯಿಂದ ಬಲವಾಗಿ ಎದೆ ಹಾಗೂ ಕೈ-ಕಾಲುಗಳಿಗೆ ಹೊಡೆದು ಹತ್ಯೆ ಮಾಡಿ ಎಸ್ಕೇಪ್ ಆಗಿದ್ದ. ಪಕ್ಕದ ಮನೆಯವರು ಬಂದು ನೋಡಿ ಕೂಡಲೇ ಆಸ್ಪ್ರತ್ರೆ ಸೇರಿಸಿದರೂ ಮಾರ್ಗ ಮಧ್ಯೆ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ಧರು.

Star Of Kudla

Learn More →

Leave a Reply

Your email address will not be published. Required fields are marked *